Advertisement

ವಿನಾಯಿತಿಗೆ ಎಳ್ಳುನೀರು: ಹೊಟೇಲ್‌ ವಾಸ್ತವ್ಯ,ಆಸ್ಪತ್ರೆ ಕೊಠಡಿ,ಅಂಚೆ ಸೇವೆ ಇನ್ನು ದುಬಾರಿ

11:42 PM Jun 28, 2022 | Team Udayavani |

ಹೊಸದಿಲ್ಲಿ: ಈಗಾಗಲೇ ಬೆಲೆಯೇರಿಕೆ ಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಜಿಎಸ್‌ಟಿ ಮಂಡಳಿ ಸಭೆಯು ಮತ್ತಷ್ಟು ಬರೆ ಹಾಕಿದೆ. ಕೆಲವು ಉತ್ಪನ್ನಗಳು ಮತ್ತು ಸೇವೆಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ರದ್ದು ಮಾಡಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ಸೂಚಿಸಿದೆ.

Advertisement

ಇದರಿಂದಾಗಿ ಹೊಟೇಲ್‌ ವಾಸ್ತವ್ಯ, ಆಸ್ಪತ್ರೆಗಳ ರೂಂ ಬಾಡಿಗೆ, ಅಂಚೆ ಕಚೇರಿ ಸೇವೆಗಳು ಇನ್ನಷ್ಟು ದುಬಾರಿ ಯಾಗಲಿವೆ.

ಇದಲ್ಲದೆ ಚಿನ್ನ ಮತ್ತು ಅಮೂಲ್ಯ ಹರಳುಗಳನ್ನು ರಾಜ್ಯದೊಳಗೆ ಸಾಗಣೆ ಮಾಡಲು ಇ-ವೇ ಬಿಲ್‌ ವಿತ ರಣೆಯ ಅವಕಾಶವನ್ನು ರಾಜ್ಯಗಳಿಗೆ ನೀಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಎರಡು ದಿನಗಳ 47ನೇ ಜಿಎಸ್‌ಟಿ ಮಂಡಳಿ ಸಭೆ ಮಂಗಳವಾರ ಆರಂಭವಾಗಿದ್ದು, ಸಚಿವರ ಸಮಿತಿಗಳು ಮಾಡಿರುವ ಮಧ್ಯಾಂತರ ಶಿಫಾರಸುಗಳನ್ನು ಮೊದಲ ದಿನವೇ ಅಂಗೀಕರಿಸಲಾಗಿದೆ.

ದರ ಪರಿಷ್ಕರಣೆ, ಜಿಎಸ್‌ಟಿ ವ್ಯವಸ್ಥೆ ಸುಧಾರಣೆ ಮತ್ತು ಚಿನ್ನ ಹಾಗೂ ಅಮೂಲ್ಯ ಹರಳುಗಳ ಸಾಗಣೆಗೆ ಸಂಬಂಧಿಸಿ ಪರಿಶೀಲಿಸಲು ಮೂರು ಸಚಿವರ ಸಮಿತಿಗಳನ್ನು ರಚಿಸಲಾಗಿತ್ತು. ಈ ಪೈಕಿ ದರ ಪರಿಷ್ಕರಣೆಗೆ ಸಂಬಂಧಿಸಿ ಶಿಫಾರಸು ಮಾಡುವ ಸಮಿತಿಯ ನೇತೃತ್ವವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿದ್ದಾರೆ.

Advertisement

ಹೊಟೇಲ್‌ ವಾಸ್ತವ್ಯ, ಆಸ್ಪತ್ರೆ ರೂಂ ಬಾಡಿಗೆಗೆ ಇದ್ದ ತೆರಿಗೆ ವಿನಾಯಿತಿ ತೆಗೆದುಹಾಕಿ, ಜಿಎಸ್‌ಟಿ ವಿಧಿಸಬೇಕು ಎಂದು ಸಚಿವರ ಸಮಿತಿ ಶಿಫಾರಸು ಮಾಡಿತ್ತು. ಅದಕ್ಕೆ ಮಂಡಳಿ ಒಪ್ಪಿಗೆ ಸೂಚಿಸಿದೆ.

ಇ-ವೇ ಬಿಲ್‌ಗೆ ಅನುಮತಿ
ಚಿನ್ನ, ಆಭರಣ ಮತ್ತು ಅಮೂಲ್ಯ ಹರಳುಗಳ ಕಳ್ಳಸಾಗಣೆ ತಪ್ಪಿಸುವ ನಿಟ್ಟಿನಲ್ಲಿ ಇ-ವೇ ಬಿಲ್‌ ವಿತರಿಸಲು ರಾಜ್ಯಗಳಿಗೆ ಜಿಎಸ್‌ಟಿ ಮಂಡಳಿ ಅನುಮತಿ ನೀಡಿದೆ. ಅದರಂತೆ ರಾಜ್ಯದೊಳಗೆ ಇವುಗಳ ಸಾಗಣೆ ಮಾಡುವುದಿದ್ದರೆ ಎಲೆಕ್ಟ್ರಾನಿಕ್‌ ಬಿಲ್‌ ಕಡ್ಡಾಯವಾಗಲಿದೆ. ಆದರೆ ಎಷ್ಟು ಮೊತ್ತದ ಸರಕುಗಳಿಗೆ ಈ ಬಿಲ್‌ ಕಡ್ಡಾಯ ಎಂಬುವುದನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ.

ರಾಜ್ಯಗಳಿಗೆ ಪರಿಹಾರ;
ಇಂದು ನಿರ್ಧಾರ
ರಾಜ್ಯಗಳಿಗೆ ನೀಡಲಾಗುವ ಜಿಎಸ್‌ಟಿ ಪರಿಹಾರ ಮೊತ್ತದ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂಬ ಪ್ರಮುಖ ಕೋರಿಕೆಗೆ ಸಂಬಂಧಿಸಿದ ಚರ್ಚೆ ಬುಧವಾರ ನಡೆಯಲಿದೆ. ಒಂದೋ ಆದಾಯ ಹಂಚಿಕೆಯ ವಿಧಾನವನ್ನು ಬದಲಿಸಬೇಕು ಅಥವಾ ರಾಜ್ಯಗಳಿಗೆ ಇನ್ನೂ 5 ವರ್ಷಗಳ ಕಾಲ ಜಿಎಸ್‌ಟಿ ಪರಿಹಾರ ಒದಗಿಸಬೇಕು ಎಂದು ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಆಗ್ರಹಿಸಿವೆ. ಇದೇ ವೇಳೆ ಕ್ಯಾಸಿನೋಗಳು, ಆನ್‌ಲೈನ್‌ ಗೇಮ್‌ಗಳು ಮತ್ತು ಕುದುರೆ ರೇಸ್‌ ಮೇಲೆ ಶೇ. 28ರಷ್ಟು ಜಿಎಸ್‌ಟಿ ವಿಧಿಸಬೇಕೇ ಬೇಡವೇ ಎಂಬ ನಿರ್ಧಾರವೂ ಬುಧವಾರವೇ ಹೊರಬೀಳಲಿದೆ. ಸಭೆಯ ಬಳಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಯಾವುದಕ್ಕೆಲ್ಲ
ತೆರಿಗೆ ವಿನಾಯಿತಿ ಇಲ್ಲ ?
-ದಿನಕ್ಕೆ 1,000 ರೂ.ಗಳಿಗಿಂತ ಕಡಿಮೆ ಬಾಡಿಗೆ ಇರುವ ಹೊಟೇಲ್‌ ರೂಂಗಳಿಗೆ ಇನ್ನು ತೆರಿಗೆ ವಿನಾಯಿತಿ ಇರುವುದಿಲ್ಲ. ಈ ಕೊಠಡಿಗಳಿಗೆ ಶೇ. 12ರಷ್ಟು ತೆರಿಗೆ ಪಾವತಿಸಬೇಕು.
-ಆಸ್ಪತ್ರೆ ಕೊಠಡಿಯ (ಐಸಿಯು ಹೊರತುಪಡಿಸಿ) ಬಾಡಿಗೆ ದಿನಕ್ಕೆ 5 ಸಾವಿರ ರೂ.ಗಿಂತ ಹೆಚ್ಚಿದ್ದರೆ ಆ ಬಾಡಿಗೆಯ ಮೇಲೆ ಶೇ. 5ರಷ್ಟು ಜಿಎಸ್‌ಟಿ ಪಾವತಿಸಬೇಕು
-ಅಂಚೆ ಕಚೇರಿಯ ಎಲ್ಲ ಸೇವೆಗಳಿಗೂ ಶೇ. 18ರಷ್ಟು ಜಿಎಸ್‌ಟಿ ಪಾವತಿಸಬೇಕು.
-ಚೆಕ್‌ಗಳಿಗೆ (ಬಿಡಿ ಅಥವಾ ಬುಕ್‌ ಮಾದರಿಯವು) ಶೇ. 18 ಜಿಎಸ್‌ಟಿ
-ವಸತಿ ಬಳಕೆಗಾಗಿ ಉದ್ದಿಮೆಗಳು ತಮ್ಮ ವಸತಿ ಕಟ್ಟಡಗಳನ್ನು ಬಾಡಿಗೆ ನೀಡಿದ್ದರೆ ಅದಕ್ಕೆ ಇದ್ದ ವಿನಾಯಿತಿ ರದ್ದು
-ಬ್ಲಿಡ್‌ಬ್ಯಾಂಕ್‌ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ವಾಪಸ್‌
-ದಿನಕ್ಕೆ 5 ಸಾವಿರ ರೂ.ಗಿಂತ ಹೆಚ್ಚು ಬಾಡಿಗೆಯುಳ್ಳ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು, ಮಾಸಿಕ 2,500 ರೂ.ಗಳಿಗಿಂತ ಹೆಚ್ಚು ಬಾಡಿಗೆಯಿರುವ ಮಳಿಗೆಗಳಿಗೆ ಇದ್ದ ವಿನಾಯಿತಿಯೂ ರದ್ದು

ತೆರಿಗೆ ಬದಲಾವಣೆ
ಶೇ. 12ರಿಂದ ಶೇ. 18ರ ಸ್ಲಾéಬ್‌ಗ
-ಮುದ್ರಣ, ಬರಹ/ಚಿತ್ರಕಲೆಯ ಶಾಯಿ
-ಎಲ್‌ಇಡಿ ದೀಪಗಳು, ಎಲ್‌ಇಡಿ ಲ್ಯಾಂಪ್‌ ಶೇ. 5ರಿಂದ ಶೇ. 18ರ ಸ್ಲ್ಯಾಬ್ ಗೆ
-ಸೋಲಾರ್‌ ವಾಟರ್‌ ಹೀಟರ್‌
-ಚರ್ಮದ ಸಿದ್ಧ ಉತ್ಪನ್ನಗಳು
-ಸರಕಾರಕ್ಕೆ ಒದಗಿಸಲಾದ ಗುತ್ತಿಗೆ ಕೆಲಸ
-ಟೈಲರಿಂಗ್‌ ಅಥವಾ ಜವುಳಿಗೆ ಸಂಬಂಧಿಸಿದ ಇತರ ಕೆಲಸಗಳು

Advertisement

Udayavani is now on Telegram. Click here to join our channel and stay updated with the latest news.

Next