Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಾಣಿಜ್ಯ ತೆರಿಗೆ, ಸಾರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಐದು ತಿಂಗಳಲ್ಲಿ ಆದಾಯ ಸಂಗ್ರಹದಲ್ಲಿ ಆಗಿರುವ ಪ್ರಗತಿ ಪರಿಶೀಲನೆ ನಡೆಸಿದರು. ಡಿ ಮಾನಿಟೈಜೆಶನ್, ಜಿಎಸ್‌ಟಿ ಹಾಗೂ ಹೆದ್ದಾರಿ ಬಾರ್ ಬಂದ್ ಮತ್ತು ಆನ್‌ಲೈನ್ ವ್ಯವಹಾರದಿಂದ ಎಲ್ಲ ಇಲಾಖೆಗಳಲ್ಲೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ.
Related Articles
Advertisement
ನಿರೀಕ್ಷಿತ ಗುರಿಗಿಂತ ಶೇಕಡಾ 5 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಹೆದ್ದಾರಿ ಬಾರ್ ಬಂದ್ ಆದ ಮೇಲೂ ಕೆಲವು ಜಿಲ್ಲೆಗಳಲ್ಲಿ ಆದಾಯ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಸಬೂಬು ಹೇಳಬಾರದು. ಜಿಲ್ಲಾಧಿಕಾರಿಗಳು ಬಾರ್ ಲೈಸೆನ್ಸ್ ನವೀಕರಣಕ್ಕೆ ವಿಳಂಬ ಮಾಡದೇ ಸೆಪ್ಟಂಬರ್ 15 ರೊಳಗೆ ಎಲ್ಲ ಬಾರ್ ಲೈಸೆನ್ಸ್‌ಗಳನ್ನು ನವೀಕರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಆದಾಯ ಸಂಗ್ರಹದ ಭರವಸೆ: ಸತತ ಬರಗಾಲ ಹಾಗೂ ಒಂದು ಸಾವಿರ ಮತ್ತು 500 ರೂಪಾಯಿ ನೋಟು ಅಮಾನ್ಯಿಕರಣಗೊಳಿಸಿದ ನಂತರ ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುದ್ರಾಂಕ ಮತ್ತು ನೋಂದಣಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 2017-18 ನೇ ಸಾಲಿಗೆ 9 ಸಾವಿರ ಕೋಟಿ ಆದಾಯದ ಗುರಿ ಹೊಂದಲಾಗಿದ್ದು, ಐದು ತಿಂಗಳಲ್ಲಿ 3409 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ನಿರೀಕ್ಷಿತ ಆದಾಯಕ್ಕಿಂತ 121 ಕೋಟಿ ರೂಪಾಯಿ ಕಡಿಮೆ ಸಂಗ್ರಹವಾಗಿದೆ. ಡಿಸೆಂಬರ್ ಬಳಿಕ ನಿರೀಕ್ಷಿತ ಆದಾಯ ಸಂಗ್ರಹವಾಗುವ ಭರವಸೆಯನ್ನು ಅಧಿಕಾರಿಗಳು ಸಭೆಯಲ್ಲಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಾರಿಗೆ ಇಲಾಖೆಯಲ್ಲಿಯೂ 6006 ಕೋಟಿ ರೂಪಾಯಿ ಗುರಿ ನೀಡಲಾಗಿದೆ. ಆದರೆ, ಇದುವರೆಗೂ 2360 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿಯೂ 2667 ಕೋಟಿ ರೂ. ಗುರಿ ಹೊಂದಲಾಗಿದ್ದು, ಶೇಕಡಾ 90 ರಷ್ಟು ಸಾಧನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಭೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಎಸ್‌ಟಿ ಹಾಗೂ ಹೆದ್ದಾರಿ ಬಾರ್ ಬಂದ್ ಆಗಿದ್ದರಿಂದ ಸ್ವಲ್ಪ ತೆರಿಗೆ ಸಂಗ್ರಹ ಕಡಿಮೆಯಾಗಿದೆ.
ಮುಂದಿನ ದಿನಗಳಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.