ಹೊಸದಿಲ್ಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ಇಳಿಕೆಯಾಗಿದೆ. ಈ ಮೊದಲು ಅರ್ಥಶಾಸ್ತ್ರ ಪರಿಣತರು ಜಿಡಿಪಿ ದರ ಶೇ.4.7ರಷ್ಟಿರಬಹುದು ಎಂದು ಹೇಳಿದ್ದರೂ ಅದಕ್ಕಿಂತಲೂ ಜಿಡಿಪಿ ಹಿಂದೆ ಸರಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಣಿಸಿದೆ.
ಆದರೆ ಇತ್ತೀಚೆಗೆ ಸರಕಾರದ ಕ್ರಮಗಳಿಂದಾಗಿ ಆರ್ಥಿಕತೆ ತುಸು ಮೇಲ್ಮುಖವಾಗಿದ್ದು, ಅದರ ಪರಿಣಾಮ ಮುಂದೆ ಕಾಣಬಹುದಷ್ಟೇ ಎಂದು ಆರ್ಥಿಕ ತಜ್ಞರು ಲೆಕ್ಕಚಾರ ಹಾಕಿದ್ದಾರೆ. ಕಳೆದ ತ್ತೈಮಾಸಿಕದಲ್ಲಿ ಜಿಡಿಪಿ ದರ ಶೇ.5ರಷ್ಟಿತ್ತು. ಇದರಿಂದ ಕಳೆದ ತ್ತೈಮಾಸಿಕಕ್ಕಿಂತಲೂ ಜಿಡಿಪಿ ದರ ಕಡಿಮೆಯಾದಂತಾಗಿದೆ.
ಜಿಡಿಪಿ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಉತ್ತೇಜನಕ್ಕೆ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಅದು ತತ್‌ಕ್ಷಣಕ್ಕೆ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ರಿಸರ್ವ್ ಬ್ಯಾಂಕ್ ಕೂಡ ರೆಪೋ ದರಗಳನ್ನು 25 ಮೂಲಾಂಶಗಳಷ್ಟು ಅಂದರೆ ಶೇ.4.90ರಷ್ಟಕ್ಕೆ ಇಳಿಕೆ ಮಾಡಿತ್ತು.
ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕತೆ ನಿಧಾನವಾಗಿದೆ ಆದರೆ ಯಾವುದೇ ಹಿಂಜರಿತ ಇಲ್ಲ ಎಂದಿದ್ದರು. ಅಲ್ಲದೇ ಸರಕಾರದ ಹಲವು ಕ್ರಮಗಳಿಂದಾಗಿ ಅಂತಹ ಪರಿಸ್ಥಿತಿಗೆ ಬರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಗುರುವಾರ ಅವರು ಈ ವಿತ್ತೀಯ ವರ್ಷದಲ್ಲಿ ಹೆಚ್ಚುವರಿ 21 ಸಾವಿರ ಕೋಟಿ ರೂ. ವೆಚ್ಚಕ್ಕೆ ಸಂಸತ್ತಿನ ಅನುಮತಿ ಕೇಳಿದ್ದರು.
ವಿತ್ತೀಯ ಕೊರತೆ ಶೇ.102.4ರಷ್ಟಕ್ಕೆ
ಇನ್ನು ಎಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ವಿತ್ತೀಯ ಕೊರತೆ ಶೇ.102.4ರಷ್ಟಕ್ಕೆ ತಲುಪಿದೆ. ಈ ಮೂಲಕ ಇಡೀ ವಿತ್ತೀಯ ವರ್ಷದ ಗುರಿಯನ್ನು ಮೀರಿದೆ. ಈ ಅವಧಿಯಲ್ಲಿ ವಿತ್ತೀಯ ವರ್ಷದಲ್ಲಿ ವಿತ್ತೀಯ ಕೊರತೆ 6.48 ಲಕ್ಷ ಕೋಟಿ ರೂ. ಮಾತ್ರವೇ ಆಗಬೇಕಿತ್ತು. ಆದರೆ ಅದು ಶೇ.7.2 ಲಕ್ಷ ಕೋಟಿ ರೂ. ಆಗಿದೆ. ಬಜೆಟ್‌ನಲ್ಲಿ ಇದರ ಗುರಿ 7.03 ಲಕ್ಷ ಕೋಟಿ ರೂ. ಎಂದು ಹೇಳಲಾಗಿತ್ತು.