Advertisement

ಜಿಎಸ್‌ಟಿ ದಾಖಲೆ ಸಂಗ್ರಹ: ಆರ್ಥಿಕತೆ ಹಳಿಗೆ ಬಂದ ಮುನ್ಸೂಚನೆ

11:24 PM Nov 02, 2022 | Team Udayavani |

ಕೊರೊನೋತ್ತರದಲ್ಲಿ ಭಾರತದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದ್ದು, ಇದಕ್ಕೆ ಉದಾಹರಣೆ ಎಂಬಂತೆ ದೇಶದಲ್ಲಿ ಸರಕು ಮತ್ತು ಸಾಗಣೆ ತೆರಿಗೆ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಅದರಲ್ಲೂ 2020ರ ಎಪ್ರಿಲ್‌ನಿಂದ ಜಿಎಸ್‌ಟಿ ಸಂಗ್ರಹ ಪ್ರಮಾಣ ತೀರಾ ಕಡಿಮೆ ಎಂದು ಹೇಳುವಷ್ಟರ ಮಟ್ಟಿಗೆ ಕುಸಿತ ಕಂಡಿತ್ತು. ಅಷ್ಟೇ ಅಲ್ಲ ಈ ಪ್ರಮಾಣ ಮುಂದಿನ ಆರೇಳು ತಿಂಗಳುಗಳ ಕಾಲ ಹೀಗೆಯೇ ಮುಂದುವರಿದಿತ್ತು. ಮತ್ತೆ 2021ರ ಮಧ್ಯಭಾಗದಲ್ಲಿ ಚೇತರಿಕೆ ಶುರುವಾಗಿ ಅನಂತರದಲ್ಲಿ ಹೆಚ್ಚಾಗುತ್ತಲೇ ಇದೆ.

Advertisement

ಅದರಲ್ಲೂ ಅಕ್ಟೋಬರ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗಿದೆ.ಅಂದರೆ ಜಿಎಸ್‌ಟಿ ಜಮಾನ ಆರಂಭವಾದಾಗಿನಿಂದ ಇದೇ ಎರಡನೇ ಬಾರಿಗೆ 1.51 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದೇ ವರ್ಷದ 2022ರ ಎಪ್ರಿಲ್‌ನಲ್ಲಿ 1.67 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದೇ ಇದುವರೆಗಿನ ದಾಖಲೆಯಾಗಿದೆ. ಅಲ್ಲದೆ, ಇದೇ ಮಾದರಿಯಲ್ಲಿ ಜಿಎಸ್‌ಟಿ ಸಂಗ್ರಹ ಏರುತ್ತಾ ಹೋದರೆ ಮುಂದಿನ ದಿನಗಳಲ್ಲಿ ಈ ದಾಖಲೆಯನ್ನು ಮುರಿಯುವ ಸಾಧ್ಯತೆಗಳೂ ಇವೆ.

ಹಣಕಾಸು ಇಲಾಖೆಯ ಪ್ರಕಾರ, ಆಂತರಿಕ ವಹಿವಾಟು, ರಫ್ತಿನಿಂದ ಬಂದ ಆದಾಯವೇ ಅಕ್ಟೋಬರ್‌ನಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ. ಅಲ್ಲದೆ, ತೆರಿಗೆ ಸಂಗ್ರಹದಲ್ಲಿ ದೊಡ್ಡ ರಾಜ್ಯಗಳೇ ಉತ್ತಮ ಸಾಧನೆ ಮಾಡಿವೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 11 ಸಾವಿರ ಕೋಟಿ ರೂ.ನಷ್ಟು ತೆರಿಗೆ ಸಂಗ್ರಹವಾಗಿದೆ.

ಅಲ್ಲದೆ ಏರಿಕೆ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಹರಿಯಾಣದಲ್ಲಿ ಶೇ.37ರಷ್ಟು ಏರಿಕೆ ಕಂಡು ಬಂದಿದ್ದರೆ ಕರ್ನಾಟಕದಲ್ಲಿ ಶೇ.33, ಕೇರಳದಲ್ಲಿ ಶೇ.29, ಪಶ್ಚಿಮ ಬಂಗಾಲದಲ್ಲಿ ಶೇ.26, ತಮಿಳುನಾಡಿನಲ್ಲಿ ಶೇ.25ರಷ್ಟು ಆದಾಯ ಏರಿಕೆಯಾಗಿದೆ. ಆದರೆ ಗುಜರಾತ್‌, ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತೆರಿಗೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನು ಆರ್ಥಿಕ ವಿಶ್ಲೇಷಕರು ಈ ಬಗ್ಗೆ ಬೇರೆಯದೇ ರೀತಿಯಲ್ಲಿ ವಿಶ್ಲೇಷಿ ಸುತ್ತಾರೆ. ಹಣದುಬ್ಬರದಿಂದಾಗಿ ವಸ್ತುಗಳ ಬೆಲೆ ಏರಿಕೆಯಾಗಿರುವುದು, ಹಬ್ಬಗಳ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಳವಾದ ಕಾರಣದಿಂದಾಗಿ ಜಿಎಸ್‌ಟಿಯಲ್ಲಿ ಹೆಚ್ಚು ಸಂಗ್ರಹವಾಗಿದೆ ಎಂದು ಹೇಳುತ್ತಾರೆ.

ಆದರೂ ಏನೇ ಆಗಲಿ, ದೇಶವೊಂದರಲ್ಲಿ ತೆರಿಗೆ ಸಂಗ್ರಹ ದಾಖಲೆ ಮಟ್ಟದಲ್ಲಿ ಆಗುತ್ತಿದೆ ಎಂದರೆ ಅಲ್ಲಿನ ಆರ್ಥಿಕತೆ ಗಟ್ಟಿಯಾಗಿದೆ ಎಂದೇ ಅರ್ಥ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಮಹಾ ಕುಸಿತದಂಥ ಹೆದರಿಕೆ ಎದುರಾಗಿರುವಾಗಲೇ ಹೆಚ್ಚೆಚ್ಚು ತೆರಿಗೆ ಸಂಗ್ರಹವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

ಇದರ ಜತೆಗೆ ವಾಹನೋದ್ಯಮವೂ ಅಕ್ಟೋಬರ್‌ನಲ್ಲಿ ಚೇತರಿಸಿಕೊಂಡಿದ್ದು, ಪ್ರಮುಖ ಕಂಪೆನಿಗಳ ವಾಹನಗಳ ಮಾರಾಟದಲ್ಲೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯಕ್ಕೆ ಹಬ್ಬಗಳ ಸಾಲು ಮುಗಿದಿದ್ದು, ಇನ್ನೇನಿದ್ದರೂ ವರ್ಷಾಂತ್ಯಕ್ಕೆ ಬರುವ ಕ್ರಿಸ್‌ಮಸ್‌ ಮತ್ತು ಹೊಸವರ್ಷವನ್ನೇ ಕಾಯಬೇಕು. ಈ ಸಂದರ್ಭದಲ್ಲಿ ಮತ್ತೆ ವಾಹನೋದ್ಯಮ ಮತ್ತು ಗ್ರಾಹಕೋಪಯೋಗಿ ವಸ್ತುಗಳ ಮಾರಾಟದಲ್ಲೂ ಏರಿಕೆಯಾಗಬಹುದು. ಇದಕ್ಕೆ ಪೂರಕವಾಗಿ ಸರಕಾರಗಳೂ ಕೆಲವೊಂದು ಪ್ರೋತ್ಸಾಹಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಣದುಬ್ಬರವನ್ನು ಕಡಿಮೆಗೊಳಿಸಿದರೆ ಜನರಲ್ಲಿನ ಖರೀದಿ ಸಾಮರ್ಥ್ಯವೂ ಹೆಚ್ಚಳವಾಗಿ ತೆರಿಗೆ ಸಂಗ್ರಹವೂ ಇನ್ನಷ್ಟು ಹೆಚ್ಚಳವಾಗಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next