ಬೆಂಗಳೂರು: ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಜಾರಿಗೆ ತರಲಾಗಿರುವ ಐದು “ಗ್ಯಾರಂಟಿ’ ಯೋಜನೆಗಳು ಸಂವಿಧಾನ ಮತ್ತು ಚುನಾವಣ ಆಯೋಗದ ನಿಯಮ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಗ್ಯಾರಂಟಿಗಳ ಹೆಸರಲ್ಲಿ ಮತದಾರರಿಗೆ ಆಮಿಷವೊಡ್ಡುವ ಮೂಲಕ ಚುನಾವಣ ಅಕ್ರಮ ಎಸಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ವರುಣಾ ಹೋಬಳಿಯ ಕೂಡನಹಳ್ಳಿ ಗ್ರಾಮದ ನಿವಾಸಿ ಕೆ.ಎಂ. ಶಂಕರ್ ಸಲ್ಲಿಸಿರುವ ಚುನಾವಣ ತಕರಾರು ಅರ್ಜಿಗೆ ಮುಖ್ಯಮಂತ್ರಿಗಳು ಹೈಕೋರ್ಟ್‌ಗೆ ಸಲ್ಲಿಸಿರುವ ಲಿಖೀತ ಪ್ರಮಾಣಪತ್ರದಲ್ಲಿ ಗ್ಯಾರಂಟಿ ಘೋಷಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಅರ್ಜಿಯು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಿಖೀತ ಹೇಳಿಕೆಯನ್ನು ದಾಖಲೆಗೆ ತೆಗೆದುಕೊಂಡ ನ್ಯಾಯಪೀಠ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತು.
ಲಿಖೀತ ಹೇಳಿಕೆಯಲ್ಲಿ ಏನಿದೆ?
ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವ ನಿಧಿ ಕಾರ್ಯಕ್ರಮಗಳನ್ನು ರಾಜ್ಯದ ಕೋಟ್ಯಂತರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ರೂಪಿಸಲಾಗಿದೆ. ರಾಜ್ಯದ ನಾಗರಿಕರ ಹಾಗೂ ವಿಶೇಷವಾಗಿ ಮಹಿಳೆಯರ ಸಬಲೀಕರಣ ಮತ್ತು ಉನ್ನತೀಕರಣದ ವಿಶಾಲ ಧ್ಯೇಯದೊಂದಿಗೆ ಗ್ಯಾರಂಟಿ ಯೋಜನೆಗಳನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಚುನಾವಣ ಪ್ರಣಾಳಿಕೆಯ ಭಾಗವಾಗಿದೆ. ಪ್ರಣಾಳಿಕೆ ವೈಯುಕ್ತಿಕ ಘೋಷಣೆ ಆಗಿರುವುದಿಲ್ಲ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ.
ಪ್ರಣಾಳಿಕೆಯ ಮಹತ್ವವನ್ನು ಎಸ್.ಆರ್. ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 1994ರಲ್ಲಿ ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ. ಚುನಾವಣ ಪ್ರಣಾಳಿಕೆಯ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು ಸಿದ್ದರಾಮಯ್ಯ ತಮ್ಮ ಲಿಖೀತ ಹೇಳಿಕೆಯಲ್ಲಿ ವಿವರಿಸಿದ್ದಾರೆ.
Related Articles
ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಚುನಾವಣ ಅಕ್ರಮ ನಡೆಸಲಾಗಿದೆ ಎಂಬ ಅರ್ಜಿದಾರರ ಆರೋಪ ಸಂಪೂರ್ಣ ಸುಳ್ಳು. ಅರ್ಜಿದಾರರ ಈ ವಾದವು ಪ್ರಜಾಪ್ರತಿನಿಧಿ ಕಾಯ್ದೆಯ ತತ್ವಗಳಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ನನ್ನ ವಿರುದ್ಧವಲ್ಲದೇ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರ ವಿರುದ್ಧ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಗೆ ಯೋಗ್ಯವಲ್ಲದ, ಸೂಕ್ತ ಕಾನೂನು ತಿಳಿವಳಿಕೆ ಇಲ್ಲದ, ಕೇವಲ ಕ್ಷುಲ್ಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಇಂತಹ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ತಮ್ಮ ಲಿಖೀತ ಹೇಳಿಕೆಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.