ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಚಾಲನೆ ಸಿಕ್ಕಿ 12 ದಿನದಲ್ಲಿ ಜಿಲ್ಲೆಯಲ್ಲಿ 1,85,923 ಮಂದಿ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಕೇಂದ್ರಗಳ ಮುಂದೆ ಸಾಲು ಸಾಲು: ಜಿಲ್ಲಾದ್ಯಂತ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಮನೆಯ ಯಜಮಾನಿಯಾಗಿರುವ ಗೃಹಿಣಿ ಯರಲ್ಲಿ ಪೈಪೋಟಿ ಶುರುವಾಗಿದ್ದು, ನೋಂದಣಿ ಕೇಂದ್ರಗಳ ಮುಂದೆ ನಾರಿಯರು ಸಾಲು ಸಾಲು ನಿಂತಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ. ನಗರ ಪ್ರದೇಶದಲ್ಲಿ ಜನತೆ ಕರ್ನಾಟಕ ಒನ್‌ನಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
342 ಕೇಂದ್ರ: ನೋಂದಣಿಗಾಗಿ ಜಿಲ್ಲೆಯ 8 ತಾಲೂಕುಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 24 ಕೇಂದ್ರಗಳಲ್ಲಿ ನೋಂದಣಿ ಕಾರ್ಯಕ್ಕೆ ಅವಕಾಶ ನೀಡಲಾಗಿದ್ದರೆ, 6 ಕರ್ನಾಟಕ ಒನ್ ಕೇಂದ್ರಗಳು, 155 ಗ್ರಾಮ ಒನ್ ಕೇಂದ್ರಗಳು ಹಾಗೂ 157 ಬಾಪೂಜಿ ಕೇಂದ್ರಗಳು ಸೇರಿ ಜಿಲ್ಲಾದ್ಯಂತ ಒಟ್ಟು 342 ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
2,99,677 ಕಾರ್ಡ್‌ಗಳು: ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 28,420 ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್) ಒಟ್ಟು 2,79,968 ಹಾಗೂ ಎಪಿಲ್ ಕಾರ್ಡ್‌ಗಳ ಸಂಖ್ಯೆ ಒಟ್ಟು 27,029 ಕಾರ್ಡ್‌ಗಳು ಸೇರಿ ಒಟ್ಟು 3,27,417 ಕಾರ್ಡ್‌ಗಳಿವೆ. ಆದರೆ, ಆ ಪೈಕಿ ಮಹಿಳಾ ಮುಖ್ಯಸ್ಥರ ಹೆಸರಲ್ಲಿರುವ ಪಡಿತರ ಚೀಟಿಗಳ ಲೆಕ್ಕಾಚಾರ ನೋಡಿ ದರೆ ಜಿಲ್ಲೆಯಲ್ಲಿ ಒಟ್ಟು 27,029 ಎಎವೈ ಕಾರ್ಡ್, 2,59,854 ಬಿಪಿಎಲ್ ಹಾಗೂ 12,794 ಎಪಿಎಲ್ ಕಾರ್ಡ್ ಸೇರಿ ಒಟ್ಟು 2,99,677 ಕಾರ್ಡ್‌ಗಳಿವೆ. ಆ ಪೈಕಿ ಸರ್ಕಾರ ಜಿಲ್ಲೆಗೆ ಒಟ್ಟು 2,85,020 ಗುರಿ ನೀಡಿದೆ.
ನೋಂದಣಿ ಕೇಂದ್ರಗಳಲ್ಲಿ ಹಣಕ್ಕೆ ಬೇಡಿಕೆ: ಗೃಹಲಕ್ಷ್ಮೀ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ನೋಂದಣಿ ಸೇವಾ ಕೇಂದ್ರಗಳಲ್ಲಿ ಗ್ರಾಹಕರಿಂದ ಹಣ ಪಡೆಯುತ್ತಿರುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. ಗೃಹಲಕ್ಷ್ಮೀಗಾಗಿ ಫಲಾನುಭವಿಗಳು ಇಂತಿಷ್ಟು ಹಣ ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಮಧ್ಯವರ್ತಿಗಳು ಹುಟ್ಟುಕೊಂಡು ಗೃಹಲಕ್ಷ್ಮೀಯರಿಂದ ಹಣ ಪೀಕುತ್ತಿದ್ದಾರೆ ಎಂದು ಫಲಾನುಭವಿಗಳು ದೂರುತ್ತಿದ್ದಾರೆ.
ಎಸ್‌ಎಂಎಸ್ ಮಾಡಿ ಮಾಹಿತಿ ಪಡೆಯಿರಿ: ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902ಗೆ ಕರೆ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ನಿಗದಿತ ದಿನಾಂಕದಂದು ಹೋಗಲು ಸಾಧ್ಯವಾಗದೇ ಇದ್ದಲ್ಲಿ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 2,85,020 ಮಂದಿ ಅರ್ಹ ಫಲಾನುಭವಿಗಳಿದ್ದು, ಜುಲೈ 30ರ ಅಂತ್ಯಕ್ಕೆ ಜಿಲ್ಲಾದ್ಯಂತ ಒಟ್ಟು 1,85,020 ಮಂದಿ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದು, ಶೇ.65.23 ರಷ್ಟು ಗುರಿ ಸಾಧನೆ ಮಾಡಲಾಗಿದೆ.
● ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ
– ಕಾಗತಿ ನಾಗರಾಜಪ್ಪ