ಸುರತ್ಕಲ್: ನವಮಂಗಳೂರು ಬಂದರು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ಮಾಡಲೆಂದು ಬಂದು ಮುಳುಗುವ ಭೀತಿಯಲ್ಲಿದ್ದ ಸಂದರ್ಭ ಗುಡ್ಡೆಕೊಪ್ಲ ಬಳಿ ತಂದು ನಿಲ್ಲಿಸಲಾಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್(ಹಡಗು)ನ್ನು ಗುಜರಿಗೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.
ಟೆಂಡರ್ ಮೂಲಕ ಗುತ್ತಿಗೆ ಪಡೆದ ಸೋನಾರ್ ಇಂಪೆಕ್ಸ್ ಕಂಪೆನಿಯು ಕಳೆದ ಒಂದು ವರ್ಷದಲ್ಲಿ ಹಡಗು ಒಡೆಯಲು ಪ್ರಯತ್ನ ನಡೆಸಿದ್ದು ಸ್ಥಳೀಯ ಇಲಾಖೆಗಳಿಂದ ಕೆಲವೊಂದು ತಾಂತ್ರಿಕ ಕಾರಣಗಳಿಂದ ಎನ್‌ಒಸಿ ಪಡೆಯಲು ಸಮಸ್ಯೆಯಾಗಿತ್ತು. ಸಿಆರ್‌ಝಡ್, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸಹಿತ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಇದೀಗ ದ.ಕ. ಜಿಲ್ಲಾಧಿಕಾರಿ ಹಡಗು ಒಡೆಯಲು ಎನ್‌ಒಸಿ ನೀಡಿದ ಮೇರೆಗೆ ಕಾರ್ಯ ಆರಂಭವಾಗಿದೆ.
4.5 ಕೋಟಿ ರೂ.ಗೆ ಗುತ್ತಿಗೆ ಪಡೆದಿರುವ ಸೋನಾರ್ ಕಂಪೆನಿ 50ಕ್ಕೂ ಅಧಿಕ ಕಾರ್ಮಿಕರ ತಂಡದೊಂದಿಗೆ ಹಡಗು ಒಡೆಯುವ ಕಾರ್ಯದಲ್ಲಿ ನಿರತವಾಗಿದೆ. 114 ಮೀ. ಉದ್ದ, 21 ಮೀ. ಅಗಲ, 9,400 ಸಾವಿರ ಟನ್ ತೂಕದ ಈ ಹಡಗನ್ನು ಒಡೆಯಲು ಐದಾರು ತಿಂಗಳು ತಗಲುವ ಸಾಧ್ಯತೆಯಿದೆ.
ಹೂಳೆತ್ತಲು ಬಂದಿತ್ತು
ಮುಂಬಯಿ ಮೂಲದ ಮರ್ಕೆಟರ್ ಕಂಪೆನಿಯು 2019ರಲ್ಲಿ ಹೂಳೆತ್ತುವ ಕಾರ್ಯಕ್ಕೆ ಎರಡು ಡ್ರೆಜ್ಜರ್‌ಗಳನ್ನು ನಿಯೋಜಿಸಿತ್ತು. ತಾಂತ್ರಿಕ ಕಾರಣದಿಂದ ಮಳೆಗಾಲದಲ್ಲಿ ಬಂದರು ಪ್ರವೇಶಿಸಲೂ ಸಾಧ್ಯವಾಗದೆ ಒಂದು ಡ್ರೆಜ್ಜರ್ ಭಾರೀ ಗಾಳಿ ಮಳೆಗೆ ಮುಳುಗಿದರೆ, ಭಗವತಿ ಪ್ರೇಮ್ ಮುಳುಗುವುದನ್ನು ತಪ್ಪಿಸಿ ರಾತೋರಾತ್ರಿ ಗುಡ್ಡೆಕೊಪ್ಲಕ್ಕೆ ತಂದು ಲಂಗರು ಹಾಕಿಸಲಾಗಿತ್ತು. ಬಳಿಕ ಸಮುದ್ರ ಮಾಲಿನ್ಯವಾಗದಂತೆ ಸೂಕ್ತ ಉಪಕ್ರಮಗಳನ್ನು ಕೈಗೊಂಡು ಫರ್ನೆಸ್ ತೈಲ, ಎಂಜಿನ್ ತೈಲವನ್ನು ಖಾಲಿ ಮಾಡಲಾಗಿತ್ತು. ಇದೀಗ ಹಡಗಿನಲ್ಲಿರುವ ಕಬ್ಬಿಣ, ತಾಮ್ರ ಸಹಿತ ವಿವಿಧ ಬಗೆಯ ಭಾಗಗಳನ್ನು ಗ್ಯಾಸ್ ಕಟ್ಟರ್ ಮೂಲಕ ಒಡೆಯಲಾಗುತ್ತದೆ.
Related Articles
ಕಾರ್ಮಿಕರು ನಿತ್ಯ ಸಣ್ಣ ಬೋಟಿನ ಮೂಲಕ ಹೋಗಿ ರಾತ್ರಿ ಮರಳುತ್ತಾರೆ. ಸ್ಥಳೀಯ ಮೀನುಗಾರರ ಬೋಟ್‌ಗಳನ್ನೇ ಇದಕ್ಕೆ ಬಳಸಲಾಗುತ್ತಿದೆ. ತುಂಡು ಮಾಡಿದ ಹಡಗಿನ ಭಾಗಗಳನ್ನು ಕಬ್ಬಿಣದ ರೋಪ್ ಮೂಲಕ ಎಳೆದು ದಡಕ್ಕೆ ತಂದು ಬಳಿಕ ಸಣ್ಣ ಭಾಗಗಳಾಗಿ ತುಂಡರಿಸಲಾಗುತ್ತದೆ.
ಯಾವುದೇ ಮಾಲಿನ್ಯಕ್ಕೆ ಎಡೆಯಿಲ್ಲದಂತೆ ತುಂಡರಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದು, ಶಾಸಕ ಡಾ| ಭರತ್ ಶೆಟ್ಟಿ, ಸೋನಾರ್ ಕಂಪೆನಿಯ ಪ್ರಮುಖರು ಮೀನುಗಾರರ ಹಿತ ಕಾಯುವ ಭರವಸೆ ನೀಡಿದ್ದಾರೆ.