ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ 20ನೇ ಸಭೆ ನಡೆದಿದ್ದು, ಕೇಂದ್ರ ಸರಕಾರ ರೈತರು ಮತ್ತು ಜವುಳಿ ಕ್ಷೇತ್ರದಲ್ಲಿನ ತೆರಿಗೆ ವಿಚಾರದಲ್ಲಿ ಕೊಂಚ ರಿಯಾಯಿತಿ ತೋರಿದೆ.
ಶನಿವಾರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಬಳಕೆ ಮಾಡುವ ಟ್ರ್ಯಾಕ್ಟರ್‌ಗಳ ಕೆಲವು ಬಿಡಿಭಾಗಗಳ ಮೇಲಿನ ಜಿಎಸ್‌ಟಿಯನ್ನು ಶೇ. 28ರಿಂದ ಶೇ.18ಕ್ಕೆ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಅಲ್ಲದೆ ಜವುಳಿ ಕ್ಷೇತ್ರದಲ್ಲಿನ ಪೂರಕ ಕೆಲಸಗಳ ಮೇಲೆ ಹಾಕಲು ನಿರ್ಧರಿಸಿದ್ದ ಶೇ.18 ತೆರಿಗೆಯನ್ನು ತೆಗೆದುಹಾಕಿ, ಶೇ. 5ರಷ್ಟು ವಿಧಿಸಲು ನಿರ್ಧರಿಸಲಾಗಿದೆ.
ಇದರ ಜತೆಯಲ್ಲೇ 10 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ 50 ಸಾವಿರ ರೂ.ಗಳಿಗೂ ಹೆಚ್ಚು ಬೆಲೆಯ ವಸ್ತುಗಳನ್ನು ಇ-ವೇನಲ್ಲಿ ಮೊದಲೇ ನೋಂದಣಿ ಮಾಡುವುದನ್ನೂ ಕಡ್ಡಾಯ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಜಿಎಸ್‌ಟಿ ರಿಯಾಯಿತಿ ಇರುವ ವಸ್ತುಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಸಭೆಯ ಅನಂತರ ಜೇಟ್ಲಿ ಅವರೇ ಹೇಳಿದ್ದಾರೆ.
ಈಗಾಗಲೇ 71 ಲಕ್ಷ ಕೇಂದ್ರ ಮತ್ತು ರಾಜ್ಯಗಳ ತೆರಿಗೆದಾರರು ಜಿಎಸ್‌ಟಿಗೆ ನೋಂದಣಿಯಾಗಿದ್ದಾರೆ. ಇನ್ನೂ 15.67 ಲಕ್ಷ ಹೊಸ ಅರ್ಜಿಗಳು ಬಂದಿವೆ ಎಂದೂ ಹೇಳಿದರು. ಸೆ.9 ರಂದು ಹೈದರಾಬಾದ್‌ನಲ್ಲಿ 21ನೇ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಕ್ಕಿ ಗಿರಣಿ ಮಾಲಕರು ಅಕ್ಕಿ ಬ್ರಾಂಡ್‌ಗಳ ನೋಂದಣಿ ರದ್ದು ಮಾಡಿಕೊಳ್ಳುತ್ತಿರುವುದರ ಬಗ್ಗೆ ಚರ್ಚಿಸಲಾಗುವುದು. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರುಣ್ ಜೇಟಿÉ ತಿಳಿಸಿದರು.