Advertisement

ರಂಗಭೂಮಿ ಮೂಲಕ ಸಮಾಜಮುಖೀ ಚಿಂತನೆ ಬೆಳೆಸಿ: ಉಮೇಶ್‌ ಸಾಲ್ಯಾನ್‌ 

01:00 AM Mar 07, 2019 | Team Udayavani |

ವಿದ್ಯಾನಗರ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಭೂಮಿ ಪ್ರೇರಣೆಯಾಗಬಲ್ಲುದು. ನಾಟಕ, ಸಿನೆಮಾಗಳು ಸಮಾಜಮುಖೀ ಚಿಂತನೆಯತ್ತ ಕೊಂಡೊಯ್ಯಬಲ್ಲುವು ಎಂದು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್‌ ಸಾಲ್ಯಾನ್‌ ಅಭಿಪ್ರಾಯಪಟ್ಟರು.

Advertisement

ಮಧೂರಿನ ಬಳಿ ಸಾಯಿಕೃಷ್ಣ ನಿವಾಸದ ಶ್ರೀ ಕೃಷ್ಣ ಕುಮಾರ್‌ ಹಾಗು ಸ್ವಪ್ನ ಅವರ 11 ವರ್ಷದ ಪುತ್ರ, ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಸಾಯಿಕೃಷ್ಣ ನಿರ್ಮಿಸಿದ ಕಿರುಚಿತ್ರ “ಮ್ಯಾಜಿಕ್‌ ಪೆನ್‌’ನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಅಂಕಗಳಿಸುವುದರ ಬಗೆಗೆ ಮಾತ್ರ ಯೋಚಿಸದೆ ಪಾಠೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದು ಅಗತ್ಯ. ರಂಗಭೂಮಿ ಅನೇಕ ಕೌಶಲಗಳನ್ನು ತಿಳಿಯಪಡಿಸಲು ಸಹಕಾರಿಯಾಗುವುದಲ್ಲದೆ ಸಾಮಾಜಿಕ ತಿಳಿಯಪಡಿಸಲು ಸಹಕಾರಿಯಾಗುವುದಲ್ಲದೇ ಸಾಮಾಜಿಕ ಚಿಂತನೆ, ವ್ಯಕ್ತಿತ್ವವನ್ನು ಬೆಳೆಸಲು ದಾರಿ ತೋರಬಲ್ಲುದೆಂದರು.

ಇತ್ತೀಚೆಗೆ ಅಂತಾರಾಷ್ಟ್ರೀಯ ಮನ್ನಣೆಗಳಿಸಿದ ಕನ್ನಡ ಚಲನಚಿತ್ರ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಇದರಲ್ಲಿ ಒಂದು ಚಿಕ್ಕ ಪಾತ್ರವನ್ನು ಗಿಟ್ಟಿಸಿಕೊಂಡ ಸಾಯಿಕೃಷ್ಣ ತನ್ನ ಪಾತ್ರವನ್ನಲ್ಲದೆ ಇಡೀ ಸಿನೆಮಾವನ್ನು ಕೂಲಂಕಷವಾಗಿ ಅವಲೋಕಿಸುತ್ತಾ ತಾನೂ ಒಬ್ಬ ನಿರ್ಮಾಪಕನಾಗಬೇಕೆಂಬ ಕನಸು ಕಾಣುತ್ತಾ ಅದಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಹೊಂದಿಸುತ್ತಾ ನಿರ್ಮಿಸಿದ ಚೊಚ್ಚಲ ಕಿರುಚಿತ್ರವೇ “ಮೇಜಿಕ್‌ ಪೆನ್‌’ ಇದನ್ನು ತೆರೆಗೆ ತರುವಲ್ಲಿ ಅವನು ಪಟ್ಟ ಶ್ರಮ, ವ್ಯಯಿಸಿದ ಸಮಯ, ಚಿಂತನೆಗಳು ಅಸದೃಶವಾದುದು. ಸಿನೆಮಾ, ನಾಟಕಗಳು ಮಕ್ಕಳ ಚಿಂತನೆಯನ್ನು ಆರೋಗ್ಯಕರವಾಗಿ ಬೆಳೆಸುತ್ತವೆ ಎನ್ನುವುದಕ್ಕೆ ಸಾಯಿಕೃಷ್ಣನ ಪ್ರಯತ್ನ ಉತ್ತಮ ನಿದರ್ಶನ ಎಂದು ಅವರು ಸೂಚಿಸಿದರು.

