Advertisement

ಕೃಷಿ ಇಲಾಖೆಗೆ ಇನ್ನೂ ಬಾರದ ನೆಲಗಡಲೆ ಬೀಜ: ಸಂಕಷ್ಟದಲ್ಲಿ ರೈತರು

08:18 PM Nov 29, 2019 | mahesh |

ಉಪ್ಪುಂದ: ಕರಾವಳಿ ತೀರದ ರೈತರು ಭತ್ತದ ಕೃಷಿ ಚಟುವಟಿಕೆ ಮುಗಿಸಿ, ನೆಲಗಡಲೆ ಬೆಳೆ ಬೆಳೆಯುವ ಕೆಲಸದಲ್ಲಿ ನಿರತರಾಗಿದ್ದು ಇದೀಗ ಕೃಷಿ ಇಲಾಖೆಯಲ್ಲಿ ನೆಲಗಡಲೆ ಬೀಜ ಬಾರದೇ ಇರುವುದರಿಂದ ರೈತರಿಗೆ ನೆಲಗಡಲೆ ಬೆಳೆಯಲು ಹಿನ್ನಡೆಯಾಗಿ ಪರಿಣಮಿಸಿದೆ.

Advertisement

ಬೈಂದೂರು ಕುಂದಾಪುರ ತಾಲೂಕಿನ ರೈತರು ಮಳೆ- ಬಿಸಿಲಿನ ಕಣ್ಣು ಮುಚ್ಚಾಲೆ ಯಾಟದ ಆತಂಕದ ನಡುವೆಯು ಭತ್ತ ಬೆಳೆಯನ್ನು ಕಟಾವು ಮಾಡಿ ಮೂರು-ನಾಲ್ಕು ತಿಂಗಳಿನ ಬೆಳೆಯಾದ ನೆಲಗಡಲೆ ಬೆಳೆ ಬೆಳೆಯಲು ಸಿದ್ಧತೆ ಆರಂಭಿಸಿದ್ದಾರೆ.

ಬೈಂದೂರು ವ್ಯಾಪ್ತಿಯಲ್ಲಿ 1100 ಹೆಕ್ಟೇರ್‌ ಕೃಷಿ ಭೂಮಿ ಹೊಂದಿದೆ. ಹೆಚ್ಚಿನ ರೈತರು ನೆಲಗಡಲೆ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಯಡ್ತರೆ, ಬಿಜೂರು, ಉಪ್ಪುಂದ, ಶಾಲೆಬಾಗಿಲು, ಕಿರಿಮಂಜೇಶ್ವರ ಪ್ರದೇಶದ ರೈತರು ಕೊಯ್ಲು ಮುಗಿದ ಬಳಿಕ ಎರಡು ಬಾರಿ ಉಳುಮೆ ಕಾರ್ಯ ಮುಗಿಸಿದ್ದಾರೆ. ಗೊಬ್ಬರ ಹಾಕಿ ಮಣ್ಣುನ್ನು ಹದಗೊಳಿಸಿ ಇಟ್ಟಿದ್ದಾರೆ.

ಬಾರದ ನೆಲಗಡಲೆ ಬೀಜ
ಭತ್ತ ಬೆಳೆಯ ಕೆಲಸ ಮುಗಿದು ತಿಂಗಳು ಕಳೆದು, ನಲೆಗಡೆಲೆ ಬೀಜ ಹಾಕಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡರು ಬೈಂದೂರು ಕೃಷಿ ಕೇಂದ್ರದಲ್ಲಿ ಇನ್ನು ನೆಲಗಡಲೆ ಬೀಜ ಬಾರದೇ ಇರುವುದರಿಂದ ರೈತರು ಕೃಷಿ ಇಲಾಖೆಗೂ, ಮನೆಗೂ ತಿರುಗಾಡುವಂತಾಗಿದೆ. ಕೇಳಿದರೆ ನಾಳೆ, ನಾಡಿದ್ದು ಬರುತ್ತದೆ ಎನ್ನುತ್ತಾರೆ. ಹೆಚ್ಚಿನ ರೈತರು ಇಲಾಖೆಯಿಂದಲೇ ಸಿಗುವ ನಲೆಗಡೆಲೆಯನ್ನು ನಂಬಿಕೊಂಡಿದ್ದಾರೆ.

ತೇವಾಂಶ ಕಡಿಮೆ; ಆತಂಕ
ಕರಾವಳಿ ತೀರ ಪ್ರದೇಶದ ಕೃಷಿ ಭೂಮಿಯು ಮರಳು (ಹೊಯಿಗೆ) ಮಿಶ್ರತ ಮಣ್ಣು ಆಗಿರು ವುದರಿಂದ ದಿನ ಕಳೆದಂತೆ ಮಣ್ಣಿನಲ್ಲಿ ನೀರಿನ ತೇವಾಂಶ ಕಡಿಮೆಯಾಗುತ್ತಾ ಹೋಗುತ್ತದೆ. ಬಿಜೂರು, ನಾಯ್ಕನಕಟ್ಟೆ, ನಾಗೂರು, ಉರ್ಪಳ್ಳಿ, ಕಿರಿಮಂಜೇಶ್ವರ, ನಾವುಂದ ಭಾಗದ ಗದ್ದೆಗಳು ಬೇಗನೆ ಗಾರ್‌ ಆಗುವುದರಿಂದ (ಮಣ್ಣಿನ ತೇವಾಂಶ ಕಳೆದುಕೊಳ್ಳುವುದು) ನೆಲಗಡಲೆ ಬೀಜವನ್ನು ನಿಗದಿತ ದಿನದೊಳಗೆ ಬೀತ್ತನೆ ಮಾಡದಿದ್ದರೆ ಅದು ಮೊಳಕೆ ಒಡೆಯುವುದಿಲ್ಲ. ಗಿಡ ಬೆಳೆದರೂ ಬೇಗನೆ ಕರಟಿ ಹೋಗುವ ಸಾಧ್ಯತೆಯು ಹೆಚ್ಚು.

