ಚಿಕ್ಕಮಗಳೂರು: ಕೋವಿಡ್ ಕಾರಣದಿಂದ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಕಡಿಮೆ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಬೇಕಿದೆ. ನಿಯಮ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ ನಡೆಸಿದವರ ವಿರುದ್ಧ ಪ್ರಕರಣಗಳು ದಾಖಲಾದ ಉದಾಹರಣೆಯೂ ಇದೆ. ಆದರೆ ಇಲ್ಲೊಬ್ಬ ವರ ಮಹಾಶಯ ಮದುವೆ ಮಂಟಪಕ್ಕೆ ಬಂದ ಅಧಿಕಾರಿಗಳನ್ನು ಕಂಡು, ವಧುವನ್ನೇ ವೇದಿಕೆಯಲ್ಲಿ ಬಿಟ್ಟು ಕಾಲ್ಕಿತ್ತಿದ್ದಾನೆ!
ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ. ಮದುವೆ ಕಾರ್ಯಕ್ರಮಕ್ಕೆ ಮನೆಯವರು ಸ್ಥಳೀಯವಾಗಿ ಪರವಾನಗಿ ಪಡೆದಿದ್ದರು. ಕೇವಲ ಹತ್ತು ಜನರನ್ನು ಮಾತ್ರ ಸೇರಿಸಲು ಅನುಮತಿ ಸಿಕ್ಕಿತ್ತು. ಆದರೆ ಮದುವೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು.
ಇದನ್ನೂ ಓದಿ:ಹತ್ತು ವರ್ಷವಾದರೂ ಬಾಕಿ ಹಣ ಕೊಟ್ಟಿಲ್ಲ ಕೊಚ್ಚಿ ಟಸ್ಕರ್ಸ್ ತಂಡ: ಬ್ರಾಡ್ ಹಾಗ್ ಆರೋಪ
ಈ ವಿಚಾರ ತಿಳಿದು ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಮದುವೆಗೆ ಬಂದ ಅಧಿಕಾರಿಗಳನ್ನು ಕಂಡು ವಧುವನ್ನು ವೇದಿಕೆಯಲ್ಲೇ ಬಿಟ್ಟು ವರ ಓಡಿ ಹೋಗಿದ್ದಾನೆ.
ಇತ್ತ ಅಧಿಕಾರಿಗಳನ್ನು ಕಂಡ ಜನರು ಕಾಲ್ಕಿತ್ತಿದ್ದಾರೆ. ಊಟಕ್ಕೆ ಕುಳಿತಿದ್ದರು ಕೂಡಾ ಭರ್ಜರಿ ಭೋಜನವನ್ನೂ ಬಿಟ್ಟು ಕಾಲಿಗೆ ಬುದ್ದಿ ಹೇಳಿದ್ದಾರೆ.