Advertisement

ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ

07:05 PM Nov 21, 2017 | Team Udayavani |

ಚಿಕ್ಕಮಗಳೂರು: ಮಕ್ಕಳನ್ನು ಕೇವಲ ಶಾಲಾ ಪಠ್ಯಕ್ಕೆ ಸೀಮಿತವಾಗಿಸದೆ, ಅವರುಗಳಲ್ಲಿ ಪುಸ್ತಕಗಳನ್ನು ಓದಿಸುವ ಹವ್ಯಾಸ ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕೆಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್‌.
ಮಹೇಶ್‌ ಹೇಳಿದರು.

Advertisement

ನಗರದ ಕುವೆಂಪು ಕಲಾ ಮಂದಿರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ
ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಶಾಲಾ ಪಠ್ಯಕ್ಕೆ ಮಾತ್ರ
ಸಿಮೀತವಾಗಬಾರದು. ಅವರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಈ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರುಗಳದ್ದಾಗಿದೆ. ಅನೇಕ ಲೇಖಕರು ರಚಿಸಿದ ಪುಸ್ತಕಗಳನ್ನು ಮಕ್ಕಳು ಓದಲು ಶಿಕ್ಷಕರು ಪ್ರೇರೇಪೀಸಬೇಕೆಂದು ಸಲಹೆ ನೀಡಿದರು.

ಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪುಸ್ತಕ ಓದುವತ್ತ ಜನರನ್ನು ಸೆಳೆಯುವ ಕೆಲಸ ಗ್ರಂಥಾಲಯಗಳು ಮಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಆದರೆ ಈ ಗ್ರಂಥಾಲಯವನ್ನು ಎಷ್ಟು ಜನ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಓದುಗರನ್ನು ಗ್ರಂಥಾಲಯಕ್ಕೆ ಸೆಳೆಯುವ ಕೆಲಸವನ್ನು ಗ್ರಂಥ ಪಾಲಕರು ಮಾಡಬೇಕು ಎಂದು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯಗಳು ದುಸ್ಥಿತಿಯಲ್ಲಿವೆ. ಗ್ರಂಥಾಲಯಗಳ ಅಭಿವೃದ್ಧಿಗೆ
ಸ್ಥಳೀಯ ಸಂಸ್ಥೆಗಳು ಶೇ.6ರಷ್ಟು ಸೆಸ್‌ ತೆರಿಗೆ ನೀಡಬೇಕೆಂದು ಕಾನೂನು ಇದ್ದರು ಪಾಲನೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳು
ಗ್ರಂಥಾಲಯಕ್ಕೆ ನೀಡಬೇಕಾದ ತೆರಿಗೆಯನ್ನು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿವೆ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ನಗರಸಭೆ ಸದಸ್ಯರು ಗ್ರಂಥಾಲಯಕ್ಕೆ ಸೆಸ್‌ ನೀಡಲು
ಆಸಕ್ತಿ ತೋರಬೇಕು ಎಂದರು. 

ಇಂದು ಸ್ಪರ್ಧಾತ್ಮಕ ಯುಗ. ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಸ್ಥಳೀಯ ಸಂಸ್ಥೆಗಳು ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪುಸ್ತಗಳನ್ನು ಕೊಡುಗೆಯಾಗಿ ನೀಡಿದಾಗ ಹೆಚ್ಚಿನ
ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀಕಂಠ ಕೂಡಿಗೆ ಮಾತನಾಡಿ, ಚೀನಾ ದೇಶದವರಲ್ಲಿ ಪುಸ್ತಕ ಓದುವ ಹವ್ಯಾಸ ಜಾಸ್ತಿಯಿರುವುದರಿಂದ ಚೀನಾ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಪುಸ್ತಕಗಳಿಂದ ನಾನಾ ಕ್ಷೇತ್ರದ ಜ್ಞಾನ ಪಡೆದುಕೊಳ್ಳಬಹುದು. ನಮ್ಮಲ್ಲಿಯೂ ಪುಸ್ತಕ ಓದುವ ದಾಹ ಬೆಳೆಸಿಕೊಳ್ಳಬೇಕು. ಗ್ರಂಥಾಲಯಗಳು ಜ್ಞಾನ ಕೇಂದ್ರವಾಗಬೇಕು. ಪುಸ್ತಕಗಳನ್ನು ಪ್ರೀತಿಸಬೇಕು. ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಗ್ರಂಥಲಾಯಗಳು ಹೆಚ್ಚಿಸಬೇಕೆಂದು ಸಲಹೆ ನೀಡಿದರು.

Advertisement

ಬೆಂಗಳೂರಿನ ವಿಧಾನ ಸೌಧದ ಮಗ್ಗಲಲ್ಲೇ ಕೇಂದ್ರ ಗ್ರಂಥಾಲಯವಿದ್ದರೂ ರಾಜ್ಯದ 224 ಕ್ಷೇತ್ರದ ಶಾಸಕರು ಗ್ರಂಥಾಲಯಕ್ಕೆ ಭೇಟಿ ನೀಡಿಲ್ಲ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ 10 ದಿನಗಳ ಕಾಲ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು. ಇವರನ್ನು ಹೊರತುಪಡಿಸಿ ಉಳಿಸ ಶಾಸಕರ್ಯಾರು ಭೇಟಿ ನೀಡಿಲ್ಲ. ಇದು ದುರಂತದ ಸಂಗತಿ ಎಂದು ವಿಷಾದಿಸಿದರು.

ಜಿಲ್ಲಾ ಗ್ರಂಥಾಲಯ ಅಧಿಕಾರಿ ಉಮೇಶ್‌ ಮಾತನಾಡಿ, ಜಿಲ್ಲೆಯಲ್ಲಿ 226 ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯಗಳಿವೆ.
ಒಂದು ಸಂಚಾರಿ ಗ್ರಂಥಾಲಯ ಇದೆ. ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಿತ್ಯ 150 ಜನರು ಸ್ಪರ್ಧಾತ್ಮಕ ಪರಿಕ್ಷೆಗಳ ಪುಸ್ತಕವನ್ನು
ಓದುತ್ತಾರೆ. ಸ್ಪರ್ಧಾತ್ಮಕ ಅಧ್ಯಯನ ಕೇಂದ್ರವನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಅನುದಾನದ ಕೊರತೆ ಇದೆ ಎಂದರು.

 ಜಿಲ್ಲಾ ಪಂಚಾಯತ್‌ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ ಬಣಕಲ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ, ಜಿಪಂ ಸದಸ್ಯರಾದ ಬಿ.ಜಿ.ಸೋಮಶೇಖರ್‌, ಜಸಂತ ಅನಿಲ್‌ಕುಮಾರ್‌, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌, ತಾಲೂಕು ಪಂಚಾಯತ್‌ ಅಧ್ಯಕ್ಷ ಈ.ಆರ್‌.ಮಹೇಶ್‌ ಇದ್ದರು. ಕಾರ್ಯಕ್ರಮಕ್ಕೂ ಮೊದಲು ನಗರದ ಮುಖ್ಯರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next