Advertisement

ಅಪ್ಸರೆ ಕೊಟ್ಟ ವರ

10:22 AM Jun 08, 2017 | Harsha Rao |

ಒಂದು ಕಾಡಿನ ಪಕ್ಕದಲ್ಲಿ ಒಬ್ಬ ಯುವಕ ವಾಸವಾಗಿದ್ದ. ಅವನು ತುಂಬ ಬಡವ. ವಿದ್ಯೆ ಕಲಿತಿರಲಿಲ್ಲ. ಯಾವ ಕೆಲಸವೂ ಗೊತ್ತಿರಲಿಲ್ಲ. ಆದರೂ ಜೀವನದಲ್ಲಿ ಸುಖವಾಗಿರಲು ಸಿರಿವಂತನಾಗಬೇಕೆಂಬುದು ಅವನಿಗೆ ಗೊತ್ತಿತ್ತು. ಒಂದು ದಿನ ಬಿದಿರು ತರಲು ಕಾಡಿಗೆ ಹೋಗಿದ್ದ. ಅಲ್ಲಿ ಭೂಮಿಯಲ್ಲಿ ಜಲಕ್ರೀಡೆ ಮಾಡಲು ಬಂದಿದ್ದ ಅಪ್ಸರೆಯೊಬ್ಬಳ ರೆಕ್ಕೆ ಬಿದಿರು ಮೆಳೆಯಲ್ಲಿ ಸಿಲುಕಿ ಹಾರಲಾಗದೆ ಒದ್ದಾಡುತ್ತಿದ್ದಳು. ಯುವಕ ನಾಜೂಕಾಗಿ ಅವಳ ರೆಕ್ಕೆಗಳನ್ನು ಬಿಡಿಸಿದ. ಅಪ್ಸರೆ
ಅವನಿಗೆ ಕೃತಜ್ಞತೆ ಸಲ್ಲಿಸಿದಳು. “ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ನನ್ನ ಧರ್ಮ. ನಿನಗೇನು ಬೇಕು, ಕೋರಿಕೋ, ಕೊಡುತ್ತೇನೆ’ ಎಂದಳು. ಯುವಕ, “ನಾನು ಬಡವ. ತುಂಬ ಹಣ ಬೇಕು. ಅದರಿಂದ ಸುಖವಾಗಿರಬಲ್ಲೆ’
ಎಂದು ಕೋರಿದ.

Advertisement

ಅಪ್ಸರೆಯು, “ಹಣವನ್ನು ಹೀಗೆಯೇ ಕೊಟ್ಟರೆ ಅದರ ಬೆಲೆ ತಿಳಿಯುವುದಿಲ್ಲ. ಬದಲಾಗಿ ನಿನಗೆ ಒಂದು ವಿಶೇಷ ಶಕ್ತಿಯನ್ನು ನೀಡುತ್ತೇನೆ. ಮರದಿಂದ ಯಾವುದಾದರೂ ಪ್ರಾಣಿಗಳ ಗೊಂಬೆಯನ್ನು ನೀನು ತಯಾರಿಸಿದೆಯಾದರೆ ಅವುಗಳಿಗೆ ಮಾತನಾಡುವ ಶಕ್ತಿ ಇರುವಂತೆ ಮಾಡುತ್ತೇನೆ. ನಿನ್ನ ಶ್ರಮದಿಂದ ಸಿದ್ಧವಾಗುವ ಈ ಗೊಂಬೆಗಳಿಗೆ ಉತ್ತಮವಾದ
ಬೆಲೆ ಬರುತ್ತದೆ. ಅದರಿಂದ ಸುಖವಾಗಿ ಬದುಕಬಹುದು. ಆದರೆ ಈ ವಿದ್ಯೆ ನಿನ್ನ ಬಳಿ ಒಂದು ವರ್ಷ ಮಾತ್ರ ಇರುತ್ತದೆ. ಅದರೊಳಗೆ ಜೀವನದಲ್ಲಿ ಉತ್ತಮ ಸ್ಥಿತಿಗೆ ಬರಲು ಪ್ರಯತ್ನಿಸಬೇಕು’ ಎಂದು ಹೇಳಿ ಗಗನ ಮಾರ್ಗದಲ್ಲಿ ಹಾರುತ್ತ
ಮಾಯವಾದಳು.

