Advertisement

ಗಿಡ ಬೆಳೆಸಿ, ಪರಿಸರ ಉಳಿಸಿ, ಪೀಳಿಗೆ ರಕ್ಷಿಸಿ

09:46 AM Jun 06, 2019 | keerthan |

ಉಡುಪಿ: ಇರುವ ಸ್ವಲ್ಪ ಜಾಗದಲ್ಲಾದರೂ ಗಿಡಗಳನ್ನು ಬೆಳೆಸಿ, ಪರಿಸರವನ್ನು ಉಳಿಸಿ, ಈ ಮೂಲಕ ಮುಂದಿನ ಪೀಳಿಗೆಯನ್ನು ಬದುಕುವಂತೆ ಮಾಡಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

Advertisement

ಅವರು ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೆ ಮತ್ತು ಪರಿಸರ ದಿನಾಚರಣೆ ನಿಮಿತ್ತ ಬುಧವಾರ ರಾಜಾಂಗಣದಲ್ಲಿ ನಡೆದ ಸಸ್ಯ
ಗೋಪುರಂ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಳೆ ಕಡಿಮೆಯಾಗಿ ಕೃಷಿಯೂ ಇಲ್ಲವಾಗಿದೆ. ಪರಿಸರ ನಾಶ ಇದಕ್ಕೆ ಕಾರಣವಾಗಿದ್ದು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಸ್ವಲ್ಪ ಜಾಗವಿದ್ದರೆ ಅಲ್ಲಿ ತುಳಸಿ ಗಿಡವನ್ನಾದರೂ ನೆಡಿ. ಪರಿಸರಪ್ರಜ್ಞೆಯನ್ನು ಸಾಕಾರಗೊಳಿ ಸೋಣ ಎಂದು ಸ್ವಾಮೀಜಿ ಆಶಿಸಿದರು.

ಈಗ ನಾವು ಕಾಣುತ್ತಿರುವ ವಾತಾವರಣ ಕಾಣುವಾಗ ಮುಂದೆ 50, 100 ವರ್ಷಗಳ ಬಳಿಕ ನಮ್ಮ ಮುಂದಿನ ಪೀಳಿಗೆ ಹೇಗೆ ಇರಬಹುದು ಎಂಬ ಪ್ರಶ್ನೆ ಮೂಡುತ್ತದೆ. ಆರು ಇಂಚು ಸಮುದ್ರದ ನೀರು ಏರಿದರೆ ಇಡೀ ಉಡುಪಿಯೇ ಮುಳುಗಿ ಹೋಗುತ್ತದೆ. ನಾವು ಸರಕಾರ ಮಾಡಲಿ ಎಂದು ಕೈಕಟ್ಟಿ ಕುಳಿತರೆ ಆಗದು. ನಮ್ಮ ನಮ್ಮ ಪಾತ್ರವನ್ನು ಅರಿತು ಪರಿಸರ ರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಡಾ| ಹೆಗ್ಗಡೆ ಹೇಳಿದರು.  ಇದೇ ವೇಳೆ ಸುವರ್ಣ ಗೋಪುರ ನಿರ್ಮಾಣ ಕಾರ್ಯಕ್ಕೆ ಡಾ| ಹೆಗ್ಗಡೆಯವರು 5 ಲಕ್ಷ ರೂ. ಮತ್ತು ಗಿರಿಧರ ಗೋಪಾಲ ಎನ್ನುವ ಭಕ್ತರೊಬ್ಬರು 330 ಗ್ರಾಂ ಚಿನ್ನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನವವಿಧ ಭಕ್ತಿಯಿಂದ ನಮ್ಮ ಮನಸ್ಸನ್ನು ಸುವರ್ಣವನ್ನಾಗಿಸಿದರೆ ಭಗವಂತ ನಮ್ಮ ದೇಹದಲ್ಲಿ ಸ್ಥಾಪನೆಯಾಗುತ್ತಾನೆ ಎಂದರು.

