ಪರಿಸರದ ಬಗ್ಗೆ ಮಕ್ಕಳಲ್ಲಿ ಇತ್ತೀಚೆಗೆ ಕಾಳಜಿ ಕಡಿಮೆ ಆಗುತ್ತಿದೆ. ಪರಿಸರ ನಮಗೆ ಏಕೆ ಮುಖ್ಯ ಎಂಬುದರ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ, ತಿಳಿಸುವ ಪ್ರಯತ್ನವನ್ನೂ ನಾವು ಮಾಡುವುದಿಲ್ಲ.
ಪ್ರಕೃತಿಯನ್ನು ಈಗಾಗಲೇ ಬಹಳಷ್ಟು ನಾವು ಹಾಲುಗೆಡವಿರುವುದರ ಪರಿಣಾಮವಾಗಿಯೇ ಹೊಸ ಹೊಸ ರೋಗಗಳು, ಪ್ರಳಯ, ಚಂಡ ಮಾರುತಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇವೆಲ್ಲದರ ಮಧ್ಯೆ ಹುಡುಗಿಯೊಬ್ಬಳು ಸದ್ದಿಲ್ಲದೆ ಸುದ್ದಿಯಾಗುತ್ತಿದ್ದಾಳೆ. ಅತಿಕಿರಿಯ ಪರಿಸರ ಪ್ರೇಮಿಯಾಗಿ ಗುರುತಿಸಲ್ಪಡುವ ಆಕೆಯ ಹೆಸರು ಗ್ರೀಟಾ ಥನ್‌ಬರ್ಗ್.
ಸ್ವೀಡನ್ ದೇಶದ ಗ್ರೀಟಾ ಥನ್‌ಬರ್ಗ್ ಹುಟ್ಟಿದ್ದು 2003ರಲ್ಲಿ. ಪರಿಸರದ ಬದಲಾವಣೆಗಳನ್ನು ಅತಿ ಸಣ್ಣ ವಯಸ್ಸಿನಲ್ಲೇ ಗುರುತಿಸಲ್ಪಡಲು ಆರಂಭಿಸಿದ್ದ ಹುಡುಗಿ ಇದರ ವಿರುದ್ದ ಮೊದಲು ಧ್ವನಿಯೆತ್ತಿದ್ದು ತನ್ನ 15ನೇ ವಯಸ್ಸಿನಲ್ಲಿ. ಹವಾಮಾನದ ಏರುಪೇರುಗಳನ್ನು ನಿಯಂತ್ರಿಸಲು ಸರಕಾರ ಪ್ರಯತ್ನಿಸಬೇಕು ಎಂದು ಸ್ವೀಡಿಷ್ ಪಾರ್ಲಿಮೆಂಟ್‌ನ ಎದುರು ಪ್ರತಿಭಟನೆ ಕುಳಿತಾಗ ಅದೊಂದು ಏಕಾಂಗಿ ಹೋರಾಟವಾಗಿತ್ತು. ಸರಕಾರವೂ ಚಾಕ್ಲೆಟ್‌ಗೆ ಹಠಪಡುವ ವಯಸ್ಸಿನ ಬಾಲಕಿಯ ಪ್ರತಿಭಟನೆಯನ್ನು ಅಷ್ಟಾಗಿ ಪರಿಗಣಿಸಲಿಲ್ಲ.
ಆದರೆ ಹಠ ಮಕ್ಕಳಿಗೆ ಇದ್ದಷ್ಟು ಬೇರೆ ಯಾರಿಗೂ ಇರುವುದಿಲ್ಲ. ಅವರಿಗೆ ಬೇಕೆನಿಸಿದ್ದನ್ನು ಪಡೆದೇ ತೀರುತ್ತಾರೆ. “ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈ ಮೆಟ್ ಚೇಂಜ್’ ಎಂಬ ಫಲಕವನ್ನು ಹಿಡಿದ ಪ್ರತಿಭಟನೆಗೆ ಆನಂತರದಲ್ಲಿ ಇತರ ಮಕ್ಕಳ ಬೆಂಬಲವೂ ಲಭಿಸಿತು. ಹೋರಾಟಕ್ಕೆ ಸಾಮಾಜಿಕ ಬೆಂಬಲವೂ ಲಭಿಸಿದಾಗ ಆಕೆಯನು ಇಡೀ ರಾಷ್ಟ್ರ ತಿರುಗಿ ನೋಡಿತು. ಪ್ರಕೃತಿಯನ್ನು ಮುಂದಿನ ತಲೆಮಾರಿಗೂ ಉಳಿಸಿ ಎಂಬುದು ಆಕೆಯ ಒಕ್ಕೊರಲಿನ ಕೂಗು. ಇದಕ್ಕಾಗಿ ವಿದೇಶ ಪ್ರಯಾಣಗಳನ್ನು ಕೈಗೊಂಡಲು. ತನ್ನ ಹೋರಾಟದ ತತ್ತ್ವಗಳನ್ನು ಪ್ರವಾಸದಲ್ಲೂ ರೂಢಿಸಿಕೊಂಡಿದ್ದ ಆಕೆ ಪ್ರಯಾಣಕ್ಕೆ ರೈಲು ಅಥವಾ ಹಡಗುಗಳನ್ನು ಬಳಸುತ್ತಿದ್ದಳು. 2019ರಲ್ಲಿ ಯುಎನ್ ಕ್ಲೈಮೇಟ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಆಕೆ ಹವಾಮಾನ ಬದಲಾವಣೆಯ ಕುರಿತು ರಾಷ್ಟ್ರ ದಿಗ್ಗಜರಲ್ಲಿ ಪ್ರಶ್ನೆಯನ್ನು ಮಾಡಿದ್ದಳು.
ಹವಾಮಾನ ವೈಪರೀತ್ಯಕ್ಕೆ ಮಾನವರೇ ನೇರ ಹೊಣೆ ಎಂಬ ರೀಟಾ ಥನ್‌ಬರ್ಗ್‌ಳ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕಾಗಿ ಹೋರಾಟ ಮಾಡಿದ ಪೋರೆಯ ಸಾಧನೆ ನಿಜಕ್ಕೂ ಮಾದರಿ. ಈ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ ( ಇಂಟರ್‌ನ್ಯಾಷನಲ್ ಚಿಲ್ಡ್ರನ್ಸ್ ಪೀಸ್ ಪ್ರೈಝ್) ಸಹಿತ ಹಲವು ಪ್ರಶಸ್ತಿಗಳು ಈಕೆಗೆ ಸಂದಿವೆ.
ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು