Advertisement

ಜಿಟಿಡಿ ಬೆಂಬಲಿಗನಿಗೆ ಎಚ್‌ಡಿಕೆ ಕಪಾಳಮೋಕ್ಷ?

10:21 AM May 11, 2017 | |

ಮೈಸೂರು: ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಜಿಲ್ಲಾ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಈ ಸಂಬಂಧ ಜಿ.ಟಿ.ದೇವೇಗೌಡರ ಬೆಂಬಲಿಗ ಪ್ರೇಮಕುಮಾರ್‌ ಎಂಬುವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಕಪಾಳಮೋಕ್ಷ ಮಾಡಿದ ಪ್ರಸಂಗ ನಡೆದಿದೆ. ಆದರೆ, “ಕಪಾಳ ಮೋಕ್ಷ ಮಾಡಿಲ್ಲ’ ಎಂದು ಕುಮಾರಸ್ವಾಮಿ ಹಾಗೂ ಪ್ರೇಮಕುಮಾರ್‌ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

Advertisement

ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಕನ್ವೆನÒನ್‌ ಹಾಲ್‌ನಲ್ಲಿ ಬುಧವಾರ ಜೆಡಿಎಸ್‌ನ ಬೂತ್‌ಮಟ್ಟದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಪಕ್ಷದ ರಾಜಾÂಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ, ಹುಣಸೂರಿನಿಂದ ಬಂದಿದ್ದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಜಿ.ಟಿ.ದೇವೇಗೌಡರ ಬೆಂಬಲಿಗರು ಅಡ್ಡಗಟ್ಟಿ, ಜಿ.ಟಿ.ದೇವೇಗೌಡ ಅಥವಾ ಅವರ ಮಗ ಜಿ.ಡಿ.ಹರೀಶ್‌ ಗೌಡರಿಗೆ ಹುಣಸೂರು ಕ್ಷೇತ್ರದಿಂದ ಪಕ್ಷದ ಟಿಕೆಟ್‌ ನೀಡುವಂತೆ ಆಗ್ರಹಿಸಿದರು.

ಹುಣಸೂರು ಕ್ಷೇತ್ರದ ಜೊತೆ ಜಿ.ಟಿ.ದೇವೇಗೌಡರ ಕುಟುಂಬ ನಿರಂತರ ಒಡನಾಟ ಇಟ್ಟುಕೊಂಡಿದ್ದು, ಅವರ ಕುಟುಂಬ ಸದಸ್ಯರಿಗೇ ಟಿಕೆಟ್‌ ನೀಡಬೇಕು. ಏಕಾಏಕಿ ಹೊರಗಿನವರನ್ನು ಕರೆ ತರುವುದು ಸರಿಯಲ್ಲ. ಅಲ್ಲದೆ, ಶಾಸಕ ಸಾ.ರಾ.ಮಹೇಶ್‌ ಅವರು ಕೆ.ಆರ್‌.ನಗರದಲ್ಲಿ ತಮಗೆ ಪ್ರಬಲ ಎದುರಾಳಿ ಇಲ್ಲದಂತೆ ನೋಡಿಕೊಳ್ಳಲು ಎಚ್‌.ವಿಶ್ವನಾಥ್‌ ಅವರನ್ನು ಹುಣಸೂರಿಗೆ ಸಾಗಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಕೃತ್ಯದ ಹಿಂದೆ ಸ್ವಾರ್ಥ ಅಡಗಿದೆ. ಮತ್ತೂಂದೆಡೆ ಪ್ರಜ್ವಲ್‌ ರೇವಣ್ಣ ಕೂಡ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಕ್ಷೇತ್ರದ ಕಾರ್ಯಕರ್ತರಿಗೆ ನಾಯಕತ್ವವಿಲ್ಲದೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.

ಅಲ್ಲದೆ, ಹರೀಶ್‌ಗೇ ಟಿಕೆಟ್‌ ನೀಡುವಂತೆ ರಂಪಾಟ ನಡೆಸಿದರು. ಇದರಿಂದ ಕುಪಿತಗೊಂಡ ಕುಮಾರಸ್ವಾಮಿ ಅವರು ಹುಣಸೂರು ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಎಚ್‌.ಪ್ರೇಮಕುಮಾರ್‌ ಎಂಬುವರಿಗೆ ಕಪಾಳ ಮೋಕ್ಷ ಮಾಡಿದರು. “ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಪಕ್ಷ ಸೂಚಿಸಿದ ಅಭ್ಯರ್ಥಿಯ ಗೆಲುವಿಗೆ ದುಡಿಯಿರಿ. ನಾನು ಇಷ್ಟೆಲ್ಲಾ ಹೇಳಿದ ಮೇಲೆ ಯಾರು ಅಭ್ಯರ್ಥಿ ಎಂಬುದು ತಮಗೆ ಗೊತ್ತಾಗಿರಬಹುದು’ ಎಂದು ವಿಶ್ವನಾಥ್‌ ಹೆಸರು ಪ್ರಸ್ತಾಪಿಸದೆ ಹೇಳಿದರು.

ಜಿಟಿಡಿ ಗೈರು
ಈ ಮಧ್ಯೆ, ಪಕ್ಷದ ಇತ್ತೀಚಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಜಿ.ಟಿ.ದೇವೇಗೌಡ ಮತ್ತವರ ಕುಟುಂಬ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದೆ. ಬುಧವಾರ ನಡೆದ ಸಭೆಗೆ ಅವರ ಕುಟುಂಬದಿಂದ ಯಾರೊಬ್ಬರೂ ಬಂದಿರಲಿಲ್ಲ. ಜತೆಗೆ, ಎಚ್‌.ಡಿ.ಕೋಟೆ ಶಾಸಕ ಎಸ್‌.ಚಿಕ್ಕಮಾದು ಅವರು ಗೈರಾಗಿದ್ದರು.

Advertisement

ಯಾವ ಕಾರ್ಯಕರ್ತನಿಗೂ ನಾನು ಕಪಾಳಮೋಕ್ಷ ಮಾಡಿಲ್ಲ. ಸಭೆ ಮುಗಿದ ನಂತರ ಹುಣಸೂರಿನಿಂದ ಬಂದಿದ್ದ ಜಿಪಂ, ತಾಪಂ ಸದಸ್ಯರು ಶುಭ ಕೋರಿ, ಜಿ.ಟಿ.ದೇವೇಗೌಡರಿಗೆ ಟಿಕೆಟ್‌ ನೀಡಿ ಎಂದು ಏರಿದ ಧ್ವನಿಯಲ್ಲಿ ಕೂಗಾಡಿದರು. ಕೆಲವರು ಕಾಲಿಗೂ ಬಿದ್ದರು. ಈ ವೇಳೆ, ಕೊಠಡಿಯೊಳಗೆ ಕುಳಿತು ಮಾತನಾಡೋಣ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದೆ. ವಿನಾ ಕಪಾಳಮೋಕ್ಷ ಮಾಡಲಿಲ್ಲ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ 

ಜಿ.ಟಿ.ದೇವೇಗೌಡರ ಕುಟುಂಬದ ಒಬ್ಬರಿಗೆ ಹುಣಸೂರಿನಿಂದ ಟಿಕೆಟ್‌ ಘೋಷಣೆ ಮಾಡಿ ಎಂದು ಪಟ್ಟು ಹಿಡಿದಾಗ ಅವರ ಎಂದಿನ ಶೈಲಿಯಲ್ಲಿ “ಹೇಳು ಬ್ರದರ್‌’ ಎನ್ನುತ್ತಾ ಪ್ರೀತಿಯಿಂದ ಮಾತನಾಡಿಸಲು ಕೆನ್ನೆ ಸವರಿದರು. ಕಪಾಳಮೋಕ್ಷ ಮಾಡಲಿಲ್ಲ. ಚುನಾವಣೆ ವಿಷಯದಲ್ಲಿ ಜಿ.ಟಿ.ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.
– ಪ್ರೇಮಕುಮಾರ್‌ ಎಚ್‌. ಹುಣಸೂರು ತಾಪಂ ಉಪಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next