ಹುಬ್ಬಳ್ಳಿ: ನವ ಮಾಧ್ಯಮಗಳ ಆಗಮನದ ನಂತರ ಆಧುನಿಕ ಹವ್ಯಾಸಿ ರಂಗಭೂಮಿಗೆ ಭವಿಷ್ಯವಿಲ್ಲದಂತಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಹೇಳಿದರು.
ಗೋಕುಲ ರಸ್ತೆ ರಾಮ ಮನೋಹರ ಲೋಹಿಯಾ ನಗರದ ಕೆರೆ ಬಳಿಯ ಗುರು ಇನ್‌ಸ್ಟಿಟ್ಯೂಟ್ ಸ್ಥಾಪಿಸಿರುವ ಆದಿ ರಂಗ ಥೇಟರ್ ಕಲಾಸಂಕುಲ ಲೋಕಾರ್ಪಣೆ ಮಾಡಿ ಮಾತನಾಡಿದರು. ಇಂದು ನಾವು ನೋಡಿದ್ದನ್ನೇ ನಂಬುತ್ತೇವೆ. ಪ್ರಸ್ತುತ ಒಂದು ಸುಳ್ಳನ್ನು ನಿಜವಾಗಿಸಲು ಒಂದು ಬಾರಿ ಪ್ರದರ್ಶಿಸಿದರೆ ಸಾಕು. ಅದರಲ್ಲಿ ಎಷ್ಟು ಸುಳ್ಳನ್ನು ಬೇಕಾದರು ಹೇಳಲು ಸಾಧ್ಯ. ಧರ್ಮ ಬಿಟ್ಟ ರಂಗಭೂಮಿ ಎಂದು ನಶಿಸುತ್ತದೋ ಗೊತ್ತಿಲ್ಲ. ಹವ್ಯಾಸಿ ರಂಗಭೂಮಿ ಗಟ್ಟಿಯಾಗಿ ನಡೆಸಿಕೊಂಡು ಹೋಗುವುದು ಕಷ್ಟ. ಅದಕ್ಕೆ ಭವಿಷ್ಯ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ರಂಗಭೂಮಿ ಉಳಿಸಿ, ಬೆಳೆಸಲುಯಶವಂತ ಸರದೇಶಪಾಂಡೆ ಮುಂದಾಗಿರುವುದು ಆಶ್ಚರ್ಯ. ಅದಕ್ಕಾಗಿ ಹೊಸ ಹೊಸ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಅರವಿಂದ ಬೆಲ್ಲದ ಆದಿರಂಗ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿ, ಕಲೆ ಮತ್ತು ಅದರ ನಿರ್ವಹಣೆ, ಮನೋರಂಜನೆ ಮಾಡುವುದರಲ್ಲಿ ಯಶವಂತ ಸರದೇಶಪಾಂಡೆ ಹೆಸರು ಮಾಡಿ ಅಸ್ತಿತ್ವ ಕಂಡುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ
ಕಲಾ ಚಟುವಟಿಕೆಗಳು ಕಡಿಮೆಯಿದ್ದರೂ ಸಾಹಸ ಮಾಡಿ ರಂಗಭೂಮಿ ಕಟ್ಟಿದ್ದಾರೆ. ಅವರಈ ಪ್ರಯತ್ನಕ್ಕೆ ಎಲ್ಲರೂ ಪ್ರೋತ್ಸಾಹ ನೀಡುವ ಮೂಲಕ ವಾಣಿಜ್ಯ ನಗರಿಯಲ್ಲೂ ರಂಗಕಲೆ ಚಟುವಟಿಕೆಗಳು ನಡೆಯುವಂತಾಗಲಿ. ಆದಿ ರಂಗ ಥೇಟರ್ ಎದುರಿನ ರಾಯನಾಳ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಮೊರಾರ್ಜಿ ನಗರದಿಂದ ಆರ್.ಎಂ. ಲೋಹಿಯಾನಗರವರೆಗಿನ ಮುಖ್ಯ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ನಿರ್ಮಿಸಲಾಗುವುದು ಎಂದರು.
ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಉದ್ಯಮಿ ಎಚ್. ನಂದಕುಮಾರ, ಖ್ಯಾತ ಕೊಳಲು ವಾದಕ ಪ್ರವೀಣ ಗೋಡಖೀಂಡಿ, ವೈದ್ಯ ಡಾ| ಶಂಕರ ಬಿಜಾಪುರ, ಕೆಇ ಬೋರ್ಡ್ಸ್ ಕಾಲೇಜು ಪ್ರಾಚಾರ್ಯ ಮೋಹನ ಸಿದ್ಧಾಂತಿ, ಪಾಲಿಕೆ ಮಾಜಿ ಸದಸ್ಯ ರಾಮಣ್ಣ ಬಡಿಗೇರ, ಜಯಂತ ಅರಬಟ್ಟಿ ಮಾತನಾಡಿದರು. ಮಧುಕರ ಮಾಸ್ತರ, ಮಧು ಉಮರ್ಜಿ, ಗೋಪಾಲ ದೇಶಪಾಂಡೆ,ಪ್ರಸನ್ನದತ್ತ ಸರದೇಶಪಾಂಡೆ, ಅರವಿಂದ ಪಾಟೀಲ, ಕೃತಿಕಾ ಸರದೇಶಪಾಂಡೆ ಮೊದಲಾದವರಿದ್ದರು.ಮಾಲತಿ ಸರದೇಶಪಾಂಡೆ, ಗಾಯತ್ರಿ ದೇಶಪಾಂಡೆ ಸ್ವಾಗತಿಸಿದರು. ಎಂ.ಎ. ಸುಬ್ರಮಣ್ಯ ನಿರೂಪಿಸಿದರು.