Advertisement

ಖಾಸಗಿಯಲ್ಲಿ ಆಧಿಕ ದರ
ಮಾರುಕಟ್ಟೆಯಲ್ಲಿ ಒಡೆದ ನೆಲಗಡಲೆ ಬೀಜಕ್ಕೆ ಕೆ.ಜಿ.ಗೆ 95-100 ರೂ. ಹಾಗೂ ಇಡೀ ನೆಲಗಡಲೆಗೆ ಕೆ.ಜಿ.ಗೆ 60-65 ರೂಪಾಯಿ ಇದೆ. ಕೃಷಿ ಇಲಾಖೆಗಳಲ್ಲಿ ಇನ್ನು ನೆಲಗಡಲೆ ಬಾರದೇ ಇರುವುದರಿಂದ ಕೆಲವು ರೈತರು ದುಬಾರಿ ಹಣ ಕೊಟ್ಟು ಖಾಸಗಿಯಾಗಿ ಖರೀದಿ ಮಾಡುತ್ತಿರುವುದು ಕಂಡುಬಂದಿದೆ. ಇಲಾಖೆ ಯಿಂದ ಬರುವುದನ್ನು ಕಾಯುತ್ತಾ ಕುಳಿತರೆ ಗದ್ದೆಗೆ ಖರ್ಚು ಮಾಡಿದ ಕೂಲಿಯೂ ಹುಟ್ಟದು ಎನ್ನುತ್ತಾರೆ ಕೃಷಿಕ ವೆಂಕಟರಮಣ ಬಿಜೂರು.

ಸದಾ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ನೆಲಗಡಲೆ ಬಾರದೆ ಇರುವುದರಿಂದ ಈ ಭಾಗದ ರೈತರು ಮತ್ತಷ್ಟು ತೊಂದರೆಗೆ ಒಳಗಾಗುವಂತೆ ಮಾಡಿದೆ. ಸರಕಾರದಿಂದ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಸಿಗುವಂತೆ ಮಾಡಲು ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಹೆಚ್ಚು ಪ್ರಯತ್ನಿಸಬೇಕಿದೆ.

ವಿಳಂಬವಾದರೆ ಸಂಕಷ್ಟ
ಇಲ್ಲಿನ ಮಣ್ಣಿಗೆ ಅನುಗುಣವಾಗಿ ಎರಡು ರೀತಿಯ ತಳಿಯ ಬೀಜ ಅಗತ್ಯವಿದೆ. ಆದರೆ ಇಲಾಖೆಯವರು 120 ದಿನಗಳ ಬೆಳೆಯ ತಳಿಯ ಬೀಜ ಮಾತ್ರ ನೀಡುತ್ತಾರೆ. 90 ದಿನಗಳ‌ ಬೆಳೆಯ ನೆಲಗಡಲೆ ಬೀಜ ಲಭ್ಯವಿಲ್ಲ. ಇದಕ್ಕಾಗಿ ರೈತರು ಖಾಸಗಿಯವರಲ್ಲಿ ದುಬಾರಿ ಹಣಕೊಟ್ಟು ಕೊಂಡುಕೊಳ್ಳುವುದು ಅನಿವಾರ್ಯ. ಈ ಕುರಿತು ಗಮನ ಹರಿಸಬೇಕಿದೆ. ನೆಲಗಡಲೆ ಬೀಜ ಇನ್ನೂ° ಬಂದಿಲ್ಲ. ಇನ್ನಷ್ಟು ವಿಳಂಬವಾದರೆ ನೆಲಗಡಲೆ ಕೃಷಿ ಬೆಳೆಯುವುದು ಕಷ್ಟವಾಗುತ್ತದೆ.
– ನಾಗರಾಜ ದೇವಾಡಿಗ ಬೆಳಗ್ಗಲ್‌ಕಟ್ಟೆ, ಕೃಷಿಕ

ಇನ್ನೆರಡು ದಿನದಲ್ಲಿ ಬೀಜ
ನೆಲಗಡಲೆ ಬೀಜ ಬರುವುದು ತಡವಾಗಿರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಇನ್ನು ಎರಡು ದಿನದಲ್ಲಿ ಬರಬಹುದು ಎನ್ನುವ ಮಾಹಿತಿ ಇದೆ. ಬಂದ ತತ್‌ಕ್ಷಣ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರು ಆರ್‌ಟಿಸಿ ಮತ್ತು ಆಧಾರ್‌ ಕಾರ್ಡ್‌ ಪ್ರತಿ ತಂದರೆ ಸಾಕು. ದರ ನಿಗದಿಗೊಳಿಸಿಲ್ಲ.
-ಗಾಯತ್ರಿದೇವಿ, ಬೈಂದೂರು ಕೃಷಿ ಅಧಿಕಾರಿ

ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next