Advertisement

ಜಿಎಸ್‌ಟಿ ಸಂಗ್ರಹ: ತೆರಿಗೆ ಇಲಾಖೆಗೆ ಟಾಸ್ಕ್ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

11:41 PM Jul 01, 2022 | Team Udayavani |

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿಯನ್ನು ಮೀರುವ ದೊಡ್ಡ “ಟಾಸ್ಕ್’ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಿಗೆ ಇಲಾಖೆಗೆ ನೀಡಿದ್ದಾರೆ.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ವಾಣಿಜ್ಯ ತೆರಿಗೆಗಳ ಇಲಾಖೆಯು ಜಿಎಸ್‌ಟಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ 82,500 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, 2021-22ನೇ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಗುರಿಯನ್ನು ಮೀರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

ತೆರಿಗೆ ಸಂಗ್ರಹ, ಹೊಸ ವ್ಯವಸ್ಥೆ ಮತ್ತು ತಂತ್ರಜ್ಞಾನಗಳ ಅಳವಡಿಕೆ, ನಿರ್ವಹಣೆ ಸಹಿತ ಹಲವಾರು ವಿಚಾರಗಳಲ್ಲಿ ರಾಜ್ಯ ತೆರಿಗೆ ಇಲಾಖೆ ಮುಂಚೂಣಿಯಲ್ಲಿದೆ. ಯಾವುದೇ ಪ್ರಯೋಗ ಮಾಡಬೇಕಾದರೂ ಕೇಂದ್ರದ ಮೊದಲ ಆಯ್ಕೆ ಕರ್ನಾಟಕ ಆಗಿರುತ್ತದೆ. ಇದನ್ನು ಸ್ವತಃ ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿಗಳು ನನಗೆ ಹೇಳಿದ್ದಾರೆ. ಇದೆಲ್ಲದರ “ಕ್ರೆಡಿಟ್‌’ ನಮ್ಮ ಅಧಿಕಾರಿಗಳಿಗೆ ಸಲ್ಲುತ್ತದೆ. ಗರಿಷ್ಠ ತೆರಿಗೆ ಸಂಗ್ರಹ ಇದ್ದರೂ, ಸಂಪನ್ಮೂಲ ಕ್ರೋಡೀಕರಣ ವಿಚಾರಕ್ಕೆ ಬಂದರೆ ನಾವಿನ್ನಷ್ಟು ಸುಧಾರಣೆ ಆಗಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.

ಅಭಿನಂದನೆ
ತೆರಿಗೆ ಆಡಳಿತಕ್ಕೆ ಕೊಡುಗೆ ನೀಡಿದ ಇಲಾಖೆ ಹೆಚ್ಚುವರಿ ಆಯುಕ್ತರನ್ನು ಅಭಿನಂದಿಸಲಾಯಿತು. ಅದೇ ರೀತಿ, ಇಲಾಖೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬಂದಿಯನ್ನು ಗುರುತಿಸಿ “ಮುಖ್ಯಮಂತ್ರಿಗಳ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಲ್ಲದೆ, “ಜಿಎಸ್‌ಟಿ ಪ್ರೈಮ್‌- 3′ ತಂತ್ರಾಂಶವನ್ನು ಅನಾವರಣಗೊಳಿಸಲಾಯಿತು. ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಬೆಂಗಳೂರು ವಿಭಾಗ- 4ಕ್ಕೆ ಟ್ರೋಫಿ ನೀಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next