Advertisement

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

07:40 PM Dec 07, 2022 | Team Udayavani |

ಅಶ್ವಘೋಷ

Advertisement

ಗ್ರೀಷ್ಮಾ ಶ್ರೀಧರ್‌ ಕನ್ನಡ ಸಿನಿಮಾ ನಟಿ. ರಂಗಭೂಮಿಯ ಹಿನ್ನೆಲೆಯವರು. ಯಾವುದೇ ಪಾತ್ರವಾದರೂ ಅದನ್ನು ಅರಗಿಸಿಕೊಂಡು ಅಭಿನಯಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂಬುದು ಅವರ ನಂಬಿಕೆ. ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಇಫಿ) ಈ ಬಾರಿ ಅವರು ಅಭಿನಯಿಸಿದ ನಾನು ಕುಸುಮ ಚಲನಚಿತ್ರ ಪ್ರದರ್ಶಿತವಾಗಿತ್ತು. ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಮೂರು ಕನ್ನಡ ಚಲನಚಿತ್ರಗಳಲ್ಲಿ ಇದು ಒಂದು. ಡಾ. ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ಕೃಷ್ಣೇಗೌಡ ಇದನ್ನು ನಿರ್ದೇಶಿಸಿದ್ದಾರೆ. ನಾನು ಕುಸುಮ ಚಿತ್ರದ ಪ್ರದರ್ಶನದ ಬಳಿಕ ಮಾತಿಗೆ ಸಿಕ್ಕ ಗ್ರೀಷ್ಮಾ ಶ್ರೀಧರ್‌, ಕೇವಲ ತಮ್ಮ ಚಿತ್ರದ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ಸಿನಿಮಾ ಜಗತ್ತು ಮತ್ತು ತಮ್ಮ ಜಗತ್ತಿನ ಬಗ್ಗೆಯೂ ಮಾತನಾಡಿದ್ದಾರೆ. ಆ ಮಾತುಕತೆ ಇಲ್ಲಿದೆ.

ಅಂದ ಹಾಗೆ ಗ್ರೀಷ್ಮಾ ಶ್ರೀಧರ್‌, ಪದವಿಯನ್ನೂ ನಟನೆಯಲ್ಲೇ ಪಡೆದವರು. ಸೈಕಾಲಜಿ, ಸಾಹಿತ್ಯ, ರಂಗಭೂಮಿಯಲ್ಲಿ ಪದವಿ. ಡಿಪ್ಲೊಮಾ ಇನ್‌ ಆ್ಯಕ್ಟಿಂಗ್‌ ಮುಂಬಯಿಯಲ್ಲಿ ಮಾಡಿದವರು. ಬೇರೆ ಬೇರೆ ನಟನೆಯ ಕುರಿತ ಕಿರು ಕೋರ್ಸ್‌ಗಳು, ಕಾರ್ಯಾಗಾರದಲ್ಲೂ ಭಾಗವಹಿಸಿ ನಟನೆ ಕುರಿತು ಕೌಶಲವನ್ನು ರೂಢಿಸಿಕೊಂಡವರು. ಅದರೊಂದಿಗೆ ಒಂದಿಷ್ಟು ಅತ್ಯುತ್ತಮ ಕಲಾವಿದರ ನಟನೆಯನ್ನು ನೋಡುತ್ತಾ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ತಮ್ಮಲ್ಲೂ ರೂಢಿಸಿಕೊಳ್ಳಲು ಪ್ರಯತ್ನಿಸಿದವರು. ‘ಒಟ್ಟಿನಲ್ಲಿ ನಾನೊಬ್ಬ ಒಳ್ಳೆಯ, ಅತ್ಯುತ್ತಮ ಕಲಾವಿದೆಯಾಗಬೇಕು’ ಎಂಬುದು ಅವರ ಕನಸು ಹಾಗೂ ಧ್ಯೇಯ.

ಸಿನಿಮಾಕ್ಕೆ ಬಂದದ್ದರ ಬಗ್ಗೆ
ಸಿನಿಮಾ ರಂಗಕ್ಕೆ ಬಂದದ್ದಕ್ಕೆ ನನ್ನಲ್ಲಿ ಕಥೆಗಳಿಲ್ಲ. ಸಣ್ಣ ವಯಸ್ಸಿನಿಂದಲೂ ನಾಟಕ ನೋಡುತ್ತಿದ್ದೆ. ಆಮೇಲೆ ಅಭಿನಯಿಸಬೇಕೆನಿಸಿತು. ನಾಟಕದಲ್ಲೂ ಪಾತ್ರಗಳನ್ನು ಮಾಡಿದೆ. ಖುಷಿ ಎನಿಸಿತು. ಒಂದು ಪಾತ್ರವನ್ನು ಅಭಿನಯಿಸಿ ಬಂದ ದಿನ ಬಹಳ ಖುಷಿಯಾಗಿರುತ್ತಿದ್ದೆ. ಒಂದು ದಿನ ಇದನ್ನೇ ಯಾಕೆ ವೃತ್ತಿಯಾಗಿಸಿಕೊಳ್ಳಬಾರದು ಎಂಬ ಆಲೋಚನೆ ಬಂದಿತು. ನಿರ್ಧಾರ ತೆಗೆದುಕೊಂಡೆ. ನಟನೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕಾದ ಪೂರಕ ಮಾರ್ಗದಲ್ಲಿ ಕ್ರಮಿಸತೊಡಗಿದೆ ಎನ್ನುವ ಗ್ರೀಷ್ಮಾ, ನಾತಿಚರಾಮಿ, ಮಾಲ್ಗುಡಿ ಡೇಸ್‌, ನೋಡಿ ಸ್ವಾಮಿ ಇವ್ನಿರೋದೇ ಹೀಗೆ, ನಾನು ಕುಸುಮ, ಡೆಸ್ಪರೇಟ್‌ ವುಮೆನ್‌, ಸೈತಾನ, ಥರ್ಡ್‌ ವ್ಹೀಲ್‌, ಪ್ರಾಜೆಕ್ಟ್ ಶರಪಂಜರ ದಲ್ಲಿ ತೊಡಗಿಕೊಂಡವರು. ಇದಲ್ಲದೇ, ಏವಂ ಇಂದ್ರಜಿತ್‌, ಪಾಂಚಾಲ್‌, ಮಾಲ್ಗುಡಿ ಡೇಸ್‌ ಮತ್ತಿತರ ನಾಟಕಗಳಲ್ಲೂ ಅಭಿನಯಿಸಿದವರು. . ನಿರ್ದೇಶನದ ಬಗ್ಗೆ ಮೋಹ ಬಿಟ್ಟಿಲ್ಲ. ಆಸಕ್ತಿ ಇದೆ. ಕುತೂಹಲ ಅದಕ್ಕಿಂತ ಹೆಚ್ಚಿದೆ ಎನ್ನುತ್ತಾರೆ ಅವರು.

Advertisement

ನಾನು ಕುಸುಮದಲ್ಲಿ ಪಾತ್ರ ಇಷ್ಟವಾಯಿತೇ?
ನಿಜಕ್ಕೂ ಇಷ್ಟವಾಯಿತು. ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ಖುಷಿಯಾಯಿತು. ಅದೊಂದು ಒಳ್ಳೆಯ ಅವಕಾಶ. ನಮ್ಮ ಸಿನಿಮಾ ಕಂಡವರು ನನ್ನೊಡನೆ ಕೆಲವರು ಮಾತನಾಡಿದರು, ಅಭಿನಂದಿಸಿದರು, ಚೆನ್ನಾಗಿ ಅಭಿನಯಿಸಿದ್ದಿ ಎಂದು ಬೆನ್ನುತಟ್ಟಿದರು. ಇದೆಲ್ಲವೂ ನನಗೆ ಹೊಸತು. ಪ್ರೇಕ್ಷಕರು ಒಂದು ಪಾತ್ರವನ್ನು ಮೆಚ್ಚಿಕೊಂಡು ಅಭಿನಂದಿಸಿದಾಗ ನಮ್ಮ ಪ್ರಯತ್ನ ಕೈಗೂಡಿತು ಎಂದೆನಿಸಿತು. ನಿಜಕ್ಕೂ ಅದು ಭಾವನಾತ್ಮಕ ಕ್ಷಣ.

ಒಂದು ಸಿನಿಮಾವನ್ನು ನೀವು ಪ್ರೇಕ್ಷಕಳಾಗಿ ಹೇಗೆ ನೋಡುತ್ತೀರಿ?
ನನಗೆ ಸಿನಿಮಾ ವೀಕ್ಷಣೆಯೆಂದರೆ ಇಷ್ಟ. ಪಾತ್ರಗಳು, ಅವುಗಳ ನಿರ್ವಹಣೆ ಎಲ್ಲವೂ ಇಷ್ಟ. ಒಂದು ಪಾತ್ರವನ್ನು ಒಬ್ಬ ಕಲಾವಿದ ಮನಸ್ಸಪೂರ್ವಕಾಗಿ ಮಾಡಿದ್ದಾರೆಯೇ ಇಲ್ಲವೇ ಎನ್ನುವುದು ಮುಖ್ಯ. ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಹಲವು ಬಾರಿ ನನ್ನದೇ ಸಿನಿಮಾವನ್ನು ಪ್ರೇಕ್ಷಕಳಾಗಿ ಉಳಿದ ಪ್ರೇಕ್ಷಕರೊಂದಿಗೆ ನೋಡುವಾಗ, ಈ ಪಾತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಾಗಿತ್ತೇ? ನನ್ನ ಅಭಿನಯ ಪ್ರೇಕ್ಷಕರೊಂದಿಗೆ ಸಂವಾದಿಸಲು ಸಾಧ್ಯವಾಯಿತೇ? ಇಲ್ಲವೇ? ಎಂದೆಲ್ಲಾ ಯೋಚಿಸುವೆ. ಲೋಪ ಎನಿಸಿದ್ದನ್ನು ಮುಂದಿನ ಸಂದರ್ಭದಲ್ಲಿ ಸರಿಪಡಿಸಿಕೊಳ್ಳಲು ಯತ್ನಿಸುವೆ.

ಯಾವುದೇ ಸಿನಿಮಾದಲ್ಲಿ ಕಥಾವಸ್ತುವನ್ನು (ಕಂಟೆಂಟ್‌) ಹೇಗೆ ತೋರಿಸುತ್ತಾರೆ ಎನ್ನುವುದೇ ಮುಖ್ಯ. ಆ ದಿಸೆಯಲ್ಲಿ ಪ್ರತಿ ಪಾತ್ರಗಳು ಹಾಗೂ ದೃಶ್ಯಗಳ ಸಂಯೋಜನೆ ಮುಖ್ಯ ಎಂಬುದು ನನ್ನ ಅಭಿಪ್ರಾಯ. ಅಮ್ಮ ಮಗುವನ್ನು ಕಳೆದುಕೊಂಡಿರುವ ಒಂದು ಸನ್ನಿವೇಶ. ದುಃಖದಲ್ಲಿರುತ್ತಾಳೆ. ತತ್‌ಕ್ಷಣದ ಮರು ಸನ್ನಿವೇಶದಲ್ಲೇ ಆಕೆ ಹಿಂದಿನ ಸನ್ನಿವೇಶದ ಲವಲೇಶವೂ ಇಲ್ಲದಂತೆ ತದ್ವಿರುದ್ಧ ಸ್ಥಿತಿಯಲ್ಲಿರುತ್ತಾಳೆ. ಇದು ಕೊಂಚ ಇರಿಸುವ ಮುರಿಸು ತರಿಸುತ್ತದೆ ನನಗೆ. ಒಂದು ಪಾತ್ರ ಹಾಗೂ ಅದರ ಭಾವನೆಗಳನ್ನು ಸಂಯೋಜಿಸುವ ಕ್ರಮದಲ್ಲಿ ಸೂಕ್ಷ್ಮತೆಗಳು ಬಿಟ್ಟುಹೋಗಬಾರದೆಂಬುದು ನನ್ನ ಅನಿಸಿಕೆ.

ನಿಮ್ಮ ಕಲ್ಪನೆಯ ಅತ್ಯಂತ ಆದರ್ಶ ಪಾತ್ರ ಯಾವುದು? ಹೇಗಿರಬೇಕು?
ಅಂಥ ಕಲ್ಪನೆಯಿಲ್ಲ. ಈ ಪಾತ್ರ ಆ ಪಾತ್ರ ಎಂದಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದರ ಮತ್ತು ನನ್ನ ನಡುವೆ ಇರಬಹುದಾದ ಹೋಲಿಕೆಯನ್ನು ಹುಡುಕಿಕೊಳ್ಳುತ್ತೇನೆ. ಆ ಮೂಲಕ ಪಾತ್ರದೊಳಗೆ ಪ್ರವೇಶಿಸುವೆ. ಸಂವೇದನೆ ಎನ್ನುವುದು ಒಂದೇ. ಹೊಸ ಪಾತ್ರದಲ್ಲಿನ ಹೊಸತನ್ನು ಶೋಧಿಸುವುದೇ ಆಸಕ್ತಿಕರವಾದುದು. ನನಗೆ ಇಷ್ಟವೂ ಸಹ. ಕಥೆ ಸಾಗುವಿಕೆಗೆ ಪಾತ್ರಗಳು ಜೀವಾಳ. ಒಂದು ಪಾತ್ರ ಬೃಹತ್ತಾಗಿ ಬೆಳೆಯುವುದಕ್ಕೆ ಬರಹ ಕಾರಣವಿರಬಹುದು ಅಥವಾ ನಟ ಅಂಥದೊಂದು ಶಕ್ತಿಯನ್ನು ತುಂಬಬಹುದು. ಆದರೆ ಹಾಗೆ ಪಾತ್ರಗಳು ಜೀವ ತಳೆಯಬೇಕು. ಕೆಲವೊಮ್ಮೆ ಒಂದು ಕಥೆಯ ಭಾಗವಾಗಿ ಬರುವ ಪಾತ್ರ-ನೋಡುವಾಗ ಒಳಗೊಳ್ಳುತ್ತಿಲ್ಲ ಎನ್ನಿಸುವುದಿದೆ. ಪಾತ್ರದಲ್ಲಿನ ಸಹಜತೆ ನಾನು ಇಷ್ಟಪಡುವೆ. ಅದಕ್ಕೆ ಪ್ರತಿ ಕ್ಷಣದಲ್ಲೂ ಪ್ರಯತ್ನಿಸುವೆ. ಹಾಗೆಯೇ ಕೆಲವೊಮ್ಮೆ ನನ್ನಲ್ಲಿರಬಹುದಾದ ಸಾಮ್ಯತೆಯ ಒಂದಂಶವೂ ನನ್ನ ಪಾತ್ರದಲ್ಲಿರದು. ಆಗ ಅದನ್ನು ಅರಿತು ಪಾತ್ರವಾಗುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವೆ. ಮಾಲ್ಗುಡಿ ಡೇಸ್‌ ನ ಪಾತ್ರಕ್ಕೂ ನನ್ನ ವೈಯಕ್ತಿಕ ನೆಲೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೆ ಅದನ್ನೂ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಿದೆ. ನಮ್ಮೊಳಗೆ ಬೆಳೆಯುವಂಥ ಪಾತ್ರಗಳೆಂದರೆ ಇಷ್ಟ.

ಇಫಿ ಸಿನಿಮೋತ್ಸವದ ಅನುಭವ ಹೇಳಿ. ಈ ಹಿಂದೆ ಯಾವುದಾದರೂ ಸಿನಿಮೋತ್ಸವಗಳಲ್ಲಿ ಭಾಗವಹಿಸಿದ್ದಿರಾ? ಯಾವ ದೃಷ್ಟಿಯಿಂದ ಸಿನಿಮೋತ್ಸವ ಬೇಕು ಎನ್ನಿಸುತ್ತದೆ?
ಈ ಅನುಭವ ಹೊಸತು. ಚೆನ್ನಾಗಿತ್ತು. ಹಿಂದೆ ಹಲವು ಚಿತ್ರೋತ್ಸವಗಳಿಗೆ ಹೋಗಲು ಆಸೆಯಿತ್ತು; ಅವಕಾಶವಾಗಲಿಲ್ಲ. ಈ ಚಿತ್ರೋತ್ಸವದಲ್ಲಿ ಸಿನಿಮಾ, ಕಲೆಗೆ ಆಸಕ್ತಿ ಹೊಂದಿರುವಂಥ ಹಲವರು ಪರಿಚಯವಾದರು. ನಮ್ಮ ದೇಶ, ರಾಜ್ಯವಷ್ಟೇ ಅಲ್ಲ. ಬೇರೆ ದೇಶದವರೂ ಬಂದಿದ್ದರು. ಸುಮಾರು ಸಿನಿಮಾ ನೋಡಿದೆ. ಕೆಲವು ಚಿತ್ರಗಳು ಇಷ್ಟವಾದವು.
ಒಂದು ಮಾತಿದೆ. ಕೆಲವು ಪಾತ್ರಗಳು ನಮ್ಮೊಳಗೇ ಒಂದು ಪರಿವರ್ತನೆಯನ್ನು ತರಬಲ್ಲಷ್ಟು ಶಕ್ತವಾಗಿರುತ್ತವೆ (ಪವರ್‌ ಪುಲ್‌) ಎಂಬುದು. ಹೌದೇ?
ಹೌದು. ಅಂಥ ಪಾತ್ರಗಳಿವೆ. ಹಿಂದೆ ಒಂದು ನಾಟಕದಲ್ಲಿ ದ್ರೌಪದಿ ಪಾತ್ರ ಮಾಡಿದ್ದೆ. ಅದರಲ್ಲಿನ ಪಾತ್ರದ ಹಲವು ಅಂಶಗಳು ನನ್ನ ನಿಜ ಜೀವನದ ಮೇಲೂ ಪ್ರಭಾವಿಸಿತು. ಆ ಪಾತ್ರ ನನ್ನನ್ನು ಈಗಲೂ ಕಾಡುವಂಥದ್ದು. ಸಿನಿಮಾದಲ್ಲಿ ಅಂಥದೊಂದು ನಿರೀಕ್ಷೆ ಇದೆ.

