Advertisement
ಅಂತರ್ಜಲವನ್ನು ಮನಸೋಇಚ್ಚೆ ಬಳಸಲಾಗುತ್ತಿದೆ. ಅದರ ಮೇಲೆ ಯಾರೂ ನಿಯಂತ್ರಣ ವಿಧಿಸುವ ಪ್ರಯತ್ನವನ್ನೂ ನಡೆಸುತ್ತಿಲ್ಲ. ಅಂತರ್ಜಲ ಅಭಿವೃದ್ಧಿಗೆ ಪೂರಕವಾದ ಯಾವೊಂದು ಪರಿಣಾಮಕಾರಿ ಕ್ರಮಗಳೂ ಜಾರಿಯಾಗುತ್ತಿಲ್ಲ. ಕೆರೆ-ಕಟ್ಟೆಗಳು ಕಣ್ಮರೆಯಾಗುತ್ತಿದ್ದು, ಮಳೆಗಾಲದ ಅವಧಿಯಲ್ಲಿ ಮಳೆಯೂ ಕುಂಠಿತಗೊಳ್ಳುತ್ತಿದೆ. ಇದರಿಂದ ಅಂತರ್ಜಲ ಮರುಪೂರಣ ಮರೀಚಿಕೆಯಾಗಿ ಉಳಿದಿದೆ.
Related Articles
Advertisement
ನಿರ್ದಿಷ್ಟ ಮಿತಿ ಇಲ್ಲ: ಅಂತರ್ಜಲ ಎನ್ನುವುದು ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದರೂ ಅದರ ಬಳಕೆಗೆ ಯಾವುದೇ ನಿರ್ದಿಷ್ಟ ಮಿತಿ ಹಾಕಿಕೊಂಡಿಲ್ಲ. ಅದನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ, ಬದ್ಧತೆ ಯಾರಿಗೂ ಇಲ್ಲ. ಬಳಕೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಮರುಪೂರಣಕ್ಕೆ ನೀಡದಿರುವುದೇ ಅಂತರ್ಜಲ ಪಾತಾಳ ಸೇರಿಕೊಳ್ಳುವುದಕ್ಕೆ ಕಾರಣವಾಗಿದೆ.
ಭೂಮಿಯೊಳಗಿರುವ ನೀರನ್ನು ಒಂದು ಹಂತದವರೆಗೆ ಬಳಕೆ ಮಾಡಿದರೆ ಉತ್ತಮ. ನಿರ್ದಿಷ್ಟ ಹಂತವನ್ನು ಮೀರಿ ಬಳಸುವುದಕ್ಕೆ ಮುಂದಾದರೆ ನೀರಿನ ಗುಣಮಟ್ಟದ ಮೇಲೆ ಅಷ್ಟೇ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಮಳೆಯಾಗದೆ ಏರು-ಪೇರಾಗುತ್ತಿದೆ. ಇದರಿಂದ ಅಂತರ್ಜಲ ಪೂರೈಕೆಗಿಂತ ಬಳಕೆಯೇ ಹೆಚ್ಚಾಗುತ್ತಿದೆ. ಇದರಿಂದ ಅಸಮತೋಲನ ಉಂಟಾಗುತ್ತಿದೆ. ಇದನ್ನು ಸಮತೋಲನ ಸ್ಥಿತಿಗೆ ತರುವುದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವುದು ಪ್ರಸ್ತುತ ಅಗತ್ಯ ಮತ್ತು ಅನಿವಾರ್ಯವೆನಿಸಿದೆ.
ಮರುಪೂರಣ ನಿರ್ಲಕ್ಷ್ಯ: ಅಂತರ್ಜಲ ಮರುಪೂರಣಕ್ಕೆ ಪೂರಕವಾಗಿ ಚೆಕ್ ಡ್ಯಾಮ್, ಕಾಂಟರ್ಬಂಡ್ಸ್, ಪಿಕಪ್, ಮಳೆ ನೀರು ಕೊಯ್ಲು, ಹೊಸ ಕೆರೆಗಳ ನಿರ್ಮಾಣ, ಹಳೆ ಕೆರೆಗಳ ಪುನಶ್ಚೇತನ, ಬಾವಿಗಳಿಗೆ ಮರುಜೀವ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೆ ತರಬೇಕು. ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದ ಇಲಾಖೆಗಳು ತ್ವರಿತ ಕ್ರಮ ಜರುಗಿಸಬೇಕಿದೆ. ಇಲಾಖೆಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದಾಗಿ ಅಂತರ್ಜಲ ಮರುಪೂರಣ ಕಾರ್ಯಕ್ರಮಗಳು ಹಳ್ಳ ಹಿಡಿಯುವಂತಾಗಿದೆ.
ಮಳೆಕೊಯ್ಲು ಕಡ್ಡಾಯಾಗಬೇಕಿದೆ: ಸರ್ಕಾರಿ ಕಟ್ಟ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಇಲಾಖೆಗಳಿಗೆ ಕಾಮಗಾರಿಗಳ ಅಂದಾಜುಪಟ್ಟಿ ತಯಾರಿಸುವಾಗಲೇ ಮಳೆ ಕೊಯ್ಲು ರಚನೆಯನ್ನು ಅಳವಡಿಸಿಕೊಳ್ಳಲು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ವಿವಿಧ ಇಲಾಖಾ ಸರ್ಕಾರಿ ಕಟ್ಟಡಗಳಿಗೆ ಕಡ್ಡಾಯ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವ ಅಗತ್ಯವಿದೆ.
ಜಿಲ್ಲೆಯ ಪಟ್ಟಣ, ಪುರಸಭೆ, ಪಟ್ಟಣ ಹಾಗೂ ಗ್ರಾಪಂ ವ್ಯಾಪ್ತಿಗಳಲ್ಲೂ ಮಳೆ ನೀರು ಸಂಗ್ರಹಣಾ ಘಟಕಗಳನ್ನು ಕೊಳಬೆ ಬಾವಿಗಳಿಗೆ ನೀರು ಇಂಗಿಸುವ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕಿದೆ.
ಮಳೆ ಜತೆಗೆ ಕೆರೆಗಳೂ ಮಾಯ: ಮಳೆಗಾಲದಲ್ಲಿ ವಾಡಿಕೆಯಂತೆ ಮಳೆಯಾಗದೆ ಮಾಯವಾಗುತ್ತಿರುವ ಬೆನ್ನಹಿಂದೆಯೇ ಅಂತರ್ಜಲಕ್ಕೆ ಸಂಜೀವಿನಿಯಂತಿರುವ ಕೆರೆಗಳೂ ಮಾಯವಾಗುತ್ತಿವೆ. ರಾಜ್ಯಸರ್ಕಾರ ಹಾಲಿ ಇರುವ ಕೆರೆಗಳನ್ನೂ ಉಳಿಸಿಕೊಳ್ಳುತ್ತಿಲ್ಲ. ಹೊಸ ಕೆರೆಗಳನ್ನೂ ನಿರ್ಮಿಸುತ್ತಿಲ್ಲ. ಬಹುತೇಕ ಕೆರೆಗಳು ಒತ್ತುವರಿಯಾಗಿದ್ದರೂ ತೆರವಿಗೆ ಮುಂದಾಗುತ್ತಿಲ್ಲ.
ಕಳೆದ ವರ್ಷ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ನೂರಾರು ಟಿಎಂಸಿ ನೀರು ಹರಿದುಹೋಯಿತು. ಅದರಲ್ಲಿ ಹನಿ ನೀರನ್ನು ಸಂಗ್ರಹಿಸಿಡಲು ಸಾಧ್ಯವಾಗಲೇ ಇಲ್ಲ. ನಮ್ಮಲ್ಲಿ ನೀರು ಸಂಗ್ರಹ ಮಾಡಿಕೊಳ್ಳುವುದಕ್ಕೆ ಪರ್ಯಾಯ ವ್ಯವಸ್ಥೆಗಳು ಇಲ್ಲದಿರುವುದು ದೊಡ್ಡ ಲೋಪವಾಗಿದೆ. ಆದರೂ ಇಂದಿರೂ ಸರ್ಕಾರವಾಗಲೀ, ಸ್ಥಳೀಯ ಜಿಲ್ಲಾಡಳಿತವಾಗಲೀ ಕೆರೆಗಳ ಪುನಶ್ಚೇತನ, ಒತ್ತುವರಿ ತೆರವು, ಹೊಸ ಕೆರೆಗಳ ನಿರ್ಮಾಣಕ್ಕೆ ಆಸಕ್ತಿಯನ್ನೇ ತೋರದಿರುವುದು ದೊಡ್ಡ ದುರಂತವಾಗಿದೆ.
ಅಂತರ್ಜಲ ರಕ್ಷಣೆ ಸವಾಲು: ಪ್ರಸ್ತುತ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕೆರೆಗಳಿದ್ದರೂ ಶೇ.90ರಷ್ಟು ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಮೊದಲು ನಾಲೆಗಳಲ್ಲಿ ನೀರು ಮಣ್ಣಿನ ಮೇಲೆ ಹರಿಯುತ್ತಿತ್ತು. ಆ ಸಂದರ್ಭಗಳಲ್ಲಿ ನಾಲೆಗಳಲ್ಲಿ ನೀರು ಹರಿಸಿದರೆ ಸುತ್ತಮುತ್ತಲ ಕೊಳವೆ ಬಾವಿಗಳು ಜೀವಕಳೆ ಪಡೆದುಕೊಳ್ಳುತ್ತಿದ್ದವು. ಈಗ ನಾಲೆಗಳಿಗೆ ಕಾಂಕ್ರೀಟ್ ಅಳವಡಿಸಿರುವುದರಿಂದ ನಾಲೆಗಳ ಪಕ್ಕದಲ್ಲಿರುವ ಕೊಳವೆ ಬಾವಿಗಳು ಬತ್ತಿಹೋಗುವ ಸ್ಥಿತಿ ತಲುಪಿವೆ. ಹೀಗಾಗಿ ಅಂತರ್ಜಲ ರಕ್ಷಣೆ ಸವಾಲಾಗಿದೆ.
● ಮಂಡ್ಯ ಮಂಜುನಾಥ್