Advertisement

ಗ್ಯಾರಂಟಿ ಯೋಜನೆಯಿಂದ ಇತರೆ ಕಾರ್ಯಕ್ರಮಗಳಿಗೆ ಅಡ್ಡಿಯಾಗದು: ಎಂ.ಬಿ.ಪಾಟೀಲ್

12:33 PM Jun 04, 2023 | keerthan |

ವಿಜಯಪುರ: ಭಾರತ ಮಾತ್ರವಲ್ಲ ವಿಶ್ವವೇ ಕನ್ನಡ ನಾಡಿನತ್ತ ನೋಡುವಂತೆ ಮತ್ತೊಮ್ಮೆ ಕರ್ನಾಟಕವನ್ನು ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಬದ್ಧತೆ ತೋರಲಿದೆ. ಘೋಷಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಇತರೆ ಕಾರ್ಯಕ್ರಮಳಿಗೆ ಅರ್ಥಿಕ ಸಮಸ್ಯೆ ಆಗದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯಗಳ ಇಲಾಖೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಸಚಿವರಾದ ಬಳಿಕ ಮೊದಲ ಬಾರಿ ತವರಿಗೆ ಆಗಮಿಸಿದ ಅವರು, ಭಾನುವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಅನುದಾನದ ಜೊತೆ, ಇತರೆ ಯೋಜನೆ, ಅಭಿವೃದ್ಧಿಗೆ ತೊಡಕಾಗದು. ಇತರೆ ಕಾರ್ಯಕ್ರಮಗಳಿಗೆ ಅಗತ್ಯದ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವಲ್ಲಿ ಆರ್ಥಿಕ ಸಚಿವರಾಗಿ 11 ಬಜೆಟ್ ಮಂಡಿಸಿದ ಅನುಭವಿ ಚಾಣಾಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದರು.

ಸಿದ್ಧೇಶ್ವರ ಶ್ರೀಗಳ ಆಶಯದಂತೆ ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲೆಯ ಸಮಗ್ರ ನೀರಾವರಿಗೆ ಆದ್ಯತೆ ನೀಡಿದ್ದೆ. ಭವಿಷ್ಯದಲ್ಲೂ ನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಪ್ರಾಮಾಣಿಕ ಸೇವೆ ಮುಂದುವರೆಸುತ್ತೇನೆ ಎಂದರು.

ಒಂದೆಡೆ ನೀರು, ಮತ್ತೊಂದೆಡೆ ಉದ್ಯೋಗ ಸೃಷ್ಟಿ ಎರಡೂ ಮಹತ್ವವಿದೆ. ಮತ್ತೊಮ್ಮೆ ನಾನು ಜಲಸಂಪನ್ಮೂಲ ಸಚಿವನಾಗುವ ಇಚ್ಚೆ ಇದ್ದರೂ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಮನದಾಳದ ಮಾತು ಬಿಚ್ಚಿಟ್ಟ ಸಚಿವ ಎಂ.ಬಿ.ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಉದ್ಯೋಗ ಸೃಷ್ಟಿಸುವ ಅವಕಾಶ ಇರುವ ಬೃಹತ್ ಮಧ್ಯಮ ಕೈಗಾರಿಕೆ ಇಲಾಖೆ ಸಚಿವ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ನನ್ನ ಇಲಾಖೆ ಅಧೀನದಲ್ಲಿ ಬರುವ ಇಲಾಖೆ ಅಧೀನ ಹಾಗೂ ನಿಗಮಗಳ ಅಧಿಕಾರಿಗಳ ಸಭೆ ಮಾಡಿದ್ದೇನೆ. ಒಂದು ವಾರದಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸೃಷ್ಟಿಗೆ ಇರುವ ಅವಕಾಶಗಳ ಕುರಿತು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ತೆಲಂಗಾಣದ ಏಕಗವಾಕ್ಷಿ ಮಾದರಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇರುವ ಸರಳೀಕೃತ ಮಾದರಿ ಕುರಿತು ಮಾಹಿತಿ ಪಡೆಯುವ ಕುರಿತು ಚರ್ಚಿಸಲಾಗಿದೆ. ರಾಜ್ಯದ ಆಯಾ ಜಿಲ್ಲೆಗಳ ಅಗತ್ಯಕ್ಕೆ ತಕ್ಕಂತೆ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ನಿರುದ್ಯೋಗ ನಿವಾರಣೆಗೆ ನಮ್ಮ ಸರ್ಕಾರದಲ್ಲಿ ಆದ್ಯತೆ ನೀಡಲಾಗುತ್ತದೆ ಎಂದರು.

ಇದಲ್ಲದೆ ನನಗೆ ವಹಿಸಿರುವ ಮೂಲಭೂತ ಸೌಲಭ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಾಳೆ ಬೆಂಗಳೂರಿನಲ್ಲಿ ಕರೆಯಲಾಗಿದೆ. ರಾಜ್ಯದ ವಿಮಾನ ನಿಲ್ದಾಣ, ರೈಲ್ವೇ ಹಾಗೂ ಇತರೆ ಯೋಜನೆಗಳ ತ್ವರಿತಕ್ಕೆ ಹಾಗೂ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪರಿಶಿಷ್ಟ ಸಮುದಾಯಗಳ ಅನುದಾನ ಸದ್ಬಳಕೆ ಕುರಿತು ಹಿಂದಿನ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿತು. ಬಿಜೆಪಿ ಸರ್ಕಾರದಲ್ಲಿ ಮಾಡಲಾದ ಕಾನೂನು, ನಿಯಮ ಬಾಹೀರ ಮೀಸಲಾತಿ ಹೆಚ್ಚಳ, ಸಮುದಾಯಗಳಿಗೆ ಮಾಡಿದ ಮಹಾ ಮೋಸ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು, ಒಪ್ಪಿಗೆ ಪಡೆದ ಬಳಿಕ ರಾಜ್ಯದಲ್ಲಿ ಮೀಸಲು ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಸರ್ಕಾರದಲ್ಲಿ ಅಂದಾಜು ಪಟ್ಟಿ ರೂಪಿಸುವಲ್ಲೇ ಮೊತ್ತ ಹೆಚ್ಚಳ ಮಾಡಿರುವ ದೊಡ್ಡ ಮಟ್ಟದ ಭ್ರಷ್ಟಾಚಾರ, ಶೇ.40 ಕಮೀಷನ್ ಹೀಗೆ ಹಿಂದಿನ ಸರ್ಕಾರದಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರದ ತನಿಖೆ ಮಾಡಲಾಗುತ್ತದೆ ಎಂದು ಪುನರುಚ್ಚರಿಸಿದರು.

ಬೋಗಸ್ ಮತದಾರರ ಮೂಲಕ ವಿಜಯಪುರ ನಗರದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ ಗೆಲುವು ಖಚಿತವಾಗಿತ್ತು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next