       ಯುವಕನಿಗೆ ಅಪ್ಸರೆಯು ಹೇಳಿದಂತೆಯೇ ಮರದಿಂದ ಗೊಂದೆ ತಯಾರಿಸುವ ಕೌಶಲವು ತಾನಾಗಿ ಬಂದಿತು. ಮಾತ್ರವಲ್ಲ, ಈ ಗೊಂಬೆಗಳು ವಾಚಾಳಿಗಳಾಗಿದ್ದವು. ಕಂಡವರು ಅತ್ಯಾಶ್ಚರ್ಯಪಟ್ಟು ಅವುಗಳನ್ನು ಹೇಳಿದ ಬೆಲೆ ಕೊಟ್ಟು ಕೊಳ್ಳುತ್ತಿದ್ದರು. ಅವನಲ್ಲಿ ತುಂಬ ಹಣ ಸೇರಿತು. ಅದೆಲ್ಲವನ್ನೂ ಒಂದು ಗೋಣಿಚೀಲದಲ್ಲಿ ತುಂಬಿಸಿ ತೆಗೆದಿರಿಸುತ್ತಿದ್ದ. ಕೆಲವು ಕಾಲ ಕಳೆದಾಗ ಅವನ ಬಳಿಗೆ ಮನೆ ಕಟ್ಟುವವನೊಬ್ಬ ಬಂದ. “ನಿನಗೊಂದು ಸುಂದರವಾದ
ಅರಮನೆಯನ್ನು ಕಟ್ಟಿ ಕೊಡುತ್ತೇನೆ’ ಎಂದು ಹೇಳಿದ. ಆದರೆ ಯುವಕನಿಗೆ ಅದಕ್ಕಾಗಿ ಚೀಲದಲ್ಲಿ ಕೂಡಿಟ್ಟಿದ್ದ ಹಣದ ರಾಶಿಯಿಂದ ಒಂದು ಬಿಲ್ಲೆಯನ್ನೂ ತೆಗೆಯಲು ಇಷ್ಟವಿರಲಿಲ್ಲ. “ಈಗ ಬೇಡ. ನನ್ನ ಬಳಿ ಇನ್ನೂ ಹಣ ಸಂಗ್ರಹವಾಗಬೇಕು. ಆಮೇಲೆ ಮನೆಯ ಮಾತು’ ಎಂದು ಹೇಳಿ ಅವನನ್ನು ಕಳುಹಿಸಿದ.

       ಆಗ ಮನೆಯೊಳಗಿದ್ದ ಹಣದ ರಾಶಿಯಿಂದ, “ಅವಿವೇಕಿ, ಮೂರ್ಖ, ಬುದ್ಧಿಹೀನ’ ಎಂದು ಯಾರೋ ಗೊಣಗಿದಂತೆ ಕೇಳಿಸಿತು. ಯುವಕ ಅಚ್ಚರಿಯಿಂದ, “ಯಾರದು ಬೈಯುತ್ತಿರುವುದು?’ ಎಂದು ಕೇಳಿದ. “ನಾನೇ! ನೀನು ಸಂಗ್ರಹಿಸಿಟ್ಟ ಹಣ ಮಾತನಾಡುತ್ತಿರುವುದು. ಅಲ್ಲವೋ ಬುದ್ಧಿಗೆಟ್ಟವನೇ, ಮನೆ ಕಟ್ಟುತ್ತೇನೆನ್ನುವಾಗ ಯಾಕೆ ಬೇಡವೆಂದೆ? ಸುಖವಾಗಿ ಮನೆಯೊಳಗಿರಬಾರದೆ?’ ಎಂದು ಹಣ ಕೇಳಿತು. ಯುವಕನಿಗೆ ಸಿಟ್ಟು ಬಂತು. “ತೆಪ್ಪಗೆ ಬಿದ್ದಿರು. ನಿನ್ನ ಬಳಿ ಳಿಸಿಕೊಳ್ಳುವ ಅಗತ್ಯ ನನಗಿಲ್ಲ. ‘ ಎಂದು ಗದರಿದ.

       ಮತ್ತೂಂದು ದಿನ ಸುಂದರಿಯಾದ ಯುವತಿ ಯುವಕನ ಬಳಿಗೆ ಬಂದಳು. “ನಾನು ಧನಿಕನೊಬ್ಬನ ಒಬ್ಬಳೇ ಮಗಳು. ನಿನ್ನ ಕಲೆಯ ಕೌಶಲವನ್ನು ಕಂಡು ಮೆಚ್ಚಿ ನಿನ್ನನ್ನು ವರಿಸಲು ಬಂದಿದ್ದೇನೆ. ನನ್ನನ್ನು ಪರಿಗ್ರಹಿಸು’ ಎಂದು ಹೇಳಿದಳು. ಯುವಕ ಅವಳ ಮುಖ ನೋಡಿದ. ತುಂಬ ಚೆಲುವೆಯಾಗಿದ್ದಳು. ಆದರೆ ಇವಳನ್ನು ಮದುವೆಯಾಗಲು, ಒಡವೆಗಳನ್ನು ಕೊಡಿಸಲು, ಅದಾದ ಮೇಲೆ ಅವಳಿಗೆ ಊಟ ಹಾಕಲು ಸಂಗ್ರಹಿಸಿಟ್ಟ ಹಣವನ್ನೇ ಕರಗಿಸಬೇಕು. ಅಯ್ಯೋ ದೇವರೇ ಖಂಡಿತ ನನಗದನ್ನು ಸಹಿಸಲು ಆಗುವುದಿಲ್ಲ ಎಂದು ಯೋಚಿಸಿದ. “ಸದ್ಯಕ್ಕೆ ನನಗೆ ಮದುವೆಯ ಯೋಚನೆಯಿಲ್ಲ. ಮುಂದೆ ನೋಡೋಣವಂತೆ’ ಎಂದು ಹೇಳಿ ಹಿಂದಕ್ಕೆ ಕಳುಹಿಸಿದ.

