ಮೈಸೂರು: ಚಾಮರಾಜನಗರದಲ್ಲಿ 24 ಜನರಿಗೆ ಆಕ್ಸಿಜನ್ ಇಲ್ಲದೆ ಮೃತಪಟ್ಟ ಸುದ್ದಿ ದೇಶಾದ್ಯಂತ ಹರಡಿತ್ತು. ಈ ಸಂಬಂಧ ಚಾಮರಾಜನಗರ ನಗರದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
ಜಲದರ್ಶಿನಿ ಅಥಿತಿ ಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿರುವ ಅವರು ಮೈಸೂರು ನಗರ, ಜಿಲ್ಲೆ, ಚಾಮರಾಜನಗರ ,ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಆಕ್ಸಿಜನ್ ಸಿಕ್ಕುತ್ತಿಲ್ಲ. ರಾಜ್ಯದಲ್ಲಿ ಆಕ್ಸಿಜನ್ ವಾರ್ ನಡೆಯುತ್ತಿದೆ ಆದರೆ ಆಡಳಿತ ವರ್ಗ, ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ ಎಂದರು.
ಮೈಸೂರಿಗೆ ಮಹಾರಾಜರ ಕೊಡುಗೆ ಅಪಾರ. ಅವರು ಕೊಟ್ಟ ಆಸ್ಪತ್ರೆಗಳಿಂದ ಬೇರೆ ಬೇರೆ ಕಡೆಗಳಿಂದ ರೋಗಿಗಳು ಮೈಸೂರಿಗೆ ಬರುತ್ತಿದ್ದಾರೆ ಎಂದ ಅವರು ದಿನನಿತ್ಯ ಮೈಸೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಬರುತ್ತಿದೆ. ಸರ್ಕಾರಿ, ಖಾಸಗಿ ಸೇರಿ 7 ಸಾವಿರ ಬೆಡ್ ವ್ಯವಸ್ಥೆ ಇದೆ. 70 ಮೆಟ್ರಿಕ್ ಟನ್ ಆಕ್ಸಿಜನ್ ಮೈಸೂರಿಗೆ ಬೇಕು. ಸದ್ಯ 30 ಮೆಟ್ರಿಕ್ ಟನ್ ಮಾತ್ರ ಮೈಸೂರಿಗೆ ಬರುತ್ತಿದೆ ಎಂದು ಹೇಳಿದರು.
ಸದರನ್ ಆಕ್ಸಿಜನ್ ಪ್ಲಾಂಟ್ ನಲ್ಲಿ 300 ಸಿಲಿಂಡರ್ ಉತ್ಪಾದನೆ ಇದೆ. ಮೈಸೂರಿಗೆ 2500 ಜಂಬೂ ಸಿಲಿಂಡರ್ ಬೇಕು. ಮೈಸೂರು ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕು ಅನ್ನೋದನ್ನು ಸರ್ಕಾರ ನಿಗದಿ ಮಾಡಿಲ್ಲ ಎಂದು ಆರೋಪಿಸಿದ ಅವರು ಮೈಸೂರಿನಿಂದ ಪೊಲೀಸ್ ಪೋರ್ಸ್ ತಂದು 350 ಸಿಲಿಂಡರ್ ಅನ್ನು ಮಂಡ್ಯದ ಉಸ್ತುವಾರಿ ಸಚಿವ ನಾರಾಯಣ ಗೌಡ ತಗೆದುಕೊಂಡು ಹೋಗಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಯಾವ ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕು ಎಂದು ನಿಗದಿ ಮಾಡಿಲ್ಲ. ನೀವು ಯಾರ ಮೇಲೆ ಕ್ರಮ ಕೈಗೊಳ್ಳುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಇದನ್ನೂ ಓದಿ:ಶಂಖನಾದ ಅರವಿಂದ್ ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ
ಕೇಂದ್ರದಿಂದ ರಾಜ್ಯಕ್ಕೆ ಇಂತಿಷ್ಟು ಆಕ್ಸಿಜನ್ ಕೊಡಬೇಕು ಎಂದು ನಿಗದಿ ಮಾಡಲಾಗಿದೆ. ಆದರೆ ಜಿಲ್ಲಾವಾರು ನಿಗದಿ ಮಾಡಿಲ್ಲ. ಅಧಿಕಾರಿಗಳು, ಸರ್ಕಾರ ಎನು ಮಲಗಿದೆಯೇ ಎಂದು ಪ್ರಶ್ನಿಸಿದ ಅವರು ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ ಎಂದು ನುಡಿದರು.
ನರೇಂದ್ರ ಮೋದಿ ಜನಪ್ರೀಯತೆ ಗಳಿಸಿ ಪ್ರಧಾನಿಗಳಾಗಿದ್ದಾರೆ. ಕೋವಿಡ್ ಕುರಿತು ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ನಮ್ಮಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿರುತ್ತಿರಲಿಲ್ಲ. ಮೇ.1 ರಿಂದ ಎಲ್ಲರಿಗೂ ವ್ಯಾಕ್ಸಿನೇಷನ್ ಕೊಡ್ತೀನಿ ಅಂದ್ರಿ. ಎಲ್ಲಿ ಕೊಟ್ಟಿದ್ದೀರಿ ಕೋವಿಡ್ ನಿಯಂತ್ರಣದ ಬಗ್ಗೆ ಪ್ರಧಾನಿಗಳು ವಿಪಲರಾಗಿದ್ದಾರೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದರು.