ಸೊಂಪಾದ ಕಾಡು ಮರಗಳಿಂದ ಕೂಡಿದ ಪ್ರದೇಶದಲ್ಲಿ ಶಾಂತವಾದ ಸಿಹಿ ನೀರಿನ ಕೊಳ. ಅಲ್ಲಲ್ಲಿ ಚಿಕ್ಕ ಚಿಕ್ಕ ನಡುಗಡ್ಡೆಗಳು, ಬೆಳೆದ ಪೊದೆ-ಗಿಡಗಳು, ಕೆರೆಯ ತುಂಬಾ ಮೀನು- ಕಪ್ಪೆಗಳು…ಇದು ಶಿವಮೊಗ್ಗ ಜಿಲ್ಲೆಯ ಗುಡವಿ ಪಕ್ಷಿಧಾಮದಲ್ಲಿ ಕಾಣುವ ದೃಶ್ಯವೈಭವ. ಅನುಪಮ ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಜೀವ ವೈವಿಧ್ಯತೆಯಿಂದ ಪಕ್ಷಿಗಳನ್ನು, ಪಕ್ಷಿಪ್ರೇಮಿಗಳನ್ನು ಈ ಪಕ್ಷಿಧಾಮ ತನ್ನೆಡೆಗೆ ಆಕರ್ಷಿಸುತ್ತಿದೆ. ಬೂದು ಬಕ, ಕೊಳದ ಬಕ, ಬೆಳ್ಳಕ್ಕಿ, ಬಾಯಿಕಳಕ ಕೊಕ್ಕರೆ, ಚಮಚ ಕೊಕ್ಕಿನ ಹಕ್ಕಿ, ಕಪ್ಪು ತಲೆಯ ಬಿಳಿ ಕೊಕ್ಕರೆ, ಹಾವಕ್ಕಿ, ನೀರು ಕಾಗೆ ಹೀಗೆ ನೂರಾರು ಹಕ್ಕಿಗಳ ಕಲರವ ಕೇಳಿಸಿಕೊಳ್ಳಲು ಗುಡವಿಗೆ ಭೇಟಿ ನೀಡಲೇಬೇಕು. ಅರಣ್ಯ ಇಲಾಖೆಯ ಸುಪರ್ದಿಗೆ ಬರುವ ಈ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಪಕ್ಷಿಗಳ ನೈಸರ್ಗಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ವೀಕ್ಷಣಾ ಗೋಪುರಗಳು, ಕೆರೆಯ ಸುತ್ತ ಓಡಾಡಲು ಮಣ್ಣಿನ ರಸ್ತೆ, ಸೇತುವೆಗಳು ನಿರ್ಮಾಣಗೊಂಡಿವೆ.
ಹಕ್ಕಿಗಳ ಚಿಲಿಪಿಲಿ ಗಾನ…
ಪಕ್ಷಿಧಾಮಕ್ಕೆ ಪ್ರವೇಶಿಸುತ್ತಿದ್ದಂತೆ ವಿವಿಧ ಜಾತಿಯ ಪಕ್ಷಿಗಳ ತರಹೇವಾರಿ ಕೂಗು, ಗೂಡು ಕಟ್ಟಲು ಒಣ ಕಡ್ಡಿಗಳನ್ನು ತರುವ, ಮರಿಗಳಿಗೆ ಆಹಾರ ತರುವ ಹಕ್ಕಿಗಳ ಹಾರಾಟದ ರೆಕ್ಕೆ ಬಡಿತದ ಸದ್ದು, ಪರಸ್ಪರ ಕೊಕ್ಕು ತೀಡಿ ವ್ಯಕ್ತಪಡಿಸುವ ಪ್ರೀತಿ-ಪ್ರಣಯದ ಕೇಳಿ-ಕೇಕೆಗಳು, ಒಂದಕ್ಕೊಂದು ಕಾದಾಡಿ ಕಿರುಚುವ ಸದ್ದುಗಳು, ಮರಿ ಹಕ್ಕಿಗಳ ಕ್ಷೀಣ ದನಿಯ ಚೀರುವಿಕೆ, ಹಸಿವಿನ ಆಕ್ರಂದನಗಳಿಂದ ಮಾರ್ದನಿಸುತ್ತಿರುವ ಆ ಒಟ್ಟೂ ಪರಿಸರ ದೃಶ್ಯ ಮತ್ತು ದನಿಗಳು ಅದ್ಭುತ ಸ್ವರಮೇಳದಂತಿರುತ್ತದೆ. ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲಿ ದೂರದಿಂದ, ಬೇರೆ ಬೇರೆ ದೇಶಗಳಿಂದ ವಲಸೆ ಬರುವ ಈ ಹಕ್ಕಿಗಳ ಸಾಹಸಮಯ ಜೀವನಕ್ರಮ, ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುವುದರಲ್ಲಿ ಆಶ್ಚರ್ಯವಿಲ್ಲ.
