ನವದೆಹಲಿ: ರಾಜ್ಯಗಳಿಗೆ 2022 ಜೂನ್‌ಗೆ ನೀಡಬೇಕಾಗಿರುವ 16,982 ಕೋಟಿ ರೂ. ಪಾವತಿ ಮಾಡುವ ಬಗ್ಗೆ ಜಿಎಸ್‌ಟಿ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಇದರಲ್ಲಿ ಕರ್ನಾಟಕದ ಪಾಲು 6,000 ಕೋಟಿ ರೂ ಆಗಿದೆ.
ಈ ಮೊತ್ತವನ್ನು ರಾಜ್ಯಗಳಿಗೆ ನೀಡುವ ಮೂಲಕ ಜಿಎಸ್‌ಟಿ ಜಾರಿಯಾದ ವರ್ಷದಿಂದ ಐದು ವರ್ಷಗಳ ಕಾಲ ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರ ಮೊತ್ತವನ್ನು ನೀಡುವ ವಾಗ್ಧಾನವನ್ನು ಪೂರ್ತಿ ಮಾಡಿದಂತಾಗುತ್ತದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ನವದೆಹಲಿಯಲ್ಲಿ ನಡೆದ 49ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ರಾಜ್ಯಗಳಿಗೆ ಕೇಂದ್ರದ ವತಿಯಿಂದ ಇರುವ 2022ರ ಜೂನ್‌ನ ಬಾಕಿ 16,982 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರ ಹೊಂದಿರುವ ವಿತ್ತೀಯ ಸಂಪನ್ಮೂಲದಿಂದಲೇ ಪೂರ್ತಿ ಮೊತ್ತವನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ಅದನ್ನು ಸೆಸ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದರು.
ಪಾನ್ ಮಸಾಲಾ, ಗುಟ್ಕಾ ಕಂಪನಿಗಳು ತೆರಿಗೆ ವಂಚನೆ ಮಾಡುತ್ತಿರುವುದರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಉನ್ನತಾಧಿಕಾರದ ಸಚಿವರ ಸಮಿತಿ (ಜಿಒಎಂ)ಯ ವರದಿ, ಜಿಎಸ್‌ಟಿ ಮೇಲ್ಮನವಿ ಪ್ರಾಧಿಕಾರ ರಚನೆ ಮಾಡುವುದರ ಬಗ್ಗೆ ಇರುವ ವರದಿಯನ್ನು ಅಂಗೀಕರಿಸಲಾಗಿದೆ ಎಂದರು.
ಶೂನ್ಯಕ್ಕೆ ಇಳಿಕೆ:
ದ್ರವೀಕೃತ ಬೆಲ್ಲ (ರಾಬ್)ಕ್ಕೆ ಸದ್ಯ ಇರುವ ಜಿಎಸ್‌ಟಿ ಪ್ರಮಾಣ ಶೇ.18ರಿಂದ ಸೊನ್ನೆಗೆ ಇಳಿಕೆ ಮಾಡಲಾಗಿದೆ. ಬಿಡಿಯಾಗಿ ಮಾರುವುದಿದ್ದರೆ ಇದು ಅನ್ವಯ. ಅದನ್ನು ಪ್ಯಾಕ್ ಮಾಡಿ ಅಥವಾ ಲೇಬಲ್ ಸಹಿತ ಮಾರುವುದಿದ್ದರೆ, ಶೇ.5 ಜಿಎಸ್‌ಟಿ ವಿಧಿಸಲಾಗುತ್ತದೆ.
ಶೇ.12ಕ್ಕೆ ಇಳಿಕೆ: ಪೆನ್ಸಿಲ್ ಶಾರ್ಪ್‌ನರ್‌ಗೆ ಇರುವ ತೆರಿಗೆ ಪ್ರಮಾಣವನ್ನು ಶೇ.18ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ.