ಕುಂದಾಪುರ: ಕರಿಯರ್ ಕೋಚಿಂಗ್ ಸಿ.ಎ. ಕ್ಲಾಸಸ್ ಅವರ ವತಿಯಿಂದ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಪರಿವರ್ತನ ಜಿಎಸ್‌ಟಿ ಕಾರ್ಯಾಗಾರ ಜರಗಿತು.
ಕರಿಯರ್ ಕೋಚಿಂಗ್ ವೆಬ್‌ಸೈಟ್ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ನಾಣಿಯಪ್ಪ ಮಾತನಾಡಿ, ಜಿಎಸ್‌ಟಿ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದ್ದು, ಎಲ್ಲ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆಯಡಿ ತರಲಿದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ಧತಿ ಪ್ರಸ್ತುತವಾಗಿದೆ. ಜಿಎಸ್‌ಟಿ ವರ್ತಕರಿಗೆ ಅನುಕೂಲಕರ ತೆರಿಗೆ ಪದ್ಧತಿ ತಂದುಕೊಡಲಿದೆ ಎಂದರು.
ವಿಚಾರಸಂಕಿರಣ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ ಕೇವಲ ತರಗತಿ ಕೋಣೆ ನಡುವೆ ನಡೆಯದೇ ಶಿಕ್ಷಣದೊಂದಿಗೆ ಶಿಕ್ಷಣಕ್ಕೆ ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕಾದ ಅಗತ್ಯ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಆಡಿಟ್) ಡೆಪ್ಯುಟಿ ಕಮಿಷನರ್ ಶಂಭು ಭಟ್,ಎಸಿಗಳಾದ ವಿಜಯ ಕುಮಾರ್ ಬಾತಾಡ್, ರೋನಾಲ್ಡ್ ಲೋಬೋ, ಸಾಯಿರಾಮ್ ಪ್ಲೋರಿಂಗ್ಸ್ ಕುಂದಾಪುರ, ಉಡುಪಿ ಇದರ ಆಡಳಿತ ಪಾಲುದಾರ ನಾಗರಾಜ್ ಎಸ್.ಕೆ., ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯದರ್ಶಿ ಭರತ್ ಶೆಟ್ಟಿ ಸ್ವಾಗತಿಸಿದರು. ಸಿ.ಎ. ರಾಜೇಶ್ ಶೆಟ್ಟಿ ಪ್ರಸ್ತಾವನೆಗೈದರು. ರಾಮ್‌ಮೋಹನ್ ಪರಿಚಯಿಸಿ ದರು. ಕೇರಿಯರ್ ಕೋಚಿಂಗ್ ಫೌಂಡರ್ ಪ್ರತಾಪ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.