ಒಂದು ಕಥೆಯಲ್ಲಿ ಪಾತ್ರ ಜತೆಗೇ ಬೆಳೆಯಬೇಕು. ಮಾಡೋದನ್ನೇ ಮಾಡೋವಾಗ ಬೇಸರ ಬರಬಹುದು. ಆದರೆ ಪ್ರತಿ ಪಾತ್ರವೂ ಬೇರೆ ಬೇರೆ. ಅದಕ್ಕೆ ಜೀವ-ಭಾವ ತುಂಬುವುದಷ್ಟೇ ನಮ್ಮ ಪ್ರಯತ್ನ. ಒಂದೇ ಪರಿಸರದಲ್ಲಿರುವ ಎಲ್ಲ ಪಾತ್ರಗಳೂ ವಿಭಿನ್ನವೇ. ಹಾಗಾಗಿ ಪ್ರತಿ ಬಾರಿಯೂ ಪ್ರತಿ ಸೃಷ್ಟಿ ಮಾಡಬೇಕು. ಹಾಗಾಗಿ ಅದೊಂದು ಯಾಂತ್ರಿಕ ಕ್ರಿಯೆ ಎನಿಸದು. ನಮ್ಮ ಪಾತ್ರದಿಂದಲೇ ಕಥೆ ಸಾಗಬೇಕು ಎಂಬುದಿಲ್ಲ. ಕಥೆಯ ಭಾಗವಾಗಿದ್ದರೆ ಸೂಕ್ತ. ಒಳ್ಳೆಯ ತಂಡವಿದ್ದರೆ ಖುಷಿಯಾಗುತ್ತದೆ. ಲವಲವಿಕೆಯಿಂದ ನಟಿಸಬಹುದು. ನಮ್ಮೊಳಗೂ ಹೊಸ ಚೈತನ್ಯ ತುಂಬುವಂಥ ಪಾತ್ರಗಳಿದ್ದರೆ ಚೆನ್ನ.

