Advertisement

ಪ್ರತಿಯೊಬ್ಬರಲ್ಲೂ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ

09:40 AM Apr 24, 2019 | Lakshmi GovindaRaju |

ನಂಜನಗೂಡು: ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದರು.

Advertisement

ನಗರದ ಶೇಷಾದ್ರಿ ಪುಸ್ತಕ ಮನೆ ಹಾಗೂ ಬ್ರಾಹ್ಮಣ ಧರ್ಮ ಸಹಾಯ ಸಭೆಯ ಸಹಯೋಗದೊಂದಿಗೆ ಬ್ರಾಹ್ಮಣ ಧರ್ಮ ಸಹಾಯಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಲತಾಣ ವ್ಯಾಮೋಹ: ಪುಸ್ತಕ ಓದುವ ಸಂಸ್ಕೃತಿ ನಮ್ಮ ಪರಂಂಪರೆ‌ಯಿಂದ ಬಂದಿದ್ದು, ಟೀವಿ, ಮೊಬೈಲ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ಅದು ಜನ ಮಾನಸದಿಂದ‌ ಮರೆಯಾಗಲಾರಂಭಿಸಿದೆ. ಓದುವ ಸಂಸ್ಕೃತಿ ಯಾವುದೇ ಕಾರಣಕ್ಕೂ ನಶಿಸಬಾರದು, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ, ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.

ಪುಸ್ತಕ ಉಚಿತ: ದ‌ಶಕಗಳ ಹಿಂದೆ ಎಲ್ಲೆಡೆ ಖಾಸಗಿ ವಾಚನಾಲಯಗಳಿದ್ದವು ಎಂಬುದನ್ನು ಸ್ಮರಿಸಿದ ಅವರು, ಅಂದು ಅಲ್ಲಿನ ಪುಸ್ತಕಗಳನ್ನು ದೈನಂದಿನ ಶುಲ್ಕ ನೀಡಿ ಓದಲಾಗುತ್ತಿತ್ತು. ಆದರೆ, ಇಂದು ಉಚಿತವಾಗಿ ನೀಡಿದರೂ ಓದಲು ಬರುವವರೇ ಇಲ್ಲವಾಗಿದೆ. ಇದನ್ನು ಕಂಡೆ ಯುನಿಸ್ಕೋದವರು ಓದುವ ಸಂಸ್ಕೃತಿ ಪ್ರೋತ್ಸಾಹಿಸಲು 1995ರಲ್ಲಿ ವಿಶ್ವ ಪುಸ್ತಕ ದಿನಾಚರಣೆಯನ್ನು ಪ್ರಾರಂಭಿಸಿದರು ಎಂದು ಹೇಳಿದರು.

ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಶೇಷಾದ್ರಿ ಪುಸ್ತಕ ಮನೆಯ ಜನಕ ಎಂದು ಬಣ್ಣಸಿದ ಅವರು, ನಂಜನಗೂಡು ಸತ್ಯನಾರಾಯಣ ಇಂದು ಐತಿಹಾಸಿಕ ಪರಂಪರೆಯ ತವರಾದ ಇಲ್ಲಿ ವಿಶ್ವ ಪುಸ್ತಕ ದಿನಾಚರಣೆ ಏರ್ಪಡಿಸಿರುವುದು ಶ್ಲಾಘನೀಯ. ಈ ಮೂಲಕವಾದರೂ ಓದವವರ ಸಂಖ್ಯೆ ವೃದ್ಧಿಯಾದರೆ ಅವರ ಶ್ರಮ ಸಾರ್ಥಕವಾಗಲಿದೆ ಎಂದು ರಾಜು ತಿಳಿಸಿದರು.

Advertisement

ಪುಸ್ತಕವೇ ಸಂಗಾತಿ: ಸಮಾಜ ಸೇವಕ ಯು.ಎನ್‌. ಪದ್ಮನಾಭರಾವ್‌ ಮಾತನಾಡಿ, ಪುಸ್ತಕ ಓದುವ ಹವ್ಯಾಸ ವೃದ್ಧಾಪ್ಯದ ದಿನಗಳಲ್ಲಿ ನಿಮ್ಮ ಸಂಗಾತಿಯಾಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಶಾಲೆಗಳಿಂದಲೇ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದ್ದು, ಶಿಕ್ಷಕರು ಈ ನಿಟ್ಟಿನತ್ತ ಕಾರ್ಯೋನ್ಮುಖರಾದಾಗ ಮಾತ್ರ ಓದುವ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.

ತಮ್ಮ ಸಂಗ್ರಹದಲ್ಲಿ 5 ರಿಂದ 6 ಸಾವಿರ ಪುಸ್ತಕಗಳಿದ್ದು, ಇವುಗಳೆಲ್ಲವನ್ನೂ ತಾವು ಓದಿದ್ದು ತಮ್ಮಲ್ಲಿ ಓದುವ ಅಭ್ಯಾಸ ಬೆಳೆಸಿದ್ದು 60 ರ ದಶಕದ ಚಂದಮಾಮ ಹಾಗೂ ಎಚ್‌. ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿ ಎಂಬುದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿ ಪುಸ್ತಕ ಮನೆಯ ಮಾಲೀಕರಾದ ನಂಜನಗೂಡು ಸತ್ಯನಾರಾಯಣ, ವಿಚಾರ ವೇದಿಕೆಯ ಜಗದೀಶ, ನಿವೃತ್ತ ಅಧಿಕಾರಿ ಲಿಂಗಣ್ಣಯ್ಯ ,ರಮೇಶ, ಸೌಗಂಧಿಕಾ ಜೋಯಸ್‌, ಲೋಕೇಶ ಮತ್ತಿತರರು ಉಪಸ್ಥಿತರಿದ್ದರು. ಗೊಪಿನಾಥ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next