ಪ್ರಾಂಶುಪಾಲ ಬಿ.ಪುಷ್ಪರಾಜ್‌ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸುವುದು ಹೆತ್ತವರ ಕರ್ತವ್ಯ. ಕೃಷ್ಣಕುಮಾರ್‌ ದಂಪತಿಯರು ಮಗನ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ಅವರ ಶ್ರಮ ಅಸಾಧಾರಣ. ಪ್ರತಿಭೆಯ ವಿಕಾಸಕ್ಕೆ ಹೆತ್ತವರು ಬೆಂಬಲ ನೀಡಿದಲ್ಲಿ ಗುರಿ ತಲುಪುವಲ್ಲಿ ಸಂದೇಹವಿಲ್ಲ. ಎಂದು ಹೇಳಿದರು.

ಅನಂತಪುರ ಕೈಗಾರಿಕಾಭಿವೃದ್ಧಿ ಸಂಘಟನೆಯ ಅಧ್ಯಕ್ಷ ಫಿರೋಜ್‌ಖಾನ್‌, ಬಾಲಕೃಷ್ಣ ಅಗ್ಗಿತ್ತಾಯ, ಉಪಸ್ಥಿತರಿದ್ದರು. ಚಿನ್ಮಯ ವಿದ್ಯಾಲಯದ ಅಧ್ಯಾಪಕ ಶಿವರಾಜ್‌ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ಕುಮಾರ್‌ ವಂದಿಸಿದರು.ಕಿರು ಚಿತ್ರದಲ್ಲಿ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಾದ ದಿಶಾ ಡಿ.ಎಂ., ವಿನೀಶ್‌, ಮಧುಕಿರಣ್‌, ವೈಷ್ಣವಿ ಎಂ.ಭಟ್‌ ,ಧನುಷ್‌ ಟಿ.ವಿ. ಕೂಡಅಭಿನಯಿಸಿದ್ದಾರೆ.

Advertisement

“ಸಾಯಿಕೃಷ್ಣ ಹುಟ್ಟು ಪ್ರತಿಭೆ’ 
ಮುಖ್ಯ ಅತಿಥಿ ಕನ್ನಡ ಸಿನೆಮಾ ನಟ, ನಿವೃತ್ತ ಯೋಧ ತಾರಾನಾಥ್‌ ಬೋಳಾರ್‌ ಮಾತನಾಡುತ್ತಾ ಸಾಯಿಕೃಷ್ಣನದ್ದು ಹುಟ್ಟು ಪ್ರತಿಭೆ. ಪಾತ್ರಗಳ ಆಯ್ಕೆ, ಛಾಯಾಚಿತ್ರ, ಸಂಗೀತ ಸಂಯೋಜನೆ, ಕ್ಷೇತ್ರಗಳ ಆಯ್ಕೆ, ಸಂಭಾಷಣೆಯಲ್ಲಿ ಅವನು ತೋರ್ಪಡಿಸಿದ ಪ್ರಜ್ಞೆ ಈ ಕಿರುಚಿತ್ರ ಸುಂದರವಾಗಿ ಮೂಡಿಬರಲು ಕಾರಣವಾಗಿದೆ. ಇದು ಚಿಕ್ಕ ಮಕ್ಕಳ ನಿಷ್ಕಲ್ಮಶ ಮನಸ್ಸಿನ ಪ್ರತಿಫಲನವೇ ಆಗಿದೆ. ಸಿನೆಮ ಕ್ಷೇತ್ರದಲ್ಲಿ ಈತನಿಗೆ ಉಜ್ವಲ ಭವಿಷ್ಯ ಕಾದಿದೆ ಸಾಯಿಕೃಷ್ಣ ಹೆತ್ತವರ ಶ್ರಮ ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಹೇಳಿದ‌ರು.

Advertisement

Udayavani is now on Telegram. Click here to join our channel and stay updated with the latest news.

Next