ನಟ ಎಂಬುವವನು ಹುಟ್ಟುತ್ತಾನೆಯೇ? ಸೃಷ್ಟಿಸಲಾಗುತ್ತದೆಯೇ?
ಕಲಿತರೆ ಏನು ಬೇಕಾದರೂ ಸಾಧಿಸಬಹುದುಎಂಬುದು ನನ್ನ ನಂಬಿಕೆ. ಹುಟ್ಟಿದಾಗಿನಿಂದಲೇ ಆ ಪ್ರತಿಭೆ ಇದ್ದರೆ ಅದೊಂದು ಅದೃಷ್ಟ, ಅವಕಾಶ. ಆದರೆ ಕಲಾವಿದನನ್ನು ಸೃಷ್ಟಿಸಲು ಸಾಧ್ಯವಿಲ್ಲವೆಂದಲ್ಲ. ಪರಿಶ್ರಮ, ತೊಡಗಿಸಿಕೊಳ್ಳುವಿಕೆಯಿಂದ ಸಾಧ್ಯ. ಒಬ್ಬ ಅಭಿಜಾತ ಪ್ರತಿಭೆಯೂ ಸಹ ಪರಿಶ್ರಮದಲ್ಲಿ ತೊಡಗದೇ ಇದ್ದರೆ ಬಹಳ ಕಾಲ ಬೆಳಗದು. ಶೂನ್ಯದಿಂದ ಕಲಿತು ದಿನವೂ ಪ್ರಯತ್ನಿಸುತ್ತಾ, ಪ್ರಯೋಗದಲ್ಲಿ ತೊಡಗಿಸಿಕೊಳ್ಳುತ್ತಾ ಬೆವರು ಸುರಿಸಿದರೆ ಹೊಸ ಸಾಧ್ಯತೆಯನ್ನು ಸೃಷ್ಟಿಸಬಹುದು. ಯಾವುದಕ್ಕಾದರೂ ಪ್ರಯತ್ನ ಮತ್ತು ಪರಿಶ್ರಮ ಬೇಕೇಬೇಕು. ಏನೇ ಆದರೂ ಇಬ್ಬರ ಹೊಣೆಗಾರಿಕೆ ಹಾಗೂ ಪ್ರಯತ್ನ ಒಂದೇ. ಅದೇನೆಂದರೆ ಅತ್ಯುತ್ತಮ ರೀತಿಯಲ್ಲಿ ಸಂವಹನಶಾಲಿಯಾಗಿ ಪ್ರಸ್ತುತಪಡಿಸುವುದು. ನಟನಾ ಶಾಲೆಯಲ್ಲಿ ನಮಗೆ ಅದನ್ನೇ ಕಲಿಸುತ್ತಾರೆ. ನಮಗೆ ಗೊತ್ತಿರುವುದನ್ನು ಇನ್ನೂ ಹೆಚ್ಚು ಚೆನ್ನಾಗಿ ಪ್ರಸ್ತುತಪಡಿಸುವ ರೀತಿಯನ್ನು ಹಾಗೂ ಬಗೆಯನ್ನು ಹೇಳಿಕೊಡುತ್ತಾರೆ. ಅದನ್ನೇ ನೀವು ಕೌಶಲ ಎನ್ನಬಹುದು. ಇದರೊಂದಿಗೆ ಕೆಲವರ ನಟನೆಯ ಕಂಡು, ಆಸ್ವಾದಿಸಿ ಕಲಿಯುವುದೂ ಇದ್ದೇ ಇದೆ.

ಅದೃಷ್ಟ ಮೇಲೆ ನಂಬಿಕೆಯೆಷ್ಟು ?
ನಂಬಿಕೆ ಇದೆ. ಸರಿಯಾದ ಸಂದರ್ಭಗಳಲ್ಲಿ ಸರಿಯಾದ ಅವಕಾಶ ಸಿಗಬೇಕೆಂದರೆ ಅದೃಷ್ಟ ಬೇಕೇಬೇಕು. ಸಾವಿರಾರು ಮಂದಿ ಪರಿಶ್ರಮ ಪಡುತ್ತಿರುತ್ತಲೇ ಇರುತ್ತಾರೆ. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸರಿಯಾದ ಅವಕಾಶ ಸಕಾಲದಲ್ಲಿ ಪಡೆಯುವವರು ನಿಜಕ್ಕೂ ಅದೃಷ್ಟಶಾಲಿಗಳು. ಹಾಗೆಯೇ ನಾನು ನಿಜಕ್ಕೂ ಅದೃಷ್ಟವಂತೆ, ಅದಕ್ಕೆ ಕಷ್ಟ ಪಟ್ಟಿದ್ದಕ್ಕೆ ಸಾರ್ಥಕವಾಯಿತು ಎಂದೆನಿಸಬೇಕು. ಅದೃಷ್ಟ ಬಂದಾಗ ಸ್ವೀಕರಿಸಲು, ಬಳಸಿಕೊಳ್ಳುವಂಥ ಸಾಮರ್ಥಯ, ಸಾಧ್ಯತೆ ಎರಡನ್ನೂ ನಾವು ಹೊಂದಿರಬೇಕು, ಗಳಿಸಿಕೊಂಡಿರಬೇಕು. ಸುಮ್ಮನೆ ಕುಳಿತು ಒಂದಿನ ಅದೃಷ್ಟ ಬರುತ್ತದೆ ಎಂದು ಕಾಯುತ್ತಾ ಕುಳಿತರೆ ಪ್ರಯೋಜನವಾಗದು. ಅದೃಷ್ಟ ಬಂದಾಗ ಅದನ್ನು ದುಡಿಸಿಕೊಳ್ಳುವ ಜಾಣ್ಮೆ ಹಾಗೂ ಕೌಶಲವೂ ನಮ್ಮಲ್ಲಿರಬೇಕು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next