ಖಗಗಳಿಂದ ಕಂಗೊಳಿಸುವ ಗುಡವಿ:
ಪ್ರತಿ ವರ್ಷ ಜೂನ್‌ನಲ್ಲಿ ಮುಂಗಾರು ಮಳೆ ಇಳೆಗಿಳಿಯುತ್ತಿದ್ದಂತೆ, ಗುಡವಿಯ ಕೆರೆಯಲ್ಲಿ ಹೊಸ ನೀರು ಹರಿಯುತ್ತಿದ್ದಂತೆ ಪ್ರವಾಹದೋಪಾದಿಯಲ್ಲಿ ಹಕ್ಕಿಗಳು ವಲಸೆ ಬರುತ್ತವೆ. ನಂತರ ನಿರ್ದಿಷ್ಟ, ಸುರಕ್ಷಿತವಾದ ಸ್ಥಳದಲ್ಲಿ, ನೀರಿನ ಮಧ್ಯೆ ಇರುವ ದಿಬ್ಬದ ಮರದ ಕೊಂಬೆಗಳ ಮೇಲೆ ಗೂಡು ಕಟ್ಟಲು ಆರಂಭಿಸುತ್ತವೆ. ಒಂದೊಂದೇ ಒಣ ಕಡ್ಡಿ, ಎಲೆಗಳನ್ನು ಆಯ್ದು ತಂದು ತಮ್ಮದೇ ಆದ ಪ್ರತ್ಯೇಕ ತೆರೆದ ಗೂಡುಗಳನ್ನು ನಿರ್ಮಿಸ ತೊಡಗುತ್ತವೆ. ಸಾಮಾನ್ಯವಾಗಿ ಜೂನ್-ಜುಲೈನಲ್ಲಿ ಹೋದರೆ ಈ ಪ್ರಕ್ರಿಯೆ ಕಾಣಸಿಗುತ್ತದೆ. ಈ ಸಮಯದಲ್ಲಿ ಗುಡವಿಯ ಅಭಯಾರಣ್ಯ ಬಣ್ಣಗಳು, ಶಬ್ದಗಳು ಮತ್ತು ಚಟುವಟಿಕೆಗಳ ಜೀವಂತ ಕ್ಯಾನ್ವಾಸ್‌ನಂತೆ ಕಂಗೊಳಿಸುತ್ತದೆ. ಪಕ್ಷಿಗಳು ಗೂಡು ಕಟ್ಟುವ ರೀತಿ, ಅದಕ್ಕಾಗಿ ಅವು ತೆಗೆದುಕೊಳ್ಳುವ ಶ್ರಮ, ಮರಿಗಳನ್ನು ಪಾಲಿಸಿ ಪೋಷಿಸುವ ರೀತಿ, ಅವುಗಳ ಸಾಂ ಕ ಬದುಕಿನ ಕ್ರಮ ಇವೆಲ್ಲವನ್ನೂ ಹತ್ತಿರದಿಂದ ವೀಕ್ಷಿಸಲು ಈ ಪಕ್ಷಿಧಾಮ ಅವಕಾಶ ಮಾಡಿಕೊಡುತ್ತದೆ.
ಹೆರಿಗೆ ಆಸ್ಪತ್ರೆಯಂತೆ…
ಆಗಸ್ಟ್ ತಿಂಗಳಿನಲ್ಲಿ ಅಲ್ಲಲ್ಲಿ ಗೂಡುಗಳಲ್ಲಿ ಮೊಟ್ಟೆಗಳನ್ನಿಟ್ಟು ಕಾವು ಕೊಡುವುದಕ್ಕೆ ಕುಳಿತ ಪಕ್ಷಿಗಳು, ಚಿಕ್ಕಚಿಕ್ಕ ಮರಿಗಳು ಕಾಣಸಿಗುತ್ತವೆ. ಅಕ್ಟೋಬರ್ ತಿಂಗಳಿನಲ್ಲಿ ರೆಕ್ಕೆ ಬಲಿತ ಮರಿಗಳ ಜೊತೆ ಮತ್ತೆ ವಲಸೆ ಹೊರಡುವ ಸಮಯ. ನವೆಂಬರ್ ನಂತರದಲ್ಲಿ ಎಲ್ಲವೂ ಬಣ ಬಣ. ಮತ್ತೆ ಗುಡವಿಯಲ್ಲಿ ಹಕ್ಕಿಗಳ ಕಲರವ ಆರಂಭವಾಗುವುದು ಮುಂದಿನ ಜೂನ್‌ನಲ್ಲಿಯೇ. ಜೂನ್‌ನಿಂದ ಅಕ್ಟೋಬರ್‌ವರೆಗೆ ಗುಡವಿ, ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಿರುತ್ತದೆ. ಗುಡವಿಯ ವೀಕ್ಷಣಾ ಗೋಪುರದಲ್ಲಿ ನಿಂತು ಈ ವೈಭವವನ್ನು ನೋಡುತ್ತಿದ್ದವನಿಗೆ ಕವಿ ಗೋಪಾಲಕೃಷ್ಣ ಅಡಿಗರ ಭೂಮಿಗೀತದ ಈ ಸಾಲುಗಳು ನೆನಪಾದವು…
ಬೇಲಿ ಮೇಗಡೆ/ಗದ್ದೆಯಂಚಲ್ಲಿ /ತೋಪುಗಳ ಅಂಗುಲಂಗುಲದಲ್ಲಿ/ತೋಟದೊಳಗೆ ಎಲ್ಲೆಲ್ಲೂ ಹೆರಿಗೆಮನೆ/ಬೇನೆ, ಸಂಕಟ, ನಗೆ/ಕೊರಡು ಚಿಗುರಿದ ಚೆಲುವು/ಚೀರು, ಕೇಕೆ
ಈ ವಲಸೆ ಹಕ್ಕಿಗಳೇ ಹೀಗೆ. ತಾವಿರುವೆಡೆ ಚಳಿಗಾಲ ಆರಂಭವಾಗುತ್ತಿದ್ದಂತೆ ಉಷ್ಣವಲಯದ ಕಡೆಗೆ ಪ್ರಯಾಣಿಸುತ್ತವೆ. ಆಹಾರದ ಲಭ್ಯತೆ, ಸುರಕ್ಷತೆ, ಗೂಡು ಕಟ್ಟುವ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು, ಪ್ರವಾಸದ ದೈಹಿಕ ಒತ್ತಡ, ದಾರಿಯುದ್ದಕ್ಕೂ ಸಾಕಷ್ಟು ಆಹಾರ ಸರಬರಾಜಿನ ಕೊರತೆ, ಕೆಟ್ಟ ಹವಾಮಾನ ಮತ್ತು ಪರಭಕ್ಷಕಗಳ ಭಯ ಮುಂತಾದ ಅಪಾಯಗಳನ್ನು ಎದುರಿಸುತ್ತಲೇ ಸಾವಿರಾರು ಮೈಲಿ ದೂರ ಹಾರುತ್ತವೆ. ಪ್ರತಿ ವರ್ಷ ಒಂದೇ ಸ್ಥಳ ನಿಗದಿ ಮಾಡಿಕೊಂಡು ಅದೇ ಪರಿಸರಕ್ಕೆ ಬರುತ್ತವೆ. ಇಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು, ಮರಿ ಮಾಡಿ, ಮರಿಗಳ ರೆಕ್ಕೆ ಬಲಿಯುತ್ತಿದ್ದಂತೆ, ಇಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮತ್ತೆ ತಮ್ಮ ಮೂಲ ನೆಲೆಗೆ ಹಾರುತ್ತವೆ.
ಪ್ರವಾಸಿಗರಿಗೆ ಸೂಚನೆ:
ಗುಡವಿ ಪಕ್ಷಿಧಾಮ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ. ಗುಡವಿ ಒಂದು ಚಿಕ್ಕ ಹಳ್ಳಿ. ಅಲ್ಲಿ ವಸತಿ ಸೌಕರ್ಯಗಳಾಗಲಿ, ರೆಸ್ಟೋರೆಂಟ್‌ಗಳಾಗಲಿ ಇಲ್ಲ. ಶಿವಮೊಗ್ಗ ಅಥವಾ ಸಾಗರದಲ್ಲಿ ಉಳಿದು ಗುಡವಿಗೆ ಹೋಗಿಬರುವುದು ಸೂಕ್ತ. ಸಾಗರದಿಂದ 41 ಕಿ.ಮೀ., ಸೊರಬದಿಂದ 16 ಕಿ.ಮೀ. ದೂರದಲ್ಲಿದೆ ಗುಡವಿ. ಶಿವಮೊಗ್ಗ-ಸೊರಬ ಮಾರ್ಗವಾಗಿ ಬರುವವರು ಬಳ್ಳಿಗಾವಿಯ ಕೇದಾರನಾಥ ದೇವಾಲಯವನ್ನೂ ಸಂದರ್ಶಿಸಬಹುದು. ಸಾಗರದ ಮೂಲಕ ಬರುವ ಪ್ರವಾಸಿಗರು, ಜೋಗ ಜಲಪಾತ, ಇಕ್ಕೇರಿ, ಕೆಳದಿ ದೇವಾಲಯಗಳನ್ನು ನೋಡುವ ಅವಕಾಶವಿದೆ. ಶಿರಸಿ, ಬನವಾಸಿಯೂ ಗುಡವಿಗೆ ಹತ್ತಿರದಲ್ಲಿದೆ. ಈ ಪಕ್ಷಿಧಾಮಕ್ಕೆ ಭೇಟಿ ನೀಡಲು ಜೂನ್‌ನಿಂದ ಅಕ್ಟೋಬರ್ ತಿಂಗಳು ಉತ್ತಮ ಸಮಯ.
-ಚಿತ್ರ ಲೇಖನ: ಜಿ.ಆರ್. ಪಂಡಿತ್, ಸಾಗರ