ಹುಣಸೂರು: ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಗಳಲ್ಲಿ ಅಗತ್ಯವಿರುವ ಕಡೆ ಶುದ್ಧ ಕುಡಿಯುವ ನೀರಿನ ಘಟಕ, ತೊಂಬೆ, ಅಂಗನವಾಡಿ ಸೇರಿ ವಿವಿಧ ಸೌಲಭ್ಯವನ್ನು ಶೀಘ್ರ ಕಲ್ಪಿಸಲಾಗುವುದು ಎಂದು ಜಿಪಂ ಸಿಇಒ ಶಿವಶಂಕರ್ ಭರವಸೆ ನೀಡಿದರು.
ನಾಗಾಪುರ ಪುನರ್ವಸತಿ ಕೇಂದ್ರದ ಆಶ್ರಮ ಶಾಲೆ ಎದುರು 70 ದಿನಗಳಿಂದ ಭೂ ವಿವಾದ, ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಗಿರಿಜನರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಲ್ಲಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು 14ನೇ ಹಣಕಾಸು ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದು.
ನರೇಗಾ ಯೋಜನೆಯಡಿ ಜಾಬ್‌ಕಾರ್ಡ್, ಭೂಮಿ ಸಮಸ್ಯೆ ಹಾಗೂ ಹೊಸ ಮನೆಗಳ ನಿರ್ಮಾಣಕ್ಕೆ ಡೀಸಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ವೇಳೆ ನಾಗಪುರ ಗಿರಿಜನ ವ್ಯವಸಾಯ ಆಂದೋಲನ ಸಮಿತಿ ಮುಖಂಡ ಜೆ.ಕೆ.ತಿಮ್ಮ ಮಾತನಾಡಿ, ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಗಡಿ ಗುರುತಿಸುವಿಕೆ, ಸರ್ವೇ ಕಾರ್ಯ,
ಭೂಮಿ ಸಮರ್ಪಕ ವಿತರಣೆ ಸೇರಿ ಮೂಲಸೌಲಭ್ಯಕ್ಕಾಗಿ ಎರಡು ದಶಕಗಳಿಂದ ಹೋರಾಟ ಮಾಡುತ್ತಿದ್ದೇವೆ. ಕೇಂದ್ರಕ್ಕೆ ಪ್ರತ್ಯೇಕ ಪಂಚಾಯ್ತಿ, ಕೇಂದ್ರ ವ್ಯಾಪ್ತಿಯ ಎಲ್ಲಾ ಭೂಮಿಯನ್ನೂ ಕಂದಾಯ ಭೂಮಿಯಾಗಿ ಗುರುತಿಸುವುದು. ಕೇಂದ್ರ ಸರ್ಕಾರದ ಪ್ಯಾಕೇಜ್ ಅನ್ವಯ 280 ಕುಟುಂಬಕ್ಕೆ ಸಮರ್ಪಕ ಭೂಮಿ, ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಆಂದೋಲನದ ಸಂಚಾಲಕ ಎಂ.ಬಿ.ಪ್ರಭು ಸಹ ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಾಪಂ ಇಒ ಸಿ.ಆರ್.ಕೃಷ್ಣಕುಮಾರ್, ಪಿಡಿಒಗಳಾದ ನರಹರಿ, ಯಶೋದಾ, ಶಿವಣ್ಣ, ಗಿರಿಜನ ಮುಖಂಡರಾದ ಜೆ.ಕೆ.ಮಣಿ, ಜೆ.ಎ.ಹರೀಶ್,
ಸಣ್ಣಯ್ಯ, ಬಸಪ್ಪ, ಸೋಮಣ್ಣ ಇತರರಿದ್ದರು.