Advertisement

ಗೃಹಜ್ಯೋತಿ: ಅರ್ಧ ಕೋಟಿ ನೋಂದಣಿ

11:29 PM Jun 25, 2023 | Team Udayavani |

ಬೆಂಗಳೂರು: ಸರಕಾರದ ಗೃಹಜ್ಯೋತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಅರ್ಧ ಕೋಟಿಯ ಗಟಿ ದಾಟಿದ್ದು, ಇದರೊಂದಿಗೆ ಒಟ್ಟಾರೆ ಫ‌ಲಾನುಭವಿಗಳ ಪೈಕಿ ಕಾಲು ಭಾಗದಷ್ಟು ಜನ ಯೋಜನೆಗಾಗಿ ಹೆಸರು ನೋಂದಾಯಿಸಿಕೊಂಡಂತಾಗಿದೆ.

Advertisement

ಯೋಜನೆ ಅಡಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಜೂ. 18ರಂದು ಚಾಲನೆ ನೀಡಲಾಗಿತ್ತು. ಇದರಡಿ ಈವರೆಗೆ 51,17,692 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಎಂಟು ದಿನಗಳಲ್ಲಿ ನಿತ್ಯ ಸರಾಸರಿ 6.40 ಲಕ್ಷ ಜನ ಹೆಸರು ಮತ್ತು ಆಧಾರ್‌ ಸಂಖ್ಯೆ ಹಾಗೂ ಗ್ರಾಹಕರ ಆರ್‌.ಆರ್‌ ಸಂಖ್ಯೆ ಜೋಡಣೆ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಒಟ್ಟು ಫ‌ಲಾನುಭವಿಗಳ ಸಂಖ್ಯೆ 2.14 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.

ಮೊದಲ ದಿನವಾದ ರವಿವಾರ 95 ಸಾವಿರ ಮಂದಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾ ಯಿಸಿಕೊಂಡು, ಆಧಾರ್‌ ಜೋಡಣೆ ಮಾಡಿದ್ದರು. ಎರಡನೇ ದಿನ 1.06 ಲಕ್ಷ ಗ್ರಾಹಕರು ನೋಂದಣಿ ಮಾಡಿ ಕೊಂಡಿದ್ದರು. ಮೂರ್‍ನಾಲ್ಕು ದಿನಗಳಿಂದ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಪರಿಣಾಮ ವಾರಾಂತ್ಯದ ದಿನಗಳಾದ ಶುಕ್ರವಾರ ಮತ್ತು ಶನಿವಾರ ಕ್ರಮವಾಗಿ 10.93 ಲಕ್ಷ ಹಾಗೂ 11.17 ಲಕ್ಷ (ರಾತ್ರಿ 8ರ ವರೆಗೆ) ಅರ್ಜಿಗಳು ಸಲ್ಲಿಕೆಯಾಗಿದ್ದವು. ರವಿವಾರ ಹೆಚ್ಚು-ಕಡಿಮೆ ಮತ್ತೆ 10 ಲಕ್ಷ ಜನ ನೋಂದಾಯಿಸಿಕೊಂಡಿದ್ದಾರೆ.

ಇ-ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಅನ್ನು ರಾಜ್ಯದ ಎರಡು ಸಾವಿರ ವಿದ್ಯುತ್‌ ಕಚೇರಿಗಳಲ್ಲೂ ಅವಕಾಶ ನೀಡಿದೆ. ಸೇವಾ ಸಿಂಧು ಪೋರ್ಟಲ್‌ //sevasindhugs.karnataka.gov.in  ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು ಎಂದು ಇಲಾಖೆ ಪ್ರಕಟನೆ ತಿಳಿಸಿದೆ.

ಹೆಚ್ಚುವರಿ ವಸೂಲಿ: ಸಹಾಯವಾಣಿಗೆ ದೂರು
ಯೋಜನೆ ಅಡಿ ಹೆಸರು ನೋಂದಣಿಗಾಗಿ ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಕಂಡುಬಂದರೆ, ಕೂಡಲೇ ಸಹಾಯವಾಣಿ 1912ಗೆ ಕರೆ ಮಾಡಬೇಕು ಎಂದು ಇಂಧನ ಇಲಾಖೆ ತಿಳಿಸಿದೆ.

Advertisement

ಗ್ರಾಮ ಪಂಚಾಯತ್‌ ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕ ಮಾತ್ರ ಪಾವತಿಸಬೇಕು. ಹೆಚ್ಚುವರಿ ಹಣ ಪಡೆಯುತ್ತಿರುವುದು ಕಂಡುಬಂದರೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ (1912)ಗೆ ಕರೆ ಮಾಡಬೇಕು ಎಂದು ಇಲಾಖೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next