Advertisement

GST ದರ ಇಳಿಕೆ? ಬ್ಲಾಗ್‌ನಲ್ಲಿ ಸಿಹಿ ಸುದ್ದಿಕೊಟ್ಟ ಸಚಿವ ಜೇಟ್ಲಿ

06:00 AM Dec 25, 2018 | |

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಧ್ಯಮ ವರ್ಗದವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ಸರ್ಕಾರ ಇದೀಗ ಜಿಎಸ್‌ಟಿ ದರಗಳನ್ನು ಇನ್ನಷ್ಟು ಇಳಿಕೆ ಮಾಡಲು ಚಿಂತನೆ ನಡೆಸಿದೆ. ಈ ಬಗ್ಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಸುಳಿವು ನೀಡಿದ್ದಾರೆ.

Advertisement

ಶೇ. 28ರ ದರದ ತೆರಿಗೆಯಲ್ಲಿ ಈಗ ಹೆಚ್ಚಿನ ಸಾಮಗ್ರಿಗಳು ಉಳಿದಿಲ್ಲ. ಈ ದರದ ತೆರಿಗೆಯಲ್ಲಿ ಐಷಾರಾಮಿ ಹಾಗೂ ತಂಬಾಕು ಉತ್ಪನ್ನಗಳಂಥ ಅಗತ್ಯವಲ್ಲದ ವಸ್ತುಗಳು ಮಾತ್ರ ಉಳಿದುಕೊಳ್ಳಲಿವೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಜಿಎಸ್‌ಟಿಯಿಂದ ಆದಾಯ ಹೆಚ್ಚುತ್ತಿದ್ದಂತೆ ಶೇ. 12 ಹಾಗೂ ಶೇ.18ರ ತೆರಿಗೆಯನ್ನು ವಿಲೀನಗೊಳಿಸಿ, ಯಾವುದಾದರೂ ಒಂದೇ ದರವನ್ನು ವಿಧಿಸಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

ಸದ್ಯ ಶೇ. 5, ಶೇ. 12, ಶೇ. 18 ಹಾಗೂ ಶೇ. 28 ರ ದರದಲ್ಲಿ ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ವಿವಿಧ ದರದ ತೆರಿಗೆಯು ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೇಟಿÉ ಹೇಳಿದ್ದಾರೆ. ಇತ್ತೀಚೆಗಷ್ಟೇ 23 ಸರಕು ಮತ್ತು ಸೇವೆಗಳಿಗೆ ತೆರಿಗೆ ದರವನ್ನು ಇಳಿಕೆ ಮಾಡಿದ ನಂತರದಲ್ಲಿ ಜೇಟ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಜಿಎಸ್‌ಟಿ ಜಾರಿ ನಂತರದ 18 ತಿಂಗಳುಗಳು ಎಂಬ ಶೀರ್ಷಿಕೆಯ ಲೇಖನದಲ್ಲಿ 1216 ಉತ್ಪನ್ನಗಳಿಗೆ ಸದ್ಯ ತೆರಿಗೆ ವಿಧಿಸಲಾಗುತ್ತಿದೆ. ಈ ಪೈಕಿ 183 ಸಾಮಗ್ರಿಗಳಿಗೆ ಶೂನ್ಯ, 203 ಸಾಮಗ್ರಿಗಳಿಗೆ ಶೇ. 5, 178 ಸಾಮಗ್ರಿಗಳಿಗೆ ಶೇ. 12 ಹಾಗೂ 517 ಸಾಮಗ್ರಿಗಳಿಗೆ ಶೇ. 18, 28 ಸಾಮಗ್ರಿಗಳಿಗೆ ಶೇ. 28 ತೆರಿಗೆ ವಿಧಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಿಮೆಂಟ್‌ ಹಾಗೂ ಇತರ ಕೆಲವು ಸಾಮಗ್ರಿಗಳಿಗೆ ಶೇ. 28ರ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಇಳಿಕೆ ಮಾಡುವುದು ಸರ್ಕಾರದ ಮುಂದಿನ ಗುರಿ ಎನ್ನಲಾಗಿದೆ. ಸಿಮೆಂಟ್‌ ಮೇಲಿನ ತೆರಿಗೆ ಇಳಿಕೆಯು ಮಧ್ಯಮ ವರ್ಗದವರ ಮೇಲೆ ಮಹತ್ವದ ಪರಿಣಾಮ ಬೀರಲಿದ್ದು, ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಯೂ ವೃದ್ಧಿಯಾಗಲಿದೆ.

Advertisement

ಶೇ.31 ತೆರಿಗೆ ವಿಧಿಸಿದ್ದ ಕಾಂಗ್ರೆಸ್‌:
ಜಿಎಸ್‌ಟಿ ಜಾರಿಗೂ ಮುನ್ನ ಬಹುತೇಕ ಸಾಮಗ್ರಿಗಳಿಗೆ ಶೇ. 31ರ ಪರೋಕ್ಷ ತೆರಿಗೆ ಜಾರಿಯಲ್ಲಿತ್ತು. ಇದನ್ನು ನಾವು ಶೇ. 28ರ ತೆರಿಗೆಗೆ ಇಳಿಕೆ ಮಾಡಿದ್ದೇವೆ. ಶೇ.31ರಷ್ಟು ತೆರಿಗೆ ವಿಧಿಸಿದ ಪಕ್ಷವೇ ಈಗ ಜಿಎಸ್‌ಟಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಅವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ಗೆ ಜೇಟ್ಲಿ ಕುಟುಕಿದ್ದಾರೆ.

ಮನೆ ತೆರಿಗೆ ಇನ್ನೂ ಇಳಿಕೆ: ನಿರ್ಮಾಣ ಹಂತದಲ್ಲಿರುವ ಮನೆಗಳ ತೆರಿಗೆ ದರ ಇಳಿಕೆಯ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಶೇ. 12 ರ ತೆರಿಗೆಯನ್ನು ವಿಧಿಸಿ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಒದಗಿಸಲಾಗುತ್ತದೆ. ಇದರಿಂದ ಶೇ. 8ರ ಜಿಎಸ್‌ಟಿ ಮನೆಗಳ ಮೇಲೆ ವಿಧಿಸಿದಂತಾಗುತ್ತದೆ. ಇನ್ನೊಂದೆಡೆ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಶೇ. 5 ರ ತೆರಿಗೆ ವಿಧಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಉಂಟಾದ ಸೋಲಿನಿಂದಾಗಿ ಮೋದಿ ಸರ್ಕಾರಕ್ಕೆ ಒಂದೇ ದರದ ಜಿಎಸ್‌ಟಿ ಬಗ್ಗೆ ಜ್ಞಾನೋದಯವಾದಂತಿದೆ.
– ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next