ಹೊಸದಿಲ್ಲಿ: ಜಿಎಸ್‌ಟಿಯನ್ನು ಸರಿಯಾಗಿ ಪಾವತಿಸದೇ ಕಳ್ಳಲೆಕ್ಕ ತೋರಿಸಿದವರ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯ ಅಗ್ರಸ್ಥಾನ ಪಡೆದುಕೊಂಡಿದ್ದರೆ, ಕರ್ನಾಟಕ 2ನೇ ಸ್ಥಾನಿಯಾಗಿದೆ. ಕಳೆದ 5 ವರ್ಷದಲ್ಲಿ ವಂಚಿಸಿದ್ದ 3.11ಲಕ್ಷ ಕೋಟಿ ರೂ. ಜಿಎಸ್‌ಟಿಯಲ್ಲಿ, 1.03 ಲಕ್ಷ ಕೋಟಿ ರೂ.ಗಳನ್ನು ಹಿಂಪಡೆಯಲು ಸರಕಾರ ಯಶಸ್ವಿಯಾಗಿದೆ ಎಂದು ಲೋಕಸಭೆಗೆ ಹಣಕಾಸು ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ 60 ಸಾವಿರ ಕೋಟಿ ರೂ., ಕರ್ನಾಟಕದಲ್ಲಿ 40,507 ಕೋಟಿ ರೂ., ಜಿಎಸ್‌ಟಿಯನ್ನು ವಂಚಿಸಲಾಗಿದೆ. ಇನ್ನು ಗುಜರಾತ್‌ನಲ್ಲಿ 26,156 ಕೋಟಿ ರೂ., ದಿಲ್ಲಿಯಲ್ಲಿ 24,217 ಕೋಟಿ ರೂ. ವಂಚನೆ ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತೆರಿಗೆ ವಂಚನೆ, ನಕಲಿ ರಶೀದಿ, ಜಿಎಸ್‌ಟಿ ಸಂಖ್ಯೆ ಬಳಸಿ ಸೈಬರ್ ವಂಚನೆ, ನಕಲಿ ವ್ಯವಹಾರ-ವಹಿವಾಟು, ತೆರಿಗೆ ಬಾಕಿ ಪಾವತಿಸದೇ ಇರುವುದು ಹೀಗೆ ವಿವಿಧ ರೀತಿಯಲ್ಲಿ ಜಿಎಸ್‌ಟಿ ಪಾವತಿಸದೇ ವಂಚಿಸುತ್ತಿರುವುದು ಗೊತ್ತಾಗಿದೆ. 2021-22ನೇ ಸಾಲಿನಲ್ಲಿ ಇಂಥ 12,574 ಪ್ರಕರಣಗಳು ವರದಿಯಾಗಿದ್ದು, 2022-23ನೇ ಸಾಲಿನಲ್ಲಿ 13,492 ಪ್ರಕರಣಗಳನ್ನು ಪತ್ತೆಮಾಡಲಾಗಿದೆ.