ಚಿಕ್ಕಬಳ್ಳಾಪುರ: ಭಾರತೀಯ ಜೀವಿ ವಿಮಾ ನಿಗಮದಲ್ಲಿ ಪಾಲಿಸಿದಾರರ ಮೇಲೆ ವಿಧಿಸುತ್ತಿರುವ ಜಿಎಸ್‌ಟಿಯನ್ನು ಕೂಡಲೇ ರದ್ದುಗೊಳಿಸಿ ಪಾಲಿಸಿದಾರರ ಬೋನಸ್‌ನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶುಕ್ರವಾರ ಜಿಲ್ಲಾ ಕೇಂದ್ರದ ಎಲ್‌ಐಸಿ ಶಾಖಾ ಕಚೇರಿ ಎದುರು ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಪ್ರತಿಭಟನಾ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.
ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್ ನೇತೃತ್ವದಲ್ಲಿ ಜಿಲ್ಲೆಯ ಎಲ್‌ಐಸಿ ಪ್ರತಿನಿಧಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಡೀ ದಿನ ಧರಣಿ ನಡೆಸಿ ಗಮನ ಸೆಳೆದು ಪಾಲಿಸಿದಾರರ ಮೇಲೆ ಜಿಎಸ್‌ಟಿ ವಿಧಿಸುತ್ತಿರುವುದನ್ನು ತೀವ್ರ ಖಂಡಿಸಿ ಕೂಡಲೇ ಜಿಎಸ್‌ಟಿ ಹಾಕುವುದನ್ನು ಕೇಂದ್ರ ಸರ್ಕಾರ ಕೈ ಬಿಡಬೇಕೆಂದರು.
ಕಳವಳ: ಪಾಲಿಸಿದಾರರ ಮೇಲೆ ಜಿಎಸ್‌ಟಿ ವಿಧಿಸುತ್ತಿರುವುದರಿಂದ ಜೀವ ವಿಮಾ ಕಂತು ಪಾವತಿ ಮಾಡುವ ಪಾಲಿಸಿದಾರರ ಮೇಲೆ ಹೆಚ್ಚು ಆರ್ಥಿಕ ಹೊರೆ ಆಗುತ್ತದೆ. ಇದರಿಂದ ಪ್ರತಿನಿಧಿಗಳ ವಹಿವಾಟು ಮೇಲೆ ದುಷ್ಪರಿಣಾಮ ಬೀರುತ್ತದೆ. ಎಲ್‌ಐಸಿ ದೇಶದ ಆರ್ಥಿಕ ಭದ್ರತೆಗೆ ಸಾಕಷ್ಟು ಕೊಡುಗೆ ನೀಡಿದ್ದು, ಇಂತಹ ಸಂದರ್ಭದಲ್ಲಿ ಪಾಲಿಸಿದಾರರ ಮೇಲೆ ಜಿಎಸ್‌ಟಿ ಹಾಕುವುದರಿಂದ ಅದರ ನೇರ ಪರಿಣಾಮ ಪ್ರತಿನಿಧಿಗಳ ಮೇಲೆ ಉಂಟಾಗುತ್ತದೆ ಎಂದು ಪ್ರತಿಭಟನಾ ನಿರತ ಎಲ್‌ಐಸಿ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಿಕ್ಕಬಳ್ಳಾಪುರ ಶಾಖಾ ಅಧ್ಯಕ್ಷ ಎಂ.ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಪಾಲಿಸಿದಾರರ ವಿಮಾ ಕಂತಿನ ಮೇಲೆ ಜಿಎಸ್‌ಟಿ ರದ್ದುಗೊಳಿಸಿ, ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು. ಐಆರ್‌ಡಿಎ ಪ್ರಕಾರ ಪ್ರತಿನಿಧಿಗಳ ಗ್ರೂಪ್ ಇನುÏರೆನ್ಸ್ ಮತ್ತು ಗ್ರಾಚ್ಯುಟಿಯನ್ನು ಹೆಚ್ಚಿಸಿ ಪ್ರತಿನಿಧಿಗಳ ಹಿತ ಕಾಯಬೇಕೆಂದರು.