Advertisement

       ಆಗ ಹಣ ಮತ್ತೆ ಮಾತನಾಡಿತು. “ಎಂಥ ಹುಂಬ ನೀನು. ಬಂಗಾರದಂತಹ ಹುಡುಗಿ ಹುಡುಕಿಕೊಂಡು ಬರುವಾಗ ಯಾರಾದರೂ ಬೇಡವೆನ್ನುತ್ತಾರೆಯೆ? ನೀನು ಖಂಡಿತ ಸುಖವಾಗಿರುವುದಿಲ್ಲ’ ಎಂದು ಮೂದಲಿಸಿತು. ಯುವಕನಿಗೆ ಅದರಿಂದ ತಾಳಲಾಗದ ಕೋಪ ಬಂತು. “ನಿನಗೆ ಮೂಲೆಯಲ್ಲಿ ಬಿದ್ದಿರುವುದು ಮಾತ್ರ ಕೆಲಸ. ನನ್ನ ವಿಷಯದಲ್ಲಿ ತಲೆ ಹಾಕಬೇಡ. ನಾನು ಒಂದು ಬಿಲ್ಲೆಯನ್ನೂ ಈಗ ಖರ್ಚು ಮಾಡುವುದಿಲ್ಲ. ನೀನು ಎದುರಲ್ಲೇ ಇದ್ದರೆ ವಿನಾಕಾರಣ ನನಗೆ ಸಲಹೆ ಕೊಡಲು ಬರುತ್ತೀ. ಅದಕ್ಕಾಗಿ ನಿನ್ನನ್ನು ಚೀಲಸಹಿತ ಒಂದು ದೊಡ್ಡ ಹೊಂಡದಲ್ಲಿಟ್ಟು ಮಣ್ಣು ಮುಚ್ಚುತ್ತೇನೆ. ಬೇಕಾದಾಗ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿ ನದಿಯ ಪಕ್ಕದಲ್ಲಿದ್ದ ಉಸುಕಿನಲ್ಲಿ ಹೊಂಡ ತೆಗೆದು ಹಣವನ್ನೆಲ್ಲ ಸಮಾಧಿ ಮಾಡಿಬಂದ.

       ಅಂದು ರಾತ್ರೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಕಾರ್ಮೋಡ ಕವಿಯಿತು. ಸಿಡಿಲು ಆರ್ಭಟಿಸಿತು. ಮಿಂಚು ಕೋರೈಸಿತು. ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ನದಿಗಳೆಲ್ಲ ತುಂಬಿ ಹರಿದವು. ಯುವಕ ಹೂಳಿಟ್ಟ ಹಣದ ಚೀಲ ಕೊಚ್ಚಿಕೊಂಡು
ಹೋಗಿ ಕಡಲನ್ನು ಸೇರಿತು. ಬೆಳಗಾದಾಗ ಮಳೆ ನಿಂತಿತ್ತು. ಯುವಕ ನದಿಯ ತೀರಕ್ಕೆ ಓಡಿಹೋಗಿ ನೋಡಿದಾಗ ತನ್ನ ಗಳಿಕೆಯೆಲ್ಲವೂ ಮಾಯವಾಗಿರುವುದು ಗೊತ್ತಾಯಿತು. ಬಿಕ್ಕಿ ಬಿಕ್ಕಿ ಅತ್ತ. ಮತ್ತೆ ಗೊಂಬೆಗಳನ್ನು ತಯಾರಿಸಿ ಹಣ
ಸಂಗ್ರಹಿಸುವ ನಿರ್ಧಾರಕ್ಕೆ ಬಂದ. ಆದರೆ ವರ್ಷವೊಂದು ಕಳೆದಿತ್ತು. ಅಪ್ಸರೆ ಹೇಳಿದಂತೆಯೇ ಅವನಿಗೆ ಗೊಂಬೆ ಮಾಡುವ ಕೌಶಲವೇ ಮರೆತುಹೋಗಿತ್ತು.

       ಹಣ ಕೈಯಲ್ಲಿದ್ದಾಗ ಸುಖಪಡಲು ಮುಂದಾಗದೆ ಜಿಪುಣನಾದೆ ಎಂದು ಪಶ್ಚಾತ್ತಾಪಪಡುತ್ತ ಯುವಕ ಮತ್ತೆ ಕಷ್ಟದಿಂದಲೇ ಬದುಕಬೇಕಾಯಿತು.

– ಪ.ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next