Advertisement

ವಿದ್ವಾಂಸ ಕಲ್ಲಾಪುರ ಪವಮಾನಾಚಾರ್ಯ ಪ್ರವಚನ ನೀಡಿದರು. ವಿಜಯ ಬ್ಯಾಂಕ್‌ (ಬ್ಯಾಂಕ್‌ ಆಫ್ ಬರೋಡ) ಮಂಗಳೂರಿನ ಮಹಾ ಪ್ರಬಂಧಕ ಎಂ.ಜೆ. ನಾಗರಾಜ್‌, ಕಟೀಲಿನ ಅರ್ಚಕ ವಾಸುದೇವ ಆಸ್ರಣ್ಣ, ಉದ್ಯಮಿ ಹೊಸಪೇಟೆಯ ಪ್ರಭಾಕರ ಸೆಟ್ಟಿ ದಂಪತಿ, ಹರಿಕೃಷ್ಣ ಪುನರೂರು, ವಿವಿಧೆಡೆ ಪವಿತ್ರ ವನ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡ ಧರ್ಮ ಫೌಂಡೇಶನ್‌ನ ಗಿರೀಶ್‌ ಜಿ.ಎನ್‌., ಹರಿಯಪ್ಪ ಕೋಟ್ಯಾನ್‌ ಮುಖ್ಯ ಅತಿಥಿಗಳಾಗಿದ್ದರು.

ದಿವಾನ್‌ ಶಿಬರೂರು ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು. ವಾಗೀಶ
ಆಚಾರ್ಯರು ಬರೆದ ಮಧ್ವಾಚಾರ್ಯರ ಅಣುಮಧ್ವವಿಜಯ ಕುರಿತ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಬಿದಿರಿನ ಪಾತ್ರೆಯಲ್ಲಿ ತುಳಸಿ
ಇಂದು ತುಳಸಿ ಸಸಿಗಳನ್ನು ಬಿದಿರಿನ ಪಾತ್ರೆಯಲ್ಲಿರಿಸಿ ವಿತರಿಸಲಾಯಿತು. ಇದರಿಂದ ಬಿದಿರೂ, ತುಳಸಿ ಎರಡೂ ಬೆಳೆಯಲೂ ಸಾಧ್ಯ.

ವೈಜ್ಞಾನಿಕ ಆಚರಣೆಗಳಿಗೆ ಪಾವಿತ್ರ್ಯದ ಸ್ಪರ್ಶ
ಸುಮ್ಮನೆ ನೀರಿನೊಂದಿಗೆ ತುಳಸಿ ದಳವನ್ನು ಹಾಕಿ ಸೇವಿಸಿ ಎಂದಿದ್ದರೆ ಕುಡಿಯುತ್ತಿರಲಿಲ್ಲ, ತೀರ್ಥದ ಪರಿಕಲ್ಪನೆ ಕೊಟ್ಟರು. ಗೋಮೂತ್ರ, ಗೋರೋಚನದ ಮಹತ್ವ ತಿಳಿದಿದ್ದರಿಂದಲೇ ಗೋವುಗಳಿಗೆ ಪೂಜನೀಯ ಸ್ಥಾನ ಕೊಟ್ಟರು. ಹಿರಿಯರು ಹೀಗೆ ವೈಜ್ಞಾನಿಕ ಆಚರಣೆಗಳಿಗೆ ಪಾವಿತ್ರ್ಯದ ಪರಿಕಲ್ಪನೆ ಕೊಟ್ಟರು. ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತೇವೆಂದಿದ್ದರೆ ಗಾಂಧೀಜಿಯವರಿಗೆ ಜನರು ಚಿನ್ನವನ್ನು ಕೊಡುತ್ತಿರಲಿಲ್ಲ. ದೇಶ ಸೇವೆ ಮಾಡುತ್ತೇನೆಂದಾಗ ಕೊಟ್ಟರು.
ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next