ಪಾಲಿಸಿ ಮಾಡಿಸಲು ಹಿಂದೇಟು: ಈಗಾಗಲೇ ಐಆರ್‌ಡಿಎ ದೃಢೀಕರಿಸಿರುವ ಪ್ರತಿನಿಧಿಗಳ ಎಲ್ಲಾ ಬೇಡಿಕೆಗಳನ್ನು ಎಲ್‌ಐಸಿ ಆಡಳಿತ ಮಂಡಳಿ ಸಮರ್ಪಕವಾಗಿ ಜಾರಿಗೊಳಿಸಬೇಕೆಂದರು. ಎಲ್‌ಐಸಿ ನಂಬಿಕೊಂಡು ದೇಶದಲ್ಲಿ ಲಕ್ಷಾಂತರ ಪ್ರತಿನಿಧಿಗಳು ಇದ್ದಾರೆ. ಆದರೆ ಇತ್ತೀಚೆಗೆ ಹಲವು ನಿರ್ಧಾರಗಳು ಪ್ರತಿನಿಧಿಗಳ ವಾರ್ಷಿಕ ಗುರಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಜಿಎಸ್‌ಟಿ ವಿಧಿಸುತ್ತಿರುವುದರಿಂದ ಯಾರು ಪಾಲಿಸಿ ಮಾಡಿಸಲು ಮುಂದೆ ಬರುತ್ತಿಲ್ಲ ಎಂದರು. ಅನೇಕ ಬಾರಿ ಸಾಕಷ್ಟು ಹೋರಾಟ, ಧರಣಿ ನಡೆಸಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆಗಳು ಈಡೇರಿಲ್ಲ ಎಂದರು.
ಪ್ರತಿಭಟನೆಯಲ್ಲಿ ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಮೋಹನ್‌ಬಾಬು, ಖಜಾಂಚಿ ರಮೇಶ್‌ಗುಪ್ತಾ, ಸದಸ್ಯರಾದ ಟಿ.ಸಿ.ಲಕ್ಷ್ಮಣ್, ಗೌರಿಬಿದನೂರು ಮಂಜುನಾಥ್, ಬಾಗೇಪಲ್ಲಿ ಬೈಯ್ನಾರೆಡ್ಡಿ, ಸಿ.ಎಸ್.ನಾರಾಯಣ, ವೆಂಕಟೇಶ್‌ಪ್ರಸಾದ್, ವೆಂಕಟಶಿವಾರೆಡ್ಡಿ, ಬಿ.ಎನ್.ಗುರುರಾಜ್, ಶ್ರೀಕಾಂತ್, ಚಂದ್ರಕೀರ್ತಿ, ಎನ್.ರಾಮಚಂದ್ರರೆಡ್ಡಿ ಸೇರಿದಂತೆ ಅನೇಕ ಎಲ್‌ಐಸಿ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನ್ಯಾಯಯುತವಾದ ಬೇಡಿಕೆಗಳು ಈಡೇರಿಸದಿದ್ದಲ್ಲಿ ಜ.18, 20 ರಂದು ಮತ್ತೂಮ್ಮೆ ಶಾಂತಿಯುತ ಪ್ರತಿಭಟಿನೆ ನಡೆಸಲಾಗುವುದು. ಅಷ್ಟರೊಳಗಾಗಿ ಎಲ್‌ಐಸಿ ಆಡಳಿತ ಮಂಡಳಿಯು ಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳು ಈಡೇರದಿದ್ದ ಪಕ್ಷದಲ್ಲಿ ಜ.21 ರಂದು ದೇಶವ್ಯಾಪ್ತಿ ಎಲ್ಲಾ ಶಾಖೆಗಳಲ್ಲಿ ಹೊಸ ಪಾಲಿಸಿಗಳು, ರಿನಿವಲ್ಸ್ ಹಾಗೂ ಆ ದಿನದ ಎಲ್‌ಐಸಿ ಶಾಖೆಗಳ ಪೂರ್ಣ ವಹಿವಾಟನ್ನು ಸ್ಥಗಿತಗೊಳಿಸಿ ಧರಣಿ ನಡೆಸಲಾಗುವುದು.
-ವಿ.ರವೀಂದ್ರನಾಥ್, ಪ್ರತಿನಿಧಿಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷರು