Advertisement

ನೀರಿನ ಬರ: ಅಂತರ್ಜಲ ವೃದ್ಧಿಗೆ ಬೇಕಿದೆ ತ್ವರಿತ ಕ್ರಮ

01:34 PM May 27, 2019 | keerthan |

ಕೋಟ: ಈ ಬಾರಿ ಕರಾವಳಿಯಲ್ಲಿ ಮಳೆ ಸಾಕಷ್ಟು ವಿಳಂಬವಾಗಿದೆ. ಎಲ್ಲಾ ಕಡೆ ಕೆರೆ, ಬಾವಿಗಳಲ್ಲಿನ ನೀರು ಸಂಪೂರ್ಣ ಆವಿಯಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಬೇಸಿಗೆಗಳು ಅತ್ಯಂತ ಕಠಿನವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಮಳೆಗಾಲದಲ್ಲಿ ಅಂತರ್ಜಲ ವೃದ್ಧಿ, ಜಲಮರಪೂರಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಲ ಮೂಲದ ವೃದ್ಧಿಗೆ ಯೋಜನೆಗಳನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ.

Advertisement

ಜಲಮರಪೂರಣದ ಮೂಲಕ ಮನೆ ಅಥವಾ ಇತರ ಕಟ್ಟಡಗಳ ಮೇಲ್ಛಾವಣಿಯ ಇಂಗಿ ಹಾಳಾಗುವ ನೀರನ್ನು ಬಾವಿ, ಕೊಳವೆ ಬಾವಿ, ಇಂಗು ಗುಂಡಿಗಳಲ್ಲಿ ಹಿಡಿದಿಟ್ಟುಕೊಂಡು ಅಂತರ್ಜಲ ಹೆಚ್ಚಿಸಬಹುದು. ಆದರೆ ಮಳೆಗಾಲಕ್ಕೂ ಮೊದಲು ಈ ಕುರಿತು ಒಂದಷ್ಟು ಪೂರ್ವ ತಯಾರಿ ಅಗತ್ಯ.

ಸರಳ ಅಂತರ್ಜಲ ವೃದ್ಧಿ
ಮನೆಯ ಸುತ್ತ-ಮುತ್ತ ಹಾಗೂ ತೋಟ, ಕೃಷಿ ಭೂಮಿಯಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದು ವ್ಯಯವಾಗುತ್ತದೆ. ಹೀಗಾಗಿ ಅಂತಹ ಸ್ಥಳಗಳಲ್ಲಿ ಇಂಗು ಗುಂಡಿಗಳನ್ನು ರಚಿಸಿ ಬೇಸಿಗೆ ತನಕ ಶೇಖರಣೆಯಾಗುವಂತೆ ವ್ಯವಸ್ಥೆ ಮಾಡಿದರೆ ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಎರಿಕೆಯಾಗುತ್ತದೆ. ಇದು ಅತ್ಯಂತ ಸರಳ ವಿಧಾನವಾಗಿದೆ. ಇದರ ಜತೆಗೆ ಮಳೆಗಾಲದ ಅಂತ್ಯದಲ್ಲಿ ಹೊಳೆ, ತೋಡುಗಳಿಗೆ ಕಿಂಡಿ ಅಣೆಕಟ್ಟು, ಒಡ್ಡುಗಳನ್ನು ನಿರ್ಮಿಸುವುದರ ಮೂಲಕ ಅಂತರ್ಜಲ ವೃದ್ಧಿಗೊಳಿಸಬಹುದು.

ಮೇಲ್ಚಾವಣಿ ನೀರು ಶುದ್ಧೀಕರಣ
ಮನೆ ಹಾಗೂ ಇತರ ಕಟ್ಟಡಗಳ ಮೇಲ್ಚಾವಣಿಯ ನೀರನ್ನು ಶುದ್ಧೀಕರಿಸಿ ಬಾವಿ ಅಥವಾ ಇಂಗು ಗುಂಡಿ ಸೇರುವಂತೆ ಮಾಡುವುದರಿಂದ ಜಲಮೂಲದ ರಕ್ಷಣೆಯಾಗುತ್ತದೆ.

ದೊಡ್ಡ ಬ್ಯಾರಲ್‌ವೊಂದಕ್ಕೆ ಒಂದು ಲೇಯರ್‌ ಜಲ್ಲಿ, ಅದರ ಮೇಲೆ ಮರಳು ಅನಂತರ ಇದ್ದಿಲು ಹಾಕಿ, ಕಸಕಡ್ಡಿಗಳು ಬ್ಯಾರಲ್‌ ಸೇರದಂತೆ ಮೆಸ್‌ ಅಳವಡಿಸಿ ಮೇಲ್ಚಾವಣಿಯನ್ನು ಸ್ವಚ್ಚಗೊಳಿಸಿ ಅಗತ್ಯವಿರುವಷ್ಟು ನೀರನ್ನು ಬ್ಯಾರಲ್‌ಗೆ ಬೀಳುವಂತೆ ವ್ಯವಸ್ಥೆ ಮಾಡಿ ಬ್ಯಾರಲ್‌ನ ಮಧ್ಯ ಭಾಗಕ್ಕೆ ಪೈಪ್‌ ಅಳವಡಿಸಿದರೆ ಶುದ್ಧೀಕರಣಗೊಂಡ ನೀರು ನೇರವಾಗಿ ಬಾವಿ ತಲುಪುತ್ತದೆ. ಈ ರೀತಿ ಮಾಡುವುದರಿಂದ ಮೇಲ್ಚಾವಣಿಯ ನೀರು ಪೋಲಾಗುವುದು ತಪ್ಪುತ್ತದೆ. ಮಳೆಗಾಲದ ಕೊನೆಯ ತನಕ ಬಾವಿಯಲ್ಲಿ ನೀರು ತುಂಬಿರುತ್ತದೆ.

Advertisement


ಕೊಳವೆ ಬಾವಿ ಜಲಮರುಪೂರಣ
ಜಲಮರುಪೂರಣ ವಿಧಾನ ಕೊಳವೆ ಬಾವಿಗಳಿಗೆ ಇನ್ನಷ್ಟು ಅನುಕೂಲ ವಾಗಲಿದೆ. ಕೊಳವೆ ಬಾವಿಯ ಪೈಪ್‌ ಸುತ್ತ ಆಳ ಮತ್ತು ಅಗಲವಾಗಿ ಗುಂಡಿಯನ್ನು ತೋಡಿ, ಕೊಳವೆ ಬಾವಿಯ ಪೈಪ್‌ಗೆ ನಾಲ್ಕು ಫೀಟ್‌ ವರೆಗೆ ಚಿಕ್ಕ ಚಿಕ್ಕ ರಂದ್ರ ಕೊರೆದು ಅದರ ಸುತ್ತ ಅಕ್ವಾ ಮೆಷ್‌, ನೈಲಾನ್‌ ಮೆಷ್‌ ಹಾಗೂ ಸ್ಯಾಂಡ್‌ ಫಿಲ್ಟರ್‌ ಅಳವಡಿಸಿ, ತೋಡಿರುವ ಇಂಗು ಗುಂಡಿಗೆ ಮೊದಲು 50 ಪ್ರತಿಶತದಷ್ಟು ದಪ್ಪ ಶಿಲೆಗಲ್ಲನ್ನು ಕ್ರಮವಾಗಿ ಜೋಡಿಸಿ ಅದರ ಮೇಲೆ 40ಎಂ.ಎಂ ಜಲ್ಲಿ, 20 ಎಂಎಂ ಜಲ್ಲಿಕಲ್ಲನ್ನು ಸಮನಾಗಿ ಹಾಕಿ ಬಳಿಕ ಒಂದು ಇಂಚು ಎತ್ತರಕ್ಕೆ ಇದ್ದಿಲು ಹಾಕಿ, ಇದ್ದಿಲಿನ ಮೇಲೆ ಐಡಿಪಿಇ ಮ್ಯಾಟ್‌ ಹಾಕಿ ಎರಡು ಫೀಟ್‌ವರೆಗೆ ಮರಳು ಹಾಕಿದರೆ ಗುಂಡಿ ನೆಲಕ್ಕೆ ಸಮನಾಗಿ ಮುಚ್ಚಿಕೊಳ್ಳುತ್ತದೆ. ಇಂಗು ಗುಂಡಿಯ ಸುತ್ತ ಒಂದು ಫೀಟ್‌ ಎತ್ತರಕ್ಕೆ ಪ್ಯಾರಾಫೀಟ್‌ ಗೋಡೆಯಲ್ಲಿ ಕಟ್ಟಿ ನೀರು ಓಳಭಾಗಕ್ಕೆ ಹರಿಯುವಷ್ಟು ಜಾಗ ಮಾಡಬೇಕು. ಹೀಗೆ ಮಾಡುವುದರಿಂದ ನೀರು ಇಂಗು ಗುಂಡಿಯಲ್ಲಿ ಶೇಖರಣೆಗೊಳ್ಳುತ್ತದೆ. ಮಿಕ್ಕ ನೀರು ಹೊರಕ್ಕೆ ಹರಿದು ಹೋಗುತ್ತದೆ. ಹಾಳಾದ ಕೊಳವೆ ಬಾವಿಗಳಿಗೂ ಈ ರೀತಿ ಮಾಡುವುದರಿಂದ ಹೆಚ್ಚಿನ ನೀರು ಪಡೆಯಬಹುದು.

ಸರಳ ವಿಧಾನವಾದರು ಅಳವಡಿಸಿಕೊಳ್ಳಿ
ಪ್ರಕೃತಿಯ ವಿರುದ್ಧ ಮಾನವನ ಅನಾಚಾರಗಳಿಂದಾಗಿ ಬೇಸಗೆ ವರ್ಷದಿಂದ ವರ್ಷಕ್ಕೆ ಬಹಳ ಕಠಿನವಾಗುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ವ್ಯರ್ಥವಾಗುವ ನೀರನ್ನು ಜಲಮರುಪೂರಣಗೊಳಿಸಿ ಅಂತರ್ಜಲ ವೃದ್ಧಿಗೊಳಿಸದಿದ್ದರೆ ಮುಂದೆ ನೀರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಕನಿಷ್ಠಪಕ್ಷ ಇಂಗು ಗುಂಡಿಗಳನ್ನಾದರೂ ರಚಿಸಿ ನೀರಿನ ರಕ್ಷಣೆ ಮಾಡಬೇಕು.
ಎ.ಎಸ್‌. ಪ್ರವೀಣ್‌, ಜಲತಜ್ಞರು

ಸಮಸ್ಯೆ ನೀಗಲು ಸಹಾಯ
ನಾನು ಕಳೆದ ವರ್ಷ ಮನೆಯ ಮೇಲ್ಚಾವಣಿಯಿಂದ ಬಾವಿಗೆ ಜಲಮರುಪೂರಣ ಅಳವಡಿಸಿಕೊಂಡಿದ್ದು ಈ ಬೇಸಗೆಯಲ್ಲಿ ಹೆಚ್ಚಿನ ನೀರು ಲಭ್ಯವಾಗಿದೆ. ಈ ವಿಧಾನದ ಶುದ್ಧೀಕರಣಗೊಂಡು ಬಾವಿ ಸೇರುವ ನೀರನ್ನು ಎಲ್ಲಾ ಕೆಲಸಗಳಿಗೂ ಉಪಯೋಗಿಸಬಹುದು.
-ಸತೀಶ್‌ ವಡ್ಡರ್ಸೆ, ಮಳೆ ನೀರು ಕೊಯ್ಲು ಅಳವಡಿಸಿಕೊಂಡವರು.

ರಾಜೇಶ ಗಾಣಿಗ ಅಚ್ಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next