Advertisement
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರೌಢಶಾಲಾ ವಠಾರದಲ್ಲಿ ಹಸುರು ನಳ ನಳಿಸುತ್ತಿದೆ. ಸೀಮಿತ ಸ್ಥಳದಲ್ಲಿ ಬಗೆ-ಬಗೆಯ ಗಿಡ, ಬಳ್ಳಿ, ಹುಲ್ಲು ಹಬ್ಬಿ ಹಸುರಿನ ಸೊಗಡನ್ನು ಪಸರಿಸಿದೆ. ಮನಸ್ಸಿಗೆ ಮುದ ತುಂಬುವ ಈ ಹಸುರು ಲೋಕ ಶಾಲಾ ವಾತಾವರಣದ ಅಂದ ಹೆಚ್ಚಿಸಿದೆ.
ಶಾಲಾ ಸ್ಥಾಪನೆಯ ಬೆಳ್ಳಿಹಬ್ಬದ ಪ್ರಯುಕ್ತ ನಿರ್ಮಿಸಿದ ತೆರೆದ ಬಯಲು ರಂಗಮಂದಿರದ ಮೇಲ್ಭಾಗದಲ್ಲಿ ಬಳ್ಳಿಯೇ ಹಬ್ಬಿ, ಬೆಸೆದು ಹಾಸಿದ ಛಾವಣಿ ಗಮನ ಸೆಳೆಯುತ್ತಿದೆ. ಮೂರು ವರ್ಷಗಳ ಹಿಂದೆ ಬಿರು ಬಿಸಿಲಿನ ಹೊತ್ತಲ್ಲೇ ರಂಗ ಮಂದಿರದ ನಾಲ್ಕು ದಿಕ್ಕಿನಲ್ಲಿ ಬಳ್ಳಿ ನೆಡಲಾಗಿತ್ತು. ಅದು ಬೆಳೆದು ಛಾವಣಿ ಪೂರ್ತಿ ಹಬ್ಬಿ ಬಿಸಿಲೇ ನುಸುಳದಷ್ಟು ಆವರಿಸಿಕೊಂಡಿದೆ. ತೆರೆದ ರಂಗಮಂದಿರಕ್ಕೆ ಪ್ರಕೃತಿಯೇ ಮಾಡು ಕಟ್ಟಿಕೊಟ್ಟಂತಿದೆ ಈಗಿನ ದೃಶ್ಯ. ಥಟ್ಟನೆ ಕಂಡಾಗ ದಟ್ಟ ಕಾಡಿನ ಮಧ್ಯೆ ಪ್ರಕೃತಿ ಸೃಷ್ಟಿಸಿದ ಮನೆಯಂತೆ ಭಾಸ ವಾಗುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ. ಅಲ್ಲೆ ಆಟ-ಪಾಠ
ಡಿಸೆಂಬರ್ ತಿಂಗಳ ಬಿರು ಬಿಸಿಲಿನಲ್ಲಿ ಮಕ್ಕಳು ಹಸುರು ಹಬ್ಬಿರುವ ಛಾವಣಿಯ ರಂಗಮಂದಿರಕ್ಕೆ ಹೊಕ್ಕಿ ಆಟ-ಪಾಠದಲ್ಲಿ ತಲ್ಲಿನರಾಗುತ್ತಾರೆ. ತಣ್ಣನೆಯ ಗಾಳಿಗೆ ಮಕ್ಕಳು ಸಂಭ್ರಮಿಸುತ್ತಾರೆ.
Related Articles
ಬಳ್ಳಿಗಳೇ ರಂಗಮಂದಿರದ ಛಾವಣಿಗೆ ಹಬ್ಬಿವೆ. ಬಿಸಿಲಿನಿಂದ ರಕ್ಷಣೆ, ತಂಪು ವಾತಾವರಣ ಮಕ್ಕಳ ಜತೆಗೆ ಶಿಕ್ಷಕರಿಗೂ ಹಿತಾನುಭವ ಮೂಡಿಸುತ್ತದೆ. ಸಣ್ಣ ಸಭೆ, ಚಟುವಟಿಕೆಗಳನ್ನು ಇದೇ ರಂಗಮಂದಿರದೊಳಗೆ ಆಯೋಜಿಸುತ