Advertisement
ಸರ್ಕಾರಿ ಶಾಲೆ ಅಂದರೆ ಕಿತ್ತು ಹೋದ ನೆಲ, ಮುರಿದು ಹೋದ ಬಾಗಿಲು, ತೂತು ಬಿದ್ದ ಹೆಂಚು, ಬೋರ್ಡು ಕಾಣದ ಗೋಡೆ, ಹಸಿರೇ ಇಲ್ಲದ ಬಯಲು… ಹೀಗೆ ಏನೇನೋ ಚಿತ್ರಣಗಳು ಕಣ್ಣ ಮುಂದೆ ಬಂದುಬಿಡುತ್ತವೆ. ಆದರೆ ಈ ಶಿಕ್ಷಕರ ಕಲಾ ಸಂಘ ಹೆಜ್ಜೆ ಇಟ್ಟ ಶಾಲೆಗಳು ಈ ಯಾವ ಕಲ್ಪನೆಗಳೂ ಮೂಡದಂತೆ ಮಾಡಿಬಿಟ್ಟಿವೆ.
ಇದು, ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಿಗೆ ಹಸಿರ ಪಾಠ ಮಾಡುತ್ತಿರುವ ಶಿಕ್ಷಕರ ತಂಡ. ಅದೂ ಸರ್ಕಾರಿ ಶಿಕ್ಷಕರ ತಂಡ. ಕೊಪ್ಪಳದಲ್ಲಿದೆ. ಇವರಿಗೆ ಬೀಳುವ ಕನಸುಗಳೂ ಕೂಡ ಹಸಿರಮಯವೇ. ರಾಮಣ್ಣ ಶ್ಯಾವಿ, ಶಿವನಗೌಡ ಪಾಟೀಲ, ಪ್ರಾಣೇಶ ಪೂಜಾರ ಎಂಬ ಮೂವರು ಶಿಕ್ಷಕರೇ ಈ ಸಂಘದ ಅಡಿಪಾಯಗಳು.
ಇವರೇನು ಮಾಡ್ತಾರೆ ಅಂದರೆ- ಶಾಲೆಗಳಿಗೆ ಭೇಟಿ ನೀಡುತ್ತಾರೆ. ಹಸಿರ ಬಗ್ಗೆ ತಿಳಿ ಹೇಳುತ್ತಾರೆ. ಇಷ್ಟೇ ಇವರ ಕೆಲಸವಲ್ಲ. ಆ ಗಿಡಗಳ ನಿರ್ವಹಣೆಯ ಉಸ್ತುವಾರಿಯನ್ನೂ ತಮ್ಮ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ. ಶಿಕ್ಷಕರ ಕಲಾಸಂಘದ ಸದಸ್ಯರು ಮೊದಲು ತಾವು ವೃತ್ತಿಮಾಡುತ್ತಿರುವ ಶಾಲೆಗಳಲ್ಲಿ ಸಸಿ ನೆಟ್ಟರು. ಮುಂದೆ ಅವುಗಳ ಪೋಷಣೆಯ ಜವಾಬ್ದಾರಿಯನ್ನು ಶಿಕ್ಷಕರೇ ತೆಗೆದುಕೊಂಡು ಬೆಳಸಿದರು. ನಂತರ ಅಕ್ಕಪಕ್ಕದ ಊರುಗಳ ಶಾಲೆಗಳ ಮೇಲೆ ಕಣ್ಣಿಟ್ಟರು. ಹಾಗಂತ ಇವರು ಪಾತ್ರ ಮಾಡುವುದನ್ನು ಮರೆತು, ಶಾಲೆಬಿಟ್ಟು ಇವೆಲ್ಲಾ ಕೆಲಸ ಮಾಡುವುದಿಲ್ಲ. ಭಾನುವಾರ ಮತ್ತು ಸರ್ಕಾರಿ, ಬೇಸಿಗೆ ರಜೆಗಳನ್ನು ಈ ಹಸಿರು ಸೇವೆಯ ಕೆಲಸಕ್ಕೆ ಬಳಸಿ ಕೊಳ್ಳುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯನ್ನೇ ಒಂದು ನೆಪ ಮಾಡಿಕೊಂಡು, ಒಂದೆಡೆ ಸೇರುವ ಇವರು, ಶಾಲೆ ಪ್ರಾರಂಭವಾದ ಬಳಿಕ ಪ್ರತಿ ಭಾನುವಾರ ಒಂದುಕಡೆ ಸೇರಿ ಮುಂದಿನ ಹಸಿರ ಯೋಜನೆಗಳು, ಶಾಲೆಯ ಉದ್ದಾರದ ಬಗ್ಗೆ ಚರ್ಚಿಸುತ್ತಾರೆ. ಇವರದು ವಾಟ್ಸಾಪ್ ಗ್ರೂಪ್ ಇದೆ. ಆರಂಭದ ವಿಷಯಗಳ ಮಂಡಣೆ ಇಲ್ಲಿ ಆಗುತ್ತದೆ. ನಂತರ ಯಾವುದಾದರು ಒಂದು ಭಾನುವಾರ ಮುಖಾಮುಖೀಯಾಗಿ ಯೋಜನೆಗಳನ್ನು ಅಂತಿಮಗೊಳಿಸುವುದು ಇವರ ರೂಢಿ. ಕೊಪ್ಪಳ ತಾಲೂಕಿನ ಹನುಮನಹಳ್ಳಿ, ಬೂದಗುಂಪಾ, ಗಬ್ಬೂರ, ಹ್ಯಾಟಿ, ಸೂಳಿಕೇರಿ ತಾಂಡ, ಗಂಗಾವತಿ ತಾಲೂಕಿನ ಕನ್ನೇರಮಡು, ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನಾಗಿ ಮಾಡಲು ಎಲ್ಲರೂ ನೆರವಾಗಿದ್ದಾರೆ.
Related Articles
2010 ನೇ ಇಸವಿಯಲ್ಲಿ ಶಿಕ್ಷಕರಾದ ರಾಮಣ್ಣ ಶ್ಯಾಮಿ, ಶಿವನಗೌಡ ಪಾಟೀಲ, ಪ್ರಾಣೇಶ ಪೂಜಾರ ಈ ಮೂವರೂ ಗದುಗಿನ ಪುಟ್ಟರಾಜ ಗವಾಯಿಗಳ ವೀರಶೈವ ಪುಣ್ಯಾಶ್ರಮಕ್ಕೆ ಹೋಗಿದ್ದರು. ಅಲ್ಲಿನ ಕಣ್ಣು ಇಲ್ಲದ ಮಕ್ಕಳ ಪ್ರತಿಭೆಯನ್ನು ನೋಡಿದ ಇವರು, ಎಲ್ಲ ಅಂಗಾಂಗಳು ಸರಿ ಇದ್ದರೂ ನಾವು ಏನೂ ಮಾಡುತ್ತಿಲ್ಲವಲ್ಲ ಅಂತ ಬೇಸರಗೊಂಡರು. ನಂತರ ಈ ವಿಚಾರ ತಲೆಯಲ್ಲಿ ಕೊರೆಯಲು ಶುರುವಾದಾಗಲೇ , ಸಮಾಜಕ್ಕೆ ನಮ್ಮ ಕೈಲಾದಷ್ಟು ಕೆಲಸ ಮಾಡೋಣ ಎನ್ನುವ ಕನಸಿನೊಂದಿಗೆ ಹುಟ್ಟಿದ್ದು ಈ ಶಿಕ್ಷಕರ ಕಲಾಸಂಘ. ನಮ್ಮ ಶಿಕ್ಷಕ ಗೆಳೆಯರಲ್ಲಿ ಸಮಾನ ಆಸಕ್ತಿಯುಳ್ಳವರನ್ನು ಕಲೆಹಾಕಿ ಈ ಸಂಘ ಆರಂಭಿಸಿದೆವು ಎನ್ನುತ್ತಾರೆ ಸಂಘದ ಸದಸ್ಯ ಪ್ರಾಣೇಶ ಪೂಜಾರ.
ಗಿಡ ನೆಡುವುದರಿಂದ ಆಗುವ ಪ್ರಯೋಜನವನ್ನು, ರಂಗಭೂಮಿ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹೊಣೆಯನ್ನು ಈ ಶಿಕ್ಷಕರು ಹೊತ್ತಿದ್ದಾರೆ. ಶಾಲಾ ಸಿಬ್ಬಂದಿ ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಮದ ಜನತೆಯ ಸಹಕಾರವನ್ನು ಪಡೆದು ತಾವು ಕೆಲಸ ಮಾಡುತ್ತಿರುವ ಗ್ರಾಮದ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಮಾಡಿದ್ದಾರೆ.
Advertisement
ಖರ್ಚಿಗೆ ಹಣ ಎಲ್ಲಿಂದ ಹೊಂದಿಸುತ್ತಾರೆ?ಸಂಘದ ಶಿಕ್ಷಕರು ಯಾವುದೇ ಕೆಲಸ ಮಾಡಬೇಕಾದರೆ ದೇಣಿಗೆ ಪಡೆಯುವುದಿಲ್ಲ. ಬದಲಾಗಿ, ಸದಸ್ಯರೆಲ್ಲರೂ ತಮ್ಮ ಕಿಸೆಯಿಂದಲೇ ಹಣವನ್ನು ಹಾಕುತ್ತಾರೆ. ಪ್ರತಿಯೊಂದು ಖರ್ಚಿಗೂ ಲೆಕ್ಕ ಇಡುತ್ತಾರೆ. ಹಾಗೆ ನೋಡಿದರೆ, ವರ್ಷಕ್ಕೆ ಏನಿಲ್ಲ ಎಂದರೂ, ಪ್ರತಿ ಸದಸ್ಯರಿಗೆ 5-10 ಸಾವಿರ ಖರ್ಚು ಬರುತ್ತದೆ. ಶಾಲೆಯಲ್ಲಿ ಸಸಿನೆಟ್ಟಿದ್ದು ಆಯಿತು. ಮುಂದೇನು?
ಅದನ್ನು ಸುಮ್ಮನೆ ಬಿಡುವುದಿಲ್ಲ. ಶಾಲೆಯ ಶಿಕ್ಷಕರಿಗೆ ಆಗಾಗ ಗಿಡದ ಬಗ್ಗೆ ನೆನಪಿಸುತ್ತಿರುತ್ತಾರೆ. ಸಮಯ ಸಿಕ್ಕಾಗೆಲ್ಲಾ ಶಾಲೆಗೆ ಹೋಗಿ ಸಸಿಗಳ ಪಾಲನೆ, ಪೋಷಣೆ ಮಾಡುತ್ತಿರುತ್ತಾರೆ. ಇನ್ನೊಂದು ವಿಶೇಷ ಎಂದರೆ, ಈ ಕಾರ್ಯಕ್ಕೆ ಕಲಾಸಂಘದ ಸದಸ್ಯರಷ್ಟೇ ಅಲ್ಲದೆ, ಉಳಿದ ಶಿಕ್ಷಕರು ಮಾಡಿದ ಹಸಿರು ಶಾಲೆಗಳನ್ನು ಗುರುತಿಸಿ, ಶಿಕ್ಷಕರ ದಿನಾಚರಣೆಯಂದು ನಮ್ಮ ನಾಟಕ ಪ್ರದರ್ಶನ ಮಾಡುತ್ತಾರೆ. ಕಿರುಚಿತ್ರ ಪ್ರದರ್ಶಿಸುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಈಗಾಗಲೇ ಕನ್ನೇರಮಡು, ಕಿಡದಾಳ, ಹ್ಯಾಟಿ, ಗಬ್ಬೂರ, ಬೂದಗುಂಪಾ, ಹನುಮನಹಳ್ಳಿ, ಸೂಳಿಕೇರಿ ತಾಂಡಾ, ಕವಳಿ ಹೀಗೆ ಇನ್ನೂ ಅನೇಕ ಶಾಲೆಗಳನ್ನು ಹಸಿರಾಗಿಸಿದ್ದಾರೆ. ನಾಗರಾಜನಾಯಕ ಡಿ. ಡೊಳ್ಳಿನ ಹಸಿರ ಶಾಲೆ
ಅದೊಂದು ಕಟ್ಟಡ‚. ಅದರ ಸುತ್ತಮುತ್ತ ಹಚ್ಚ ಹಸಿರು. ಕಾಂಪೌಂಡ್ ಪೂರ್ತಿ ಗಿಡ-ಗಂಟಿಗಳು. ಅವುಗಳನ್ನು ಸರಿಸಿದರೇನೇ, ಗೊತ್ತಾಗುವುದು ಇದು ಶಾಲೆ ಅಂತ. ಬೆಳಗಾವಿ ಜಿಲ್ಲೆ ಗೋಕಾಕದ ಕಲ್ಲೋಳಿಯಿಂದ ಪಿ.ಜಿ.ಹುಣಶ್ಯಾಳಗೆ ಹೋಗುವ ದಾರಿಯಲ್ಲಿ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಗುತ್ತದೆ. ಇದಕ್ಕೆ ಸ್ಥಳೀಯವಾಗಿ ಮಡ್ಡಿಯ ಶಾಲೆ ಎಂದೂ ಸಡ್ಲಾ$Âರ ಮಡ್ಡಿ (ತೋಟ) ಎಂದೂ ಕರೆಯುವುದುಂಟು. ಕಾರಣ ಶಾಲೆ ಪೂರ್ತಿ ಹಸಿರುಮಯವಾಗಿರುವುದರಿಂದ. ವಿಶೇಷವೆಂದರೆ, ಈ ಶಾಲೆಗೆ ಗೇಟೇ ಇಲ್ಲ. ಬದಲಾಗಿ ಇಡೀ ಗಿಡಮರಗಳೇ ಕಾಂಪೌಂಡ್ ರೀತಿ ಎದ್ದು ನಿಂತಿವೆ. ಹಾಗೇ ಲೆಕ್ಕ ಹಾಕುತ್ತ ಬಂದರೆ, ಇಡೀ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಗಿಡ, ಮರಗಳು ಕಾಣಸಿಗುತ್ತವೆ. ಎಲ್ಲವನ್ನು ನೋಡಿದ ಮೇಲೆ ಒಂದು ಪ್ರಶ್ನೆ ಎದ್ದೇಳದೆ ಇದ್ದರೆ ಕೇಳಿ. ಅದುವೇ, ಇದೆಲ್ಲ ಹೇಗೆ ಸಾಧ್ಯ? ಎಲ್ಲದಕ್ಕೂ ಕಾರಣ ಇದೇ ಶಾಲೆಯಲ್ಲಿರುವ ಶಿಕ್ಷಕ. ಅವರ ಹೆಸರು; ಗಣಪತಿ ಕೆ ಉಪ್ಪಾರ. ಕಳೆದ ಸಾಲಿನ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. ಉಪ್ಪಾರ ಅವರ ಹಸಿರ ಶ್ರದ್ಧೆ ಎಷ್ಟಿದೆ ಎಂದರೆ, ರಜೆಯ ದಿನಗಳಲ್ಲೂ ಅವರ ಶಾಲೆಯ ಕೆಲಸಕ್ಕೇ ಮೀಸಲು. ವಿದ್ಯಾರ್ಥಿಗಳು ರಜೆಯ ದಿನಗಳಲ್ಲಿ ಶಾಲೆಗೆ ಬಂದು ಗಿಡಗಳಿಗೆ ನೀರು ಹಾಕಿ ಹೋಗುತ್ತಾರೆ. ಅಲ್ಲದೇ ಇದು ಏಕೋಪಾಧ್ಯಾಯ ಶಾಲೆ. ಒಬ್ಬರು ಅತಿಥಿ ಶಿಕ್ಷಕ ಸೇರಿ ಪರಿಸರ ಕಾಳಜಿಗೆ ಹಾಗೂ ಪಠ್ಯ ಮತ್ತು ಪಠ್ಯತೇರ ಚಟುವಟಿಕೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ರಾಷ್ಟ್ರ ನಾಯಕರ ಸಾಧಕರ ಭಾವಚಿತ್ರಗಳನ್ನು ಪ್ರದರ್ಶಿಸಿ, ಮಕ್ಕಳಿಗೆ ಉತ್ತಮ ಜಾnನವನ್ನು ಬಿತ್ತುತ್ತಿದ್ದಾರೆ. 