Advertisement

ಗೃಹಲಕ್ಷ್ಮೀ: ಮಂದಗತಿಯಲ್ಲಿ ಸಾಗಿದ ನೋಂದಣಿ

10:27 AM Jul 22, 2023 | Team Udayavani |

ರಾಮನಗರ: ಆರಂಭಿಕ ಅಡೆತಡೆಗಳ ನಡುವೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಕಾರ್ಯ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಮೊದಲ ಎರಡು ದಿನಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.

Advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾಗಿರುವ ಗೃಹಲಕ್ಷ್ಮೀ ಯೋಜನೆಗೆ ಅರ್ಹವಾಗುವ ಕುಟುಂಬಗಳ ಸಂಖ್ಯೆ ಜಿಲ್ಲೆಯಲ್ಲಿ 3.14 ಲಕ್ಷ ಇದ್ದು, ಮೊದಲ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಸಲ್ಲಿಕೆಯಾ ಗಿರುವುದು ಕೇವಲ ಅರ್ಜಿಗಳು ಮಾತ್ರ. ಆರಂಭದಲ್ಲಿ ಎದುರಾಗಿರುವ ಕೆಲ ಸಮಸ್ಯೆಗಳಿಂದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.

ನೋಂದಣಿ ಕೇಂದ್ರಗಳ ಸ್ಥಾಪನೆ: ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ನಗರಸಭಾ ಮತ್ತು ಪುರಸಭೆ ವ್ಯಾಪ್ತಿಯಲ್ಲಿ 25 ಕೇಂದ್ರಗಳನ್ನು ತೆರೆಯಲಾಗಿದೆ. ರಾಮನಗರ, ಚನ್ನಪಟ್ಟಣ ನಗರಸಭಾ ವ್ಯಾಪ್ತಿಯಲ್ಲಿ ತಲಾ 5, ಕನಕಪುರ ನಗರಸಭಾ ವ್ಯಾಪ್ತಿಯಲ್ಲಿ 6 ಮತ್ತು ಪಟ್ಟಣ ಪಂಚಾಯ್ತಿಗಳಾದ ಮಾಗಡಿ, ಬಿಡದಿ ಮತ್ತು ಹಾರೋಹಳ್ಳಿ ವ್ಯಾಪ್ತಿಯಲ್ಲಿ ತಲಾ 3 ನೋಂದಣಿ ಕೇಂದ್ರಗಳನ್ನು ತೆರೆದು ಪ್ರತಿ ನೋಂದಣಿ ಕೇಂದ್ರಕ್ಕೆ ನೋಡೆಲ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಇನ್ನು ಗ್ರಾಮಾಂತರ ಪ್ರದೇಶದಲ್ಲಿ 32 ಗ್ರಾಪಂಗಳಲ್ಲಿನ ಬಾಪೂಜಿ ಸೇವಾಕೇಂದ್ರ ಮತ್ತು ಗ್ರಾಮ್‌ ಒನ್‌ಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಮ್‌ ಒನ್‌ ಕೇಂದ್ರಗಳಲ್ಲಿ ಸುಗಮವಾಗಿ ನೋಂದಣಿ ಪ್ರಕ್ರಿಯೆ ನಡೆಯಲಿ ಎಂಬ ಕಾರಣದಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ದಾಖಲೆ ಹೊಂದಿಸಲು ಕಸರತ್ತು: ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ಹಣವನ್ನು ಸರ್ಕಾರ ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್‌ ಖಾತೆಗೆ ಜಮೆ ಮಾಡಲಿದ್ದು, ನೇರನಗದು ವರ್ಗಾವಣೆಗೆ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿರುವುದು ಕಡ್ಡಾಯ. ಕೆಲ ಮಂದಿಯ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಲಿಂಕ್‌ ಆಗದಿದ್ದು, ಕೆಲ ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಇಲ್ಲದಿರುವ ಪ್ರಕರಣಗಳು ಸಾಕಷ್ಟಿದ್ದು, ಇದೀಗ ಆಧಾರ್‌, ಪಾನ್‌ ಲಿಂಕ್‌ ಮಾಡಿಸಲು, ಇ-ಕೆವೈಸಿ ಮಾಡಿಸಲು ಸೈಬರ್‌ ಸೆಂಟರ್‌ಗಳ ಮುಂದೆ ಕಿಕ್ಕಿರಿದು ತುಂಬಿದ್ದಾರೆ. ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಮಹಿಳೆಯರು ಸಾಕಷ್ಟು ಕಸರತ್ತು ನಡೆಸುತ್ತಿದ್ದು ಕಂಡು ಬಂದಿದೆ. ಇನ್ನು ಬ್ಯಾಂಕ್‌ ಖಾತೆ ತೆರೆಯುವುದಕ್ಕಾಗಿ ಮಹಿಳೆಯರು ಬ್ಯಾಂಕ್‌ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯ ವೆನಿಸಿವೆ.

Advertisement

ಶೀಘ್ರ ಪ್ರಜಾಪ್ರತಿನಿಧಿ ನೇಮಕ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿಗಾಗಿ ಸರ್ಕಾರ ಪ್ರತಿ ಸಾವಿರ ಕುಟುಂಬಗಳಿಗೆ ಇಬ್ಬರಂತೆ ಪ್ರಜಾಪ್ರತಿನಿಧಿ ಹೆಸರಿನಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಲಿದ್ದು, ಸ್ವಯಂ ಸೇವಕರಿಗೆ ನೋಂದಣಿಯ ಅಕ್ಸೆಸ್‌ ನೀಡಲಿದ್ದಾರೆ. ಈ ಗಾಗಲೇ ಪ್ರಜಾಪ್ರತಿನಿಧಿಗಳ ಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೇ ಅವರಿಗೆ ತರಬೇತಿ ನೀಡಿ ನೋಂದಣಿ ಮಾಡಲು ನಿಯೋಜನೆ ಮಾಡಲಾ ಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

ಸರ್ವರ್‌ ಸಮಸ್ಯೆ: ಜಿಲ್ಲೆಯ ಕೆಲವೆಡೆ ನೋಂದಣಿ ಮಾಡಿಸಲು ಸರ್ವರ್‌ ಸಮಸ್ಯೆ ಎದುರಾಗಿದ್ದು ಕಂಡುಬಂದಿತು. ಇನ್ನು ಕೆಲ ನೋಂದಣಿ ಕೇಂದ್ರಗಳಲ್ಲಿ ಎಸ್‌ಎಂಎಸ್‌ ಬಂದಿಲ್ಲ. ಎಸ್‌ ಎಂಎಸ್‌ ಬಂದ ಬಳಿಕ ಬನ್ನಿ ಎಂದು ಹಿಂದಕ್ಕೆ ಕಳುಹಿಸುತ್ತಿದ್ದು ಕಂಡು ಬಂದಿತು. ಇನ್ನು ಕೆಲ ಗ್ರಾಮ್‌ ಒನ್‌ ಹಾಗೂ ನೋಂದಣಿ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಸಕಾಲದಲ್ಲಿ ಅರ್ಜಿಗಳು ಸಲ್ಲಿಕೆಯಾಗದೆ ಗಂಟೆಗಟ್ಟಲೆ ಜನತೆ ಕಾಯ್ದು ನಿಲ್ಲುವಂತಾಯಿತು.

ಜಿಲ್ಲೆಗೆ ಪ್ರತಿ ತಿಂಗಳು 62.95 ಕೋಟಿ ರೂ. ಹಣ ಬೇಕು: ರಾಮನಗರ ಜಿಲ್ಲೆಯ ಎಲ್ಲಾ ಅರ್ಹ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂ. ಪಾವತಿ ಮಾಡಲು ಸರ್ಕಾರಕ್ಕೆ 62.95 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಇರುವ 3.14 ಲಕ್ಷ ಕುಟುಂಬಗಳಿಗೆ ಈ ಯೋಜನೆಯನ್ನು ತಲುಪಿಸಲು ಇಷ್ಟು ಹಣ ಬೇಕಿದ್ದು, ಜಿಲ್ಲಾದ್ಯಂತ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಗೆ ಎಷ್ಟು ಹಣ ಸಿಗಲಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ.

ಆರಂಭಿಕ ದಿನಗಳಲ್ಲಿ ಸ್ವಲ್ಪ ವಿಳಂಬವಾಗಿತ್ತು. ಇದೀಗ ಎಲ್ಲಾ ಸಮಸ್ಯೆ ಸರಿಯಾಗಿದೆ. ನೋಂದಣಿಗೆ ಎಸ್‌ ಎಂ ಎಸ್‌ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸದ್ಯ ದಲ್ಲೇ ನೋಂದಣಿ ಪ್ರಕ್ರಿಯೆ ಚುರುಕು ಗೊಳ್ಳಲಿದ್ದು, ಇನ್ನು ಎರಡು ಮೂರು ದಿನದಲ್ಲಿ ಸಾಕಷ್ಟು ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ. ಜನತೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಸಾವಕಾಶವಾಗಿ ನೋಂದಣಿ ಮಾಡಿಸಿಕೊಳ್ಳಿ. ●-ಸುರೇಂದ್ರ. ಬಿ.ಎಲ್‌, ಸಿಡಿಪಿಒ ಮಾಗಡಿ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next