Advertisement

ಮಳೆ ಪ್ರಮಾಣ ಹೆಚ್ಚಿದ್ದರೂ ಅಂತರ್ಜಲ ಮಟ್ಟ ಕುಸಿತ 

05:31 AM Jan 10, 2019 | |

ಸುಳ್ಯ: ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ಅಂತರ್ಜಲ ಮಟ್ಟ ಕುಸಿದಿದೆ. ಇದು ಎಚ್ಚರಿಕೆಯ ಕರೆ ಗಂಟೆಯಾಗಿದೆ. ಕಳೆದ ಎರಡು ವರ್ಷಗಳ ಜನವರಿಯಿಂದ ಡಿಸೆಂಬರ್‌ ತನಕದ ಅಂಕಿ-ಅಂಶಗಳ ಪ್ರಕಾರ 2018ರ ಸ್ಥಿತಿಯಿದು. ಹೊಸ ವರ್ಷದ ಆರಂಭದ ತಿಂಗಳಲ್ಲೇ ನೀರಿನ ಹಾಹಾಕಾರ ಉಂಟಾಗಬಹುದು ಎನ್ನುವ ಮುನ್ಸೂಚನೆ ಇದಾಗಿದೆ. ಹಾಗಾಗಿ ಜಲ ಸಂರಕ್ಷಣೆಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಾಮುಖ್ಯ ನೀಡಬೇಕು ಎನ್ನುವುದು ಇನ್ನಾದರೂ ಅರಿವಾಗಬೇಕು.

Advertisement

ಗರಿಷ್ಠ ಕುಸಿತ
ಐದು ವರ್ಷಗಳ ಅಂಕಿ-ಅಂಶ ಗಮನಿಸಿದರೆ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿರುವುದು ಗಮನಕ್ಕೆ ಬರುತ್ತದೆ. ಆದರೆ ಕುಸಿದಿದ್ದ ಮಳೆ ಪ್ರಮಾಣ 2018ರಲ್ಲಿ ಏರಿಕೆ ಕಂಡಿದೆ. ಅದು ಪ್ರಾಕೃತಿಕ ವಿಕೋಪದ ಪರಿಣಾಮ ಆಗಿರಬಹುದಾಗಿದೆ. ಹೊಸ ವರ್ಷದಲ್ಲಿ ಮುಂದುವರಿಯುತ್ತದೆ ಎನ್ನುವಂತಿಲ್ಲ.

2017ರಲ್ಲಿ ಮಂಗಳೂರು ತಾಲೂಕಿನಲ್ಲಿ 14.52 ಮೀ.ನಲ್ಲಿದ್ದ ಅಂತರ್ಜಲ ಮಟ್ಟ 2018ರಲ್ಲಿ 16.68 ಮೀ., ಪುತ್ತೂರಿನಲ್ಲಿ 6.83 ಮೀ.ನಿಂದ 8.88 ಮೀ., ಬೆಳ್ತಂಗಡಿಯಲ್ಲಿ 11.02ರಿಂದ 11.04 ಮೀ., ಬಂಟ್ವಾಳದಲ್ಲಿ 7.45ರಿಂದ 8.61 ಮೀ.ಗೆ ಕುಸಿದಿದೆ. ಸುಳ್ಯ ತಾಲೂಕಿನಲ್ಲಿ 9.53 ಮೀ.ನಲ್ಲಿದ್ದುದು 9.36 ಮೀ.ಗೆ ಏರಿದೆ. ಅರಣ್ಯ ನಾಶ, ಪ್ರಕೃತಿ ವಿರೋಧಿ ಕೃತ್ಯ, ನೀರಿಂಗಿಸಲು ಪೂರಕ ಕ್ರಮಗಳು ಇಲ್ಲದಿರುವುದು ಸತತವಾಗಿ ಅಂತರ್ಜಲ ಮತ್ತು ಮಳೆ ಕುಸಿತಕ್ಕೆ ಕಾರಣ ಎಂದು ಅಧ್ಯಯನಗಳು ತಿಳಿಸಿವೆ.

1.04 ಮೀ. ಕುಸಿತ
2017ಕ್ಕೆ ಹೋಲಿಸಿದರೆ 2018ರಲ್ಲಿ ಅಂತರ್ಜಲ ಮಟ್ಟ 1.04 ಮೀ.ನಷ್ಟು ಕೆಳಕ್ಕೆ ಕುಸಿದಿದೆ. 2017ರಲ್ಲಿ 9.87 ಮೀ.ನಲ್ಲಿದ್ದ ಮಟ್ಟ 2018ರಲ್ಲಿ 10.91 ಮೀ.ಗೆ ಜಾರಿದೆ. ಜನವರಿಯಿಂದ ಡಿಸೆಂಬರ್‌ ತನಕದ ಪ್ರತಿ ತಿಂಗಳ ಜಲಮಟ್ಟ ಗಮನಿಸಿದರೆ ಹೆಚ್ಚಾಗಿ ಕುಸಿತವೇ ದಾಖಲಾಗಿದೆ. ಸುಳ್ಯದಲ್ಲಿ ಮಾತ್ರಕೊಂಚ ಸುಧಾರಣೆ ಬಿಟ್ಟರೆ ಬಾಕಿ ಎಲ್ಲ ತಾ| ಗಳಲ್ಲಿ ಗ್ರಾಫ್‌ ಇಳಿಮುಖವೇ ಇದೆ.

ಜನಜಾಗೃತಿ ಅವಶ್ಯ
ಮಳೆ ನೀರು ಸದ್ಬಳಕೆ, ಅಂತರ್ಜಲ ಮಟ್ಟ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಸ್ವಂತ ಜಮೀನಿನಲ್ಲಿ ಇಂಗುಗುಂಡಿಯಂತಹ ಅಂತರ್ಜಲ ವೃದ್ಧಿಗೆ ಸಹಕಾರಿಯಾದ
ಪೂರಕ ಕ್ರಮಗಳನ್ನು ಗರಿಷ್ಠ ಪ್ರಮಾಣದಲ್ಲಿ ಅನುಷ್ಠಾನಿಸಬೇಕು. ಜಲಸಂರಕ್ಷಣೆ ಕುರಿತು ಜನಜಾಗೃತಿ ಅತ್ಯವಶ್ಯವಾಗಿದೆ.
-ಜಾನಕಿ,
ಭೂ ವಿಜ್ಞಾನಿ, ಅಂತರ್ಜಲ ವಿಭಾಗ,
ಮಂಗಳೂರು

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next