Advertisement

5ರ ಸಂಭ್ರಮಕ್ಕೆ ಜಿಎಸ್‌ಟಿ ಬಂಪರ್‌: ಜೂನ್‌ನಲ್ಲಿ 1.44 ಲಕ್ಷ ಕೋಟಿ ರೂ. ಜಮೆ

12:18 AM Jul 02, 2022 | Team Udayavani |

ಹೊಸದಿಲ್ಲಿ: ಜೂನ್‌ ತಿಂಗಳಲ್ಲಿ 1.44 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. 2021ರ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 56ರಷ್ಟು ಏರಿಕೆ ಆಗಿದೆ. ಕಳೆದ ವರ್ಷದ ಜೂನ್‌ನಲ್ಲಿ 92,800 ಕೋ.ರೂ. ಸಂಗ್ರಹವಾಗಿತ್ತು. ಜಿಎಸ್‌ಟಿ ಜಾರಿಯಾಗಿ ಗುರುವಾರಕ್ಕೆ ಐದು ವರ್ಷ ಪೂರ್ತಿಗೊಳ್ಳುತ್ತಿರುವ ಹೊತ್ತಿನಲ್ಲಿಯೇ ಈ ಸಾಧನೆ ದಾಖಲಾಗಿದೆ.

Advertisement

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌, ಪ್ರತೀ ತಿಂಗಳು ಜಿಎಸ್‌ಟಿ ಸಂಗ್ರಹದಲ್ಲಿ ಸಾಧನೆ ಗಮನಾರ್ಹ ವಿಚಾರ ಎಂದು ಬಣ್ಣಿಸಿದ್ದಾರೆ. ಸತತ ಐದನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1.40 ಲಕ್ಷ ಕೋಟಿ ರೂ. ದಾಟುತ್ತಿದೆ. ಮಾರ್ಚ್‌ ಬಳಿಕ ನಾಲ್ಕನೇ ಬಾರಿಗೆ ಇಂಥ ಸಾಧನೆ ಆಗಿದೆ ಎಂದು ವಿತ್ತ ಸಚಿವಾಲಯ ಪ್ರಕಟಿಸಿದೆ.

ಚಿನ್ನ ಆಮದು
ಸುಂಕ ಹೆಚ್ಚಳ
ವಿದೇಶಗಳಿಂದ ಆಮದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ವಿಧಿಸಲಾಗುವ ಆಮದು ಸುಂಕವನ್ನು ಶೇ. 10.75ರಿಂದ ಶೇ. 15ಕ್ಕೆ ಏರಿಸಲಾಗಿದೆ. ಜೂ. 30ರಿಂದಲೇ ಹೊಸ ದರ ಅನ್ವಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆಮದು ಸುಂಕದಲ್ಲಿ ಕಸ್ಟಮ್ಸ್‌ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌(ಎಐಡಿಸಿ) ಸೇರಿರುತ್ತದೆ. ಈವರೆಗೆ ಕಸ್ಟಮ್ಸ್‌ ಸುಂಕ ಶೇ. 7.5ರಷ್ಟಿತ್ತು. ಸರಕಾರದ ಹೊಸ ಆದೇಶದಿಂದಾಗಿ ಜೂ. 30ರಿಂದ ಅದು
ಶೇ. 12.5ರಷ್ಟಾಗಿದೆ. ಶೇ. 2.5ರಷ್ಟಿದ್ದ ಕೃಷಿ ಸೆಸ್‌ ಹಾಗೆಯೇ ಮುಂದುವರಿದಿದೆ. ಹಾಗಾಗಿ ಒಟ್ಟು ಆಮದು ಸುಂಕ
ಶೇ. 15ಕ್ಕೇರಿದಂತಾಗುತ್ತದೆ.

ತೈಲೋತ್ಪನ್ನಗಳ
ಮೇಲೆ ರಫ್ತು ತೆರಿಗೆ
ಪೆಟ್ರೋಲ್‌, ಡೀಸೆಲ್‌ ಮತ್ತು ಏವಿಯೇಷನ್‌ ಟರ್ಬೈನ್‌ ಫ್ಯೂಯೆಲ್‌ ಮೇಲೆ ರಫ್ತು ತೆರಿಗೆ ವಿಧಿಸಲಾಗಿದೆ. ಪ್ರತೀ ಲೀಟರ್‌ ಪೆಟ್ರೋಲ್‌ ಮತ್ತು ಎಟಿಎಫ್ ಗೆ 6 ರೂ., ಪ್ರತೀ ಲೀಟರ್‌ ಡೀಸೆಲ್‌ಗೆ 13 ರೂ. ತೆರಿಗೆ ವಿಧಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಪ್ರಧಾನಿ ಹರ್ಷ
ಜಿಎಸ್‌ಟಿ ಸಂಗ್ರಹದ ಬಗ್ಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಜಿಎಸ್‌ಟಿಯಿಂದ ಉದ್ಯಮ ಸ್ನೇಹಿ ವಾತಾವರಣ ವೃದ್ಧಿಸಿದೆ. ಜತೆಗೆ ಒಂದು ದೇಶ -ಒಂದು ತೆರಿಗೆ ಎಂಬ ಪರಿಕಲ್ಪನೆ ಈಡೇರಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next