Advertisement

ಅಂತರ್ಜಲ ಸಂರಕ್ಷಣೆ: ಪರಿಣಾಮಕಾರಿ ಕ್ರಮಕ್ಕೆ ಸೂಚನೆ

09:40 PM May 03, 2019 | Lakshmi GovindaRaj |

ಹಾಸನ: ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಅರಸೀಕೆರೆ ತಾಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಸೀಕೆರೆ ತಾಲೂಕಿನಲ್ಲಿ ಜಲ ಮರುಪೂರಣಕ್ಕೆ ಹೆಚ್ಚು ಗಮನಹರಿಸಬೇಕು. ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ನಿಮಯ ಹಾಗೂ ನಿಯಂತ್ರಣಕ್ಕಾಗಿ 43 ಅಂತರ್ಜಲ ಅತಿ ಬಳಕೆ ತಾಲೂಕುಗಳನ್ನು ಅಧಿಸೂಚಿಸಿದ್ದು , ಆ ಅಧಿಸೂಚನೆಯು ಕಳೆದ ವರ್ಷದ ಜನವರಿಯಿಂದಲೇ ಜಾರಿಗೆ ಬಂದಿದೆ ಎಂದರು.

ಬೋರ್‌ ಕೊರೆಸಲು ಅನುಮತಿ ಕಡ್ಡಾಯ: ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ತಾಲೂಕು ಅತಿ ಬಳಕೆ ಪ್ರದೇಶವಾಗಿದ್ದು ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ನಿಮಯ ಹಾಗೂ ನಿಯಂತ್ರಣ ಅಧಿನಿಯಮ 2011ರ ಕಲಂ11ರಡಿ ತಿಳಿಸಿರುವಂತೆ ಅಧಿಸೂಚಿತ ಪ್ರದೇಶದಲ್ಲಿ ಯಾವುದೇ ಉದ್ದೇಶಕ್ಕಾಗಿ ಬಾವಿ, ಕೊಳವೆ ಬಾವಿಯನ್ನು ಕೊರೆದು ಅಂತರ್ಜಲವನ್ನು ತೆಗೆಯಲು ಮತ್ತು ಬಳಸಲು ಅಧಿಸೂಚಿತ ಅತಿ ಬಳಕೆ ಪ್ರದೇಶವಾದ ಅರಸೀಕೆರೆ ತಾಲೂಕಿನಲ್ಲಿ ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅರಸೀಕೆರೆ ತಾಲೂಕಿನಲ್ಲಿ ಟಾಸ್ಕ್ಪೋರ್ಸ್‌ 1ಮತ್ತು 2ರಲ್ಲಿ ಅತಿ ತುರ್ತಾಗಿ ಕುಡಿಯುವ ನೀರಿಗಾಗಿ ಕೊರೆಸಿರುವ 199 ಕೊಳವೆ ಬಾವಿಗಳಿಗೆ ಘಟನೋತ್ತರ ಮಂಜೂರಾತಿಯನ್ನು ನೀಡಲಾಯಿತು.

ಷರತ್ತುಬದ್ಧ ಅನುಮತಿ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೈಸೂರು ಮಿನರಲ್ಸ್‌ ವತಿಯಿಂದ ಕೋರಿರುವ ಕೊಳವೆ ಬಾವಿಗಳಿಗೆ ಸಂಬಂಧಪಟ್ಟಂತೆ ಷರತ್ತುಬದ್ಧ ಅನುಮತಿ ನೀಡಲು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಸಮ್ಮತಿಸಿದರು.

Advertisement

ಅತೀ ಹೆಚ್ಚು ಅಂತರ್ಜಲ ಬಳಸುವ 43 ತಾಲೂಕುಗಳಲ್ಲಿ ಅರಸೀಕೆರೆ ತಾಲೂಕು ಒಂದಾಗಿದ್ದು, ನವೀಕರಣ ಪಡೆಯದೇ ಇರುವಂತಹ ಕೊಳವೆ ಬಾವಿಗಳ ಕೊರೆಯುವ ಯಂತ್ರಗಳ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಮತ್ತು ಯಾರಾದರೂ ಖಾಸಗಿ ವತಿಯಿಂದ ಗಮನಕ್ಕೆ ಬಾರದಂತೆ ಕೊಳವೆಬಾವಿ ಕೊರೆಯದ ರೀತಿಯಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಪರಪ್ಪಸ್ವಾಮಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಧಾ ಮತ್ತಿತರರು ಹಾಜರಿದ್ದರು.

ಕುಡಿಯುವ ನೀರಿನ ಪೂರೈಕೆಗೆ ನಿಗಾ ವಹಿಸಿ: ಡೀಸಿ
ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಂಡು ಅಗತ್ಯವಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಬರ ನಿರ್ವಹಣೆಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು.

ಗುಣಮಟ್ಟದ ಬಿತ್ತನೆ ಬೀಜ ನೀಡಿ: ಕೃಷಿ ಇಲಾಖೆಯ ಮೂಲಕ ನೀಡುತ್ತಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಮತ್ತು ಇನ್ನಿತರ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಬೇಕು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಸಂಗ್ರಹಣೆ ಬಗ್ಗೆ ಪಶು ಸಂಗೋಪನಾ ಇಲಾಖೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ಶಾಲಾಕಾಲೇಜಿಗೆ ನಿವೇಶನ ಪಡೆಯಿರಿ: ಜಿಲ್ಲೆಯಲ್ಲಿ ಅಗತ್ಯವಿರುವ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ನಿಲಯಗಳು ಹಾಗೂ ಇನ್ನಿತರ ಕಟ್ಟಡಗಳಿಗೆ ಅವಶ್ಯವಿರುವ ಸ್ಥಳಾವಕಾಶಗಳನ್ನು ಗುರುತಿಸಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಸರ್ವೆ ಇಲಾಖೆ ಅಧಿಕಾರಿಗಳು ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳನ್ನು ಸಂಪರ್ಕಿಸಿ ನಿವೇಶನಗಳನ್ನು ಪಡೆಯಿರಿ ಎಂದು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಸ್ಯೆಗೆ ಸ್ಪಂದಿಸಿ: ಗಂಗಾ ಕಲ್ಯಾಣ ಯೋಜನೆಯಡಿ ನಿರ್ಮಿಸಿರುವ ಕೊಳವೆ ಬಾವಿಗಳಿಗೆ ಅಗತ್ಯವಿರುವ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಯಾವುದೇ ಇಲಾಖೆಗೆ ಅರ್ಜಿಗಳು ಬಂದಲ್ಲಿ ಕೂಡಲೇ ಅವುಗಳನ್ನು ಪರಿಶೀಲಿಸಿ ಅವರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್‌. ವೈಶಾಲಿ, ಸಕಲೇಶಪುರ ಉಪಭಾಗಾಧಿಕಾರಿ ಕವಿತಾ ರಾಜಾರಾಂ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next