ಮಂಡ್ಯ: ಬೆಳೆ ಸಂಬಂಧಿತ ತಂತ್ರಜ್ಞಾನ ಹಾಗೂ ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಹಾಗೂ ಅಧಿಕ ಹಸಿರು ಮೇವನ್ನು ಪಡೆಯುವಂತೆ ಅಖೀಲ ಭಾರತ ಸುಸಂಘಟಿತ ಮೇವು ಬೆಳೆ ಸಂಶೋಧನಾ ಸಂಯೋಜಕ ಡಾ.ಎ.ಕೆ. ರಾಯ್ ತಿಳಿಸಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಮೇವುಬೆಳೆ ವಿಭಾಗದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಮೇವುಬೆಳೆ)ಯಡಿ ತಾಲೂಕಿನ ಜಯಪುರ ಗ್ರಾಮದಲ್ಲಿ ಮೇವುಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಎನ್.ವಾಸು ದೇವನ್ ಮಾತನಾಡಿ, ರೈತರು ಕಡಿಮೆ ಬಂಡವಾಳದಲ್ಲಿ ಅಧಿಕ ಆದಾಯ ಪಡೆಯಬೇಕೆಂದರೆ ಸಮಗ್ರ ಕೃಷಿ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಮಣ್ಣಿನ ಆರೋಗ್ಯ ಕಾಪಾಡಬೇಕೆಂದರು.
ಕಡಿಮೆ ಖರ್ಚಿನಲ್ಲಿ ಅಧಿಕ ಹಾಲು ಉತ್ಪಾದನೆ ಮಾಡಬೇಕಾದರೆ ಅಧಿಕ ಹಸಿರು ಮೇವಿನ ಇಳುವರಿ ನೀಡುವ ಹೊಸ ಹೊಸ ತಳಿಗಳು ಹಾಗೂ ತಂತ್ರ ಜ್ಞಾನಗಳನ್ನ ಬಳಸುವುದರ ಜೊತೆಗೆ ಬದುಗಳ ಮೇಲೆ ಮೇವಿನ ಮರಗಳು ಹಾಗೂ ಮೇವಿನ ಬೆಳೆಗಳನ್ನ ಬೆಳೆಯ ಬೇಕೆಂದು ಹಾಗೂ ಪ್ರತಿ ವರ್ಷ ವಿ.ಸಿ. ಫಾರಂ ಆವರಣದಲ್ಲಿ ಹಮ್ಮಿಕೊಳ್ಳಲಾಗುವ ಕೃಷಿಮೇಳದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ವಿಜ್ಞಾನಿಗಳಾದ ಡಾ.ಬಿ.ಜಿ.ಶೇಖರ್, ಡಾ.ಪಿ.ಮಹದೇವು ಹಾಗೂ ಡಾ. ಮಹ ದೇವಯ್ಯ ಮೇವು ಬೆಳೆಗಳು, ಪಶು ಆಹಾರ ಹಾಗೂ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ರೈತರನ್ನು ಡಾ. ಬಿ.ಜಿ.ಶೇಖರ್ ಸ್ವಾಗತಿದರು. ನಾಗೇಶ್ ಚಿಕ್ಕರೂಗಿ ಮತ್ತು ಸತೀಶ್ ಹಾಜರಿದ್ದರು.