Advertisement
ಆರೋಗ್ಯ ಸುರಕ್ಷೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆರೋಗ್ಯ ವಿಮಾ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ವಿಮಾ ಪಾಲಿಸಿಗಳಿಗೂ ಜಿಎಸ್‌ಟಿ ವಿಧಿಸುವುದರಿಂದ ಜನಸಾಮಾನ್ಯರು ಆರೋಗ್ಯ ವಿಮಾ ಯೋಜನೆಯ ಪ್ರಯೋಜನ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ರಾಜ್ಯದ ಆರೋಗ್ಯ ಸಚಿವರ ಈ ಮನವಿಯನ್ನು ಕೇಂದ್ರ ಸರಕಾರ ಮತ್ತು ಜಿಎಸ್‌ಟಿ ಕೌನ್ಸಿಲ್ ಆದ್ಯತೆಯ ಮೇಲೆ ಪರಿಗಣಿಸಬೇಕು.
Related Articles
Advertisement
ದುಬಾರಿ ಪ್ರೀಮಿಯಂನಿಂದಾಗಿ ಜನಸಾಮಾನ್ಯರ ಪಾಲಿಗೆ ಈ ಆರೋಗ್ಯ ವಿಮೆ ಕೈಗೆಟುಕಲಾರದ ತುತ್ತಾಗಿದೆ. ಇದರಿಂದಾಗಿ ಕುಟುಂಬದ ಯಾವುದೇ ವ್ಯಕ್ತಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಬೇಕಾಗಿ ಬಂದಾಗ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಜಿಎಸ್‌ಟಿ ಕೌನ್ಸಿಲ್ ತೆರಿಗೆ ದರದ ಬಗ್ಗೆ ಮರು ಪರಾಮರ್ಶೆನಡೆಸುವ ತುರ್ತು ಅಗತ್ಯವಿದೆ. ಜಿಎಸ್‌ಟಿ ರದ್ದಾದಲ್ಲಿ ತಮಗೆ ಆದಾಯ ಖೋತಾ ಆಗುತ್ತದೆ ಎಂದು ಕೆಲವು ರಾಜ್ಯಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಆರೋಗ್ಯ ವಿಮೆಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಕಷ್ಟಸಾಧ್ಯವಾದರೆ ಕನಿಷ್ಠ ದರದ ಜಿಎಸ್‌ಟಿ ವ್ಯಾಪ್ತಿಗೆ ಆರೋಗ್ಯ ವಿಮೆಯನ್ನು ಸೇರ್ಪಡೆಗೊಳಿಸಬೇಕು. ಇದು ಅಸಾಧ್ಯವಾದಲ್ಲಿ ನಿರ್ದಿಷ್ಟ ಆದಾಯ ಮಿತಿ ಮತ್ತು ಆರೋಗ್ಯ ವಿಮಾ ಮೊತ್ತದ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ಪ್ರತ್ಯಪ್ರತ್ಯೇಕ ಜಿಎಸ್‌ಟಿ ದರವನ್ನು ನಿಗದಿಪಡಿಸಿ ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು. 2017ರಿಂದ ಆರೋಗ್ಯ ವಿಮೆಗೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿರುವು ದರಿಂದ ಈ ಕ್ಷೇತ್ರದಲ್ಲಿ ಅಷ್ಟೊಂದು ಬೆಳವಣಿಗೆ ಕಂಡುಬಂದಿಲ್ಲ. ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಆರೋಗ್ಯ ಸುರಕ್ಷೆಗೆ ಹೆಚ್ಚಿನ ಆದ್ಯತೆ ತೋರಿ ಸರಣಿ ಯೋಜನೆಗಳನ್ನು ಜಾರಿಗೊಳಿಸಿವೆ. ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡಿದ್ದೇ ಆದಲ್ಲಿ ಸರಕಾರಗಳ ನಿರೀಕ್ಷಿತ ಮತ್ತು ಉದ್ದೇಶಿತ ಗುರಿ ಸಾಧನೆಯನ್ನು ಮತ್ತಷ್ಟು ಸುಲಭಸಾಧ್ಯವಾಗಿಸಲಿದೆ.