2002-03ರಲ್ಲಿ ಕೇವಲ 20 ಮಕ್ಕಳ ದಾಖಲಾತಿಯೊಂದಿಗೆ ಆರಂಭವಾದ ಈ ಶಾಲೆಯಲ್ಲಿ, ಇಂದು 1 ರಿಂದ 5ನೇ ತರಗತಿವರೆಗೆ 40 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 4 ಮತ್ತು 5ನೇ ತರಗತಿಯ ಪ್ರತಿ ವಿದ್ಯಾರ್ಥಿಗಳಿಗೆ 4 ರಿಂದ 5 ಗಿಡಗಳನ್ನು ದತ್ತು ನೀಡಿ, ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಹಸಿರ ಜವಾಬ್ದಾರಿ ನೀಡಲಾಗುತ್ತಿದೆ. ಏಳೆಂಟು ವರ್ಷದ ಹಿಂದೆ ಶಾಲೆಯ ಆವರಣದಲಿ,É ಶಾಲೆಯ ಕೊಠಡಿಗಳ ಮುಂದೆ, ಅಕ್ಕ-ಪಕ್ಕ ಸಸಿಗಳನ್ನು ನೆಟ್ಟು, ಒಂದೊಂದು ಸಸಿಯನ್ನು ಬೆಳೆಸುವ ಜವಾಬ್ದಾರಿಯನ್ನು ಒಂದೊಂದು ಮಗುವಿಗೆ ವಹಿಸಿಕೊಟ್ಟರು. ಶಾಲೆಯ ಮಕ್ಕಳು ನಿತ್ಯ ಪ್ರಾರ್ಥನೆಗೂ ಮುಂಚೆ ನೀರು ಹಾಕಿ ಸಸಿಗಳನ್ನು ಬೆಳೆಸುವುದು ರೂಢಿ. ಈಗ ಅವು ದೊಡ್ಡದಾಗಿ ಬೆಳೆದು ನೆರಳನ್ನು ನೀಡುತ್ತಿವೆ. ಶಾಲೆಯಲ್ಲಿ ಮಾವು, ನುಗ್ಗೆ, ನಿಂಬೇಹಣ್ಣು, ಪೇರಲ, ಬಾದಾಮಿ, ಬೇವು, ಕರಿಬೇವು, ಪಪ್ಪಾಯ, ಚೆರ್ರಿ, ಹಂದರ ಹೀಗೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಈ ಮರಗಳಿಂದ ಉದುರಿ ಬೀಳುವ ಎಲೆಗಳನ್ನು ಗುಡಿಸಿ, ಅದರಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಪೋಷಣೆ ಮಾಡುವುದೂ ವಿದ್ಯಾರ್ಥಿಗಳೇ. ಶಾಲೆಯ ಸಮಗ್ರ ಪ್ರಗತಿ, ಮಾದರಿ ಶಾಲೆಯಾಗಿ ಗುರುತಿಸಿಕೊಳ್ಳಲು ಡಿ.ಡಿ.ಪಿ.ಐಎಮ್.ಜಿ.ದಾಸರ, ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ, ಹಾಗೂ ಮೂಡಲಗಿ ಬಿಇಒ ಎ.ಸಿ ಗಂಗಾಧರ, ಸಿಆರ್‌ಪಿ ಎಸ್‌ಬಿ.ಕುಂಬಾರ ಅವರ ಮಾರ್ಗದರ್ಶನ, ಶಾಲೆಯ ಮಕ್ಕಳ ಪಾಲಕರ ಸಹಕಾರ ಅವಿಸ್ಮರಣೀಯ ಎನ್ನುತ್ತಾರೆ ಮುಖ್ಯ ಶಿಕ್ಷಕ ಗಣಪತಿ. ಯೂನಿಸ್ ನದಾಫ್