Advertisement

ನಗರ ವ್ಯಾಪ್ತಿ ಚತುಷ್ಪಥ ರಸ್ತೆಗೆ ಗ್ರೀನ್‌ ಸಿಗ್ನಲ್‌!

05:43 PM Feb 25, 2022 | Team Udayavani |

ಮಸ್ಕಿ: ಬಹುನಿರೀಕ್ಷಿತ ಮಸ್ಕಿ ಸಿಟಿ ವ್ಯಾಪ್ತಿಯ ರಸ್ತೆ ಅಗಲೀಕರಣ, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಬಹುಕೋಟಿ ಮೊತ್ತದ ಈ ಯೋಜನೆಗೆ ಕೇಂದ್ರದಿಂದ ಹಣಕಾಸಿನ ನೆರವು ದಕ್ಕಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭದ ನಿರೀಕ್ಷೆ ಗರಿಗೆದರಿವೆ!.

Advertisement

ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಮಸ್ಕಿಯಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಟ್ಟಣ ವ್ಯಾಪ್ತಿಯೊಳಗೆ ನಾಲ್ಕು ಪಥದ ರಸ್ತೆಯನ್ನಾಗಿಸುವ ಕನಸು ಈಗ ಸಾಕಾರಗೊಳ್ಳುವತ್ತ ಸಾಗಿದೆ. ಮಸ್ಕಿ ತಾಲೂಕು ಕೇಂದ್ರವಾದ ಬಳಿ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ತೀವ್ರ ಇಕ್ಕಟ್ಟಾಗಿದ್ದರಿಂದ ಪಾರ್ಕಿಂಗ್‌ ಗೆ ಸ್ಥಳವಕಾಶವಿರಲಿ, ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಯಾಗುತ್ತಿದೆ.

ತೀವ್ರ ಇಕ್ಕಟ್ಟು ಪರಿಸ್ಥಿತಿ ಕಾರಣ ನಿರಂತರ ಟ್ರಾಫಿಕ್‌ ಹೆಚ್ಚುತ್ತಿತ್ತು. ಹೀಗಾಗಿ ಇಲ್ಲಿನ ರಸ್ತೆ ಅಗಲೀಕರಣಗೊಳಿಸಿ ಚತುಷ್ಪಥದ ರಸ್ತೆ ಯನ್ನಾಗಿಸುವುದಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕರಡಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕಿದ್ದರು. ಇದರ ಪರಿಣಾಮವಾಗಿ ಈಗ ರಸ್ತೆ ಅಗಲೀಕರಣದ ಭಾಗ್ಯ ಒಲಿದಿದೆ.

ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ 2.85 ಕಿ.ಮೀ ರಸ್ತೆಯನ್ನು ರಸ್ತೆ ವಿಭಜಕ, ಒಳ ಚರಂಡಿ, ಪಾದಚಾರಿ ರಸ್ತೆ ಹಾಗೂ ರಸ್ತೆ ಬದಿಯಲ್ಲಿ ಹೈಮಾಸ್ಟ್‌ ಬೀದಿ ದೀಪಗಳ ಅಳವಡಿಸುವ ಯೋಜನೆ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹುನಗುಂದ ವಿಭಾಗದ ಅಧಿಕಾರಿಗಳು ಕಾಮಗಾರಿಗೆ ತಗುಲುವ ವೆಚ್ಚದ ಕುರಿತು ಅಂದಾಜು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದ್ದರು. ಈಗ ಕೇಂದ್ರ ಸರ್ಕಾರ 14 ಕೋಟಿ ವೆಚ್ಚದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದೆ.

ಮಸ್ಕಿ ಪಟ್ಟಣದಲ್ಲಿ ಹಾದು ಹೋಗುವ ರಸ್ತೆ ಚತುಷ್ಪಥ ರಸ್ತೆಯನ್ನಾಗಿಸುವುದಕ್ಕಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯುವ ಸಲುವಾಗಿ ಯೋಜನೆಯ ಹೆದ್ದಾರಿ ಪ್ರಾಧಿಕಾರದ ಹುನಗುಂದ ವಿಭಾಗದ ಹಿರಿಯ ಅಧಿಕಾರಿಗಳು ಕಳೆದೊಂದು ವಾರದಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 15 ದಿನಗಳ ಒಳಗಾಗಿ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ತಿಂಗಳೊಳಗಾಗಿ ಕಾಮಗಾರಿ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳ ಮೂಲದಿಂದ ತಿಳಿದು ಬಂದಿದೆ.

Advertisement

ಪಟ್ಟಣದ 2.85 ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚರಂಡಿ, ಪುಟ್‌ಪಾತ್‌ ಸೇರಿ ಒಟ್ಟು 26 ಮೀ. ರಸ್ತೆ ಅಗಲೀಕರಣವಾಗಲಿದೆ. 26 ಮೀ. ಒಳಗೆ ಬರುವ ವಿದ್ಯುತ್‌ ಕಂಬ ಹಾಗೂ ಕುಡಿವ ನೀರಿನ ಪೈಪ್‌ಲೈನ್‌ ಸ್ಥಳಾಂತರಿಸುವ ಸಂಬಂಧ ಹೆದ್ದಾರಿ ಪ್ರಾಧಿಕಾರದಿಂದ ಜೆಸ್ಕಾಂ ಹಾಗೂ ಪುರಸಭೆಗೆ ಹೆದ್ದಾರಿ ಪತ್ರಗಳು ಬಂದಿವೆ. ಪಟ್ಟಣದ ರಸ್ತೆಯ ಆಧುನೀಕರಣ ಬರುವ ದಿನಗಳಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ಚತುಷ್ಪಥ ಕಾಮಗಾರಿಗೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ. ಹೀಗಾಗಿ 15 ದಿನಗಳ ಒಳಗಾಗಿ ಟೆಂಡರ್‌ ಪ್ರಕ್ರಿಯೆ ಆರಂಭವಾಗುತ್ತದೆ. -ವಿಜಯಕುಮಾರ್‌ ಪಾಟೀಲ್‌, ಹೆದ್ದಾರಿ ಪ್ರಾಧಿಕಾರ, ಹುನಗುಂದ

ಕೇಂದ್ರ ಸರ್ಕಾರ ಇದೀಗ ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ ಹಾಗೂ ವಿಭಜಕ ನಿರ್ಮಾಣದ ಅಂದಾಜು ಪಟ್ಟಿಗೆ ಒಪ್ಪಿಗೆ ಸೂಚಿಸಿದೆ. ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸಚಿವರ ಮೇಲೆ ಸತತ ಒತ್ತಡ ಹಾಕಿ ಆಡಳಿತಾತ್ಮಕ ಒಪ್ಪಿಗೆ ಪಡೆಯಲಾಗಿದೆ. ಇದೀಗ ಹಣಕಾಸು ಸಚಿವರನ್ನು ಭೇಟೆಯಾಗಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಆದಷ್ಟು ಬೇಗ ದೊರೆಯುತ್ತದೆ. -ಸಂಗಣ್ಣ ಕರಡಿ, ಸಂಸದ, ಕೊಪ್ಪಳ ಕ್ಷೇತ್ರ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next