Advertisement

ಅಂತೂ ಧರ್ಮಪುರ ಕೆರೆಗೆ ಕಾಯಕಲ್ಪ

02:33 PM Jun 03, 2022 | Team Udayavani |

ಧರ್ಮಪುರ: ಇಲ್ಲಿನ ಐತಿಹಾಸಿಕ ಕೆರೆಗೆ ಕೊನೆಗೂ ಕಾಯಕಲ್ಪ ದೊರೆತಿದೆ. ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಜೂ. 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಗ್ರಾಮಸ್ಥರು, ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದೆ.

Advertisement

ಧರ್ಮಪುರ ಸಮೀಪದ ಹೊಸಹಳ್ಳಿ ಡ್ಯಾಂ ಬಳಿ ಭೂಮಿಪೂಜೆ ನೆರವೇರಲಿದ್ದು, ಹರಿಯಬ್ಬೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ 35 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಏರಿ ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಭೂಮಿಪೂಜೆ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆ ನಡೆದಿದೆ.

ಸತತ ನಲವತ್ತು ವರ್ಷಗಳಿಂದ ಬರಗಾಲದ ಬವಣೆಯಿಂದ ಧರ್ಮಪುರ ಹೋಬಳಿಯ ಜನರು ಬೇಸತ್ತಿದ್ದರು. ಒಂದು ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗದ ಸಂದರ್ಭದಲ್ಲಿ ಹೋಬಳಿಯ ಏಳು ಕೆರೆಗಳಿಗೆ ಕುಡಿಯುವ ನೀರು ಯೋಜನೆ ಅಡಿ ನೀರು ಹರಿಸುತ್ತಿರುವುದು ರೈತರಲ್ಲಿ ಆಶಾವಾದ ಮೂಡಿಸಿದೆ. ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಹೊಸಹಳ್ಳಿ ಬ್ಯಾರೇಜ್‌ ನಿಂದ ಪೈಪ್‌ಲೈನ್‌ ಮೂಲಕ ಧರ್ಮಪುರ ಕೆರೆಗೆ ನೀರು ಹರಿಸಲಾಗುತ್ತದೆ. ಅಂದಾಜು 90 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು. ಮೊದಲ ಹಂತದಲ್ಲಿ 40 ಕೋಟಿ ರೂ. ಬಿಡುಗಡೆಯಾಗಿದೆ.

ಧರ್ಮಪುರ ಕೆರೆ ನೀರಿನ ಸಾಮರ್ಥ್ಯ 0.50 ಟಿಎಂಸಿ ಅಡಿ ಇದ್ದು, 1200 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಧರ್ಮಪುರ ಫೀಡರ್‌ ನಾಲೆ ವಿಚಾರ ಪ್ರಬಲ ಆಸ್ತ್ರವಾಗಿತ್ತು. ಭರವಸೆ ನೀಡುತ್ತಿದ್ದವರು ಶಾಸಕರಾದ ನಂತರ ಈ ವಿಷಯ ಮರೆಯುತ್ತಿದ್ದರು. ಆದರೆ ಈಗ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ಧರ್ಮಪುರ ಕೆರೆಗೆ ನೀರು ಹರಿಯಲಿದೆ.

Advertisement

ಧರ್ಮಪುರ ಕೆರೆಗೆ ನೀರು ಹರಿಸುವುದು ನನ್ನ ತಂದೆ ದಿ| ಎ. ಕೃಷ್ಣಪ್ಪ ಅವರ ಕನಸಾಗಿತ್ತು. ಧರ್ಮಪುರ ಕೆರೆಗೆ ನೀರು ಹರಿಸಿ ಹಲವು ದಶಕಗಳ ಬೇಡಿಕೆ ಈಡೇರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಿದ್ದೆ. ಪಟ್ಟು ಹಿಡಿದು ಇಚ್ಛಾಶಕ್ತಿ ಪ್ರದರ್ಶಿಸಿದ ಪರಿಣಾಮ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಹಿರಿಯೂರನ್ನು ರಾಜ್ಯದಲ್ಲೇ ಮಾದರಿ ತಾಲೂಕಾಗಿಸುವುದೇ ಗುರಿ. -ಪೂರ್ಣಿಮಾ ಶ್ರೀನಿವಾಸ್‌, ಶಾಸಕರು

ಧರ್ಮಪುರ ನೀರು ಹರಿಸುವ ಹೋರಾಟಕ್ಕೆ ಶತಮಾನದ ಇತಿಹಾಸ ಇದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಬಿಜೆಪಿ ಸರ್ಕಾರ ಮನಸ್ಸು ಮಾಡಿದ್ದರಿಂದ ಕೆರೆಗೆ ನೀರು ಹರಿಸುವ ಕಾಮಗಾರಿ ಚಾಲನೆ ದೊರೆತಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ನೀರಿನ ಬವಣೆ ನೀಗಿಸುವ ಹೊಣೆಗಾರಿಕೆ ಶಾಸಕೆ ಮೇಲಿದೆ. -ಹಾರ್ಡ್‌ವೇರ್‌ ಶಿವಣ್ಣ, ರೈತ ಸಂಘದ ಅಧ್ಯಕ್ಷರು

ಧರ್ಮಪುರ ಕೆರೆಗೆ ನೀರು ಮತ್ತು ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ಉರುಳು ಸೇವೆ, ಪಂಜಿನ ಮೆರವಣಿಗೆ, ಉಪವಾಸ ಸತ್ಯಾಗ್ರಹ ಸೇರಿದಂತೆ 125 ದಿನಗಳ ಕಾಲ ವಿವಿಧ ರೀತಿಯ ಹೋರಾಟ ಮಾಡಲಾಗಿತ್ತು. ಆದರೆ ಪ್ರಯೋಜ ಆಗಿರಲಿಲ್ಲ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಇಚ್ಛಾಶಕ್ತಿ ಪ್ರದರ್ಶಿಸಿ ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ. – ಟಿ. ರಂಗಸ್ವಾಮಿ, ದಸಂಸ ತಾಲೂಕು ಸಂಚಾಲಕರು

ಧರ್ಮಪುರ ಕೆರೆಗೆ ನೀರು ಹರಿಸುವುದರಿಂದ ಈ ಭಾಗದ ಸುಮಾರು 36 ಹಳ್ಳಿಗಳಲ್ಲಿ ಅಂರ್ತಜಲ ಮಟ್ಟ ಹೆಚ್ಚುತ್ತದೆ. ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಜಕ್ಕೆ ಹೋಬಳಿಯ ಜನರು ಕುಟುಂಬ ಸಮೇತರಾಗಿ ಹೋಗುತ್ತೇವೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು ಶತಮಾನದ ಕನಸನ್ನು ನನಸು ಮಾಡಿದ್ದಾರೆ. ಮುಖ್ಯಮಂತ್ರಿಗಳು ಧರ್ಮಪುರ ತಾಲೂಕು ಕೇಂದ್ರ ಘೋಷಣೆ ಮಾಡುವ ನಿರೀಕ್ಷೆ ಇದೆ. -ಎಂ. ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷರು

-ಎಂ. ಬಸೇಗೌಡ

 

Advertisement

Udayavani is now on Telegram. Click here to join our channel and stay updated with the latest news.

Next