Advertisement

ಪ್ರಕಾಶ ಕಡಪಟ್ಟಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ

08:36 AM Jul 12, 2019 | Suhan S |

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಹಿರಿಯ ವೃತ್ತಿ ರಂಗಭೂಮಿ ಕಲಾವಿದ, ನಾಟಕಕಾರ ಪ್ರಕಾಶ ಕಡಪಟ್ಟಿ ಅವರಿಗೆ ರಾಜ್ಯ ಸರ್ಕಾರ ನೀಡುವ 2018ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಲಭಿಸಿದೆ.

Advertisement

ಬಾಲ್ಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು, ಸತತ ನಾಲ್ಕು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಜಿಲ್ಲೆಯ ಹಿರಿಯ ಕಲಾವಿದರನ್ನು ರಾಜ್ಯ ಸರ್ಕಾರ ಇದೀಗ ಗೌರವಿಸಿದೆ.

ಈ ಪ್ರಶಸ್ತಿಯು 5 ಲಕ್ಷ ರೂ ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು, ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾದಂತಾಗಿದೆ.

ಕಡಪಟ್ಟಿ ಗ್ರಾಮದ ವೇದಮೂರ್ತಿ ಶಂಕ್ರಯ್ಯ ಮತ್ತು ರಾಚವ್ವ ಅವರ ಪುತ್ರರಾಗಿ 1948ರಲ್ಲಿ ಜನಿಸಿದ ಪ್ರಕಾಶ ಅವರು, ಪಿಯುಸಿ ವ್ಯಾಸಂಗ ಕಲಿತು, ತಂದೆಯಿಂದ ಬಳುವಳಿಯಾಗಿ ಬಂದಿದ್ದ ರಂಗಭೂಮಿ ಕ್ಷೇತ್ರಕ್ಕೆ ಬಂದವರು. ಕಲಿಯುಗದ ಕುಬೇರ ನಾಟಕದಲ್ಲಿ ರವಿ ಪಾತ್ರಧಾರಿಯಾಗಿ ಮಿಂಚಿದ ಅವರು, ತಮ್ಮ ಕಲಿಯುಗದ ಕುಬೇರ ನಾಟಕದ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನ ಗೆದ್ದಿದ್ದರು. ಆದರೆ, ಕುಬೇರನಾಗಿ ಪಾತ್ರದಲ್ಲಿ ಮಿಂಚಿದ್ದ ಇವರು, ಜೀವನದ ಸಂಧ್ಯಾ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಈಚೆಗೆ ಅವರ ಹುಟ್ಟೂರಿನಲ್ಲಿ ಗ್ರಾಮಸ್ಥರು, ಸ್ನೇಹಿತರು ಇವರ ಸಮಸ್ಯೆಗೆ ಸ್ಪಂದಿಸಿ, ದೇಣಿಗೆ ಎತ್ತಿ ಆರ್ಥಿಕ ಸಹಾಯ ಮಾಡಿದ್ದರು.

Advertisement

ಸಧ್ಯ ಧಾರವಾಡ ಜಿಲ್ಲೆಯ ಇನಾಮಹಂಚಿನಾಳದಲ್ಲಿ ತಮ್ಮ ಪುತ್ರಿಯೊಂದಿಗೆ (ಅವರೂ ನಾಟಕ ಕಲಾವಿದರು) ನೆಲೆಸಿದ್ದಾರೆ. ಹಿಂದಿ ಸಿನಿಮಾ ಹಾಡುಗಳನ್ನು ನಾಟಕದಲ್ಲಿ ತಮ್ಮ ಶೈಲಿಯಲ್ಲಿ ಅಳವಡಿಸಿ, ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಪ್ರಕಾಶ ಅವರು, ಡಾ|ರಾಜಕುಮಾರ ಅವರಿಂದಲೂ ಶಬ್ಟಾಶ್‌ಗಿರಿ ಪಡೆದಿದ್ದರು. ಮಾಜಿ ಸಚಿವೆ ಉಮಾಶ್ರೀ ಸೇರಿ ಹಲವಾರು ರಂಗ ಕಲಾವಿದರಿಗೆ ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಪಡೆಯಲು ಇವರ ನಾಟಕಗಳೇ ಕಾರಣವಾಗಿದ್ದವು.ಮುದುಕನ ಮದುವೆ, ಚಿನ್ನದ ಗೊಂಬೆ, ಸತಿ ಸಂಸಾರದ ಜ್ಯೋತಿ, ಮನೆಗೆ ತಕ್ಕ ಮಗ, ಮುತ್ತೈದೆಗೆ ಕುತ್ತೈದು, ಭೂಮಿ ತೂಕದ ಹೆಣ್ಣು ಹೀಗೆ ಹಲವು ನಾಟಕ ರಚಿಸಿ, ತಾವೂ ಅಭಿನಯಿಸಿದ್ದಾರೆ. ಇವರು ರಚಿಸಿದ ಬಂಗಾರದ ಮನುಷ್ಯ, ತವರು ಬಿಟ್ಟ ತಂಗಿ, ಮದನಮೋಹ, ಕಣ್ಣು ಕೊಟ್ಟ ತಂಗಿ, ಗರತಿ ಗೆದ್ದಳು-ಸವತಿ ಸೋತಳು, ಪಣ ತೊಟ್ಟ ಪತಿವ್ರತೆ ಸೇರಿದಂತೆ ಹಲವಾರು ನಾಟಕಗಳನ್ನು ಕಲಾಸಕ್ತರು ಇಂದಿಗೂ ಸ್ಮರಿಸುತ್ತಾರೆ.

ಜೀವನದ ಸಂಧ್ಯಾ ಕಾಲದಲ್ಲಿ ಕಷ್ಟಪಡುತ್ತಲೇ ಬದುಕಿನ ಬಂಡಿ ಸಾಗುತ್ತಿರುವ ಪ್ರಕಾಶ ಕಡಪಟ್ಟಿ ಅವರಿಗೆ ಇದೀಗ ರಾಜ್ಯ ಸರ್ಕಾರ, ಗುರುತಿಸಿ, ಉತ್ತಮ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಿದ್ದು, ಕಡಪಟ್ಟಿ ಗ್ರಾಮಸ್ಥರು ಹಾಗೂ ಜಿಲ್ಲೆಯ ವೃತ್ತಿ ರಂಗಭೂಮಿ ಕಲಾವಿದರಿಗೆ ಸಂಭ್ರಮ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next