Advertisement

ನೆಲಗಡಲೆ ಬಿತ್ತನೆಗೆ ಅಡ್ಡಿಯಾದ ಅಕಾಲಿಕ ಮಳೆ: ಕೆಲವೆಡೆ ಬಿತ್ತನೆ ಆರಂಭ

10:36 PM Dec 01, 2022 | Team Udayavani |

ಕುಂದಾಪುರ : ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಕೋಟ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯನ್ನೇ ನೆಚ್ಚಿಕೊಂಡರೇ, ಹಿಂಗಾರು ಹಂಗಾಮಿನಲ್ಲಿ ನೀರು, ಹವಾಮಾನಕ್ಕೆ ತಕ್ಕಂತೆ ನೆಲಗಡಲೆ ಕೃಷಿ ಮಾಡುವುದು ವಾಡಿಕೆ. ಆದರೆ ಈಗ ಅಕಾಲಿಕ ಮಳೆಯಾಗುತ್ತಿರುವುದರಿಂದ ನೆಲಗಡಲೆ ಬೆಳೆಗೆ ಒಂದಷ್ಟು ಅಡ್ಡಿಯಾಗಿದೆ.

Advertisement

ಕೆಲವೆಡೆಗಳಲ್ಲಿ ಈಗಾಗಲೇ ಶೇಂಗಾ ಬೀಜ ಬಿತ್ತನೆ ಮಾಡಲಾಗಿದ್ದು, ಇನ್ನೂ ಕೆಲವೆಡೆಗಳಲ್ಲಿ ಮಳೆಯಿಂದಾಗಿ ವಾರ ಅಥವಾ 10 ದಿನ ವಿಳಂಬ ಆಗುವ ಸಾಧ್ಯತೆಯಿದೆ. ಬಿತ್ತನೆ ಮಾಡಿದ ರೈತರಿಗೂ ಅಕಾಲಿಕ ಮಳೆಯ ಆತಂಕ ಶುರುವಾಗಿದೆ.

1,800 ಹೆಕ್ಟೇರ್‌
ಉಡುಪಿ ಜಿಲ್ಲೆಯ ಬ್ರಹ್ಮಾವರ, ಕೋಟ, ಕುಂದಾಪುರ ಹಾಗೂ ಬೈಂದೂರು ಹೋಬಳಿಯಲ್ಲಿ ಮಾತ್ರ ನೆಲಗಡಲೆ ಕೃಷಿಯನ್ನು ಮಾಡುತ್ತಿದ್ದು, ಒಟ್ಟಾರೆ 1,800 ಹೆಕ್ಟೇರ್‌ನಷ್ಟು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅಂದಾಜು 2 ಸಾವಿರ – 2,200 ಮಂದಿ ರೈತರು ಈ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಕೋಟ ಹಾಗೂ ಬೈಂದೂರು ಹೋಬಳಿಗಳೆರಡಲ್ಲೇ ಗರಿಷ್ಠ ನೆಲಗಡಲೆ ಕೃಷಿಯನ್ನು ಬೆಳೆಯಲಾಗುತ್ತಿದೆ.

598 ಕ್ವಿಂಟಾಲ್‌ ವಿತರಣೆ
ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಒಟ್ಟು 598 ಕ್ವಿಂಟಾಲ್‌ ನೆಲಗಡಲೆ ಬೀಜವನ್ನು ವಿತರಿಸಲಾಗಿದೆ. ಈ ಪೈಕಿ ಬೈಂದೂರು ಹೋಬಳಿಯಲ್ಲಿ 2,48, ಕೋಟ ಹೋಬಳಿಯಲ್ಲಿ 225 ಕ್ವಿಂಟಾಲ್‌ ಹಾಗೂ ಕುಂದಾಪುರ ಹೋಬಳಿಯಲ್ಲಿ 130 ಕ್ವಿಂಟಾಲ್‌ ಬೀಜವನ್ನು ವಿತರಿಸಲಾಗಿದೆ. ರೈತ ಸೇವಾ ಕೇಂದ್ರಗಳಲ್ಲಿ 83 ರೂ. ಇದ್ದುದನ್ನು ಸಬ್ಸಿಡಿ ದರದಲ್ಲಿ 69
ರೂ.ಗೆ ವಿತರಿಸಲಾಗಿದೆ. ಮಾರುಕಟ್ಟೆಗಳಲ್ಲಿ ಕಾಳಿಗೆ 106-110 ರೂ. ಇದ್ದರೆ, ಇಡೀ ನೆಲಗಡಲೆ ಕೆ.ಜಿ.ಗೆ 120-130 ರೂ. ದರದಲ್ಲಿ ರೈತರು ಬೀಜವನ್ನು ಖರೀದಿಸಿದ್ದಾರೆ.

ಮಳೆಯಿಂದ ವಿಳಂಬ
ಈಗಾಗಲೇ 60 ಸೆಂಟ್ಸ್‌ ಜಾಗದಲ್ಲಿ ಬಿತ್ತನೆ ಮಾಡಿದ್ದೇನೆ. ಆದರೆ ಮಳೆಯಿಂದ ಏನಾಗುತ್ತೋ ಎನ್ನುವ ಆತಂಕವಿದೆ. ಇನ್ನು ಸ್ವಲ್ಪ ಬಿತ್ತನೆ ಬಾಕಿ ಇದೆ. ಮಳೆ ಆಗಾಗ ಬರುತ್ತಿರುವುದರಿಂದ ವಿಳಂಬ ಆಗಲಿದೆ. ಗದ್ದೆ ತೇವಾಂಶ ಕಡಿಮೆಯಾಗುವವರೆಗೂ ಕಾಯಬೇಕಾಗುತ್ತದೆ ಎನ್ನುತ್ತಾರೆ ಹೇರಂಜಾಲಿನ ನೆಲಗಡಲೆ ಕೃಷಿಕ ಶೀನ ದೇವಾಡಿಗ.

Advertisement

ಮಳೆಯಿಂದೇನು ಸಮಸ್ಯೆ?
ಸಾಮಾನ್ಯವಾಗಿ ನವೆಂಬರ್‌ ಮೊದಲ ಅಥವಾ ಎರಡನೇ ವಾರದಿಂದ ಬಿತ್ತನೆ ಕಾರ್ಯ ಆರಂಭಗೊಳ್ಳುತ್ತದೆ. ಆದರೆ ನವೆಂಬರ್‌ನಲ್ಲಿ ಈ ಬಾರಿ ಆಗಾಗ ಬರುತ್ತಿದ್ದ ಮಳೆಯಿಂದಾಗಿ ಗದ್ದೆಯಲ್ಲಿ ತೇವಾಂಶ ಇದ್ದುದರಿಂದ ಬಿತ್ತನೆ ಕಷ್ಟ. ಗದ್ದೆಯಲ್ಲಿ ತೇವಾಂಶ ಕಡಿಮೆಯಾಗುವವರೆಗೂ ಕಾಯಬೇಕಾಗುತ್ತದೆ. ಬಿತ್ತನೆ ಮೊದಲು ಮಳೆ ಬಂದರೆ ಮೇಲ್ಪದರದ ಸಾರಾಂಶವು ಇಂಗಿ, ಸಪ್ಪೆಯಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುತ್ತದೆ. ಕಾಳುಗಳು ಸರಿಯಾಗಿ ಮೊಳಕೆಯೊಡೆಯದೆ ಕುಂಠಿತಗೊಳ್ಳುತ್ತದೆ ಇನ್ನು ಬಿತ್ತನೆ ಅನಂತರ ಮಳೆ ಬಂದರೂ, ಗದ್ದೆಯಲ್ಲಿ ನೀರು ನಿಂತು, ಮಣ್ಣು ಪಾಕಗೊಂಡು, ಕಾಳುಗಳು ಕೊಳೆಯುತ್ತವೆ. ಮಣ್ಣು ಕೆಸರಾಗುವುದರಿಂದ ಗಿಡಗಳು ಬೇರೊಡೆಯಲು ಅಡ್ಡಿಯಾಗುತ್ತದೆ. ಇದರಿಂದ ಇಳುವರಿಯೂ ಕಡಿಮೆಯಾಗಬಹುದು. ಇನ್ನು ಮೊಳಕೆ ಬರುವ ವೇಳೆ ಮಳೆ ಬಂದರೂ, ನೀರು ನಿಂತು ಕೊಳೆಯುವ ಸಾಧ್ಯತೆ ಇರುತ್ತದೆ ಎನ್ನುವುದಾಗಿ ಕಾಲೊ¤àಡಿನ ನೆಲಗಡಲೆ ಕೃಷಿಕ ವೆಂಕಟೇಶ್‌ ಬೋವಿ ತಿಳಿಸಿದ್ದಾರೆ.

ಬೀಜ ವಿತರಣೆ
ಜಿಲ್ಲೆಯಲ್ಲಿ ಕೋಟ, ಕುಂದಾಪುರ, ಬೈಂದೂರು ಹೋಬಳಿಯಲ್ಲಿ ಮಾತ್ರ ನೆಲಗಡಲೆ ಕೃಷಿ ಬೆಳೆಯಲಾಗುತ್ತಿದ್ದು, ಈ ಬಾರಿ 1,800 ಹೆಕ್ಟೇರ್‌ನಷ್ಟು ಬೆಳೆ ನಿರೀಕ್ಷಿಸಲಾಗಿದೆ. 598 ಕ್ವಿಂಟಾಲ್‌ ನೆಲಗಡಲೆ ಬೀಜವನ್ನು ವಿತರಿಸಲಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಆರಂಭಗೊಂಡಿದೆ.
– ಎಚ್‌. ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

– ಪ್ರಶಾಂತ್‌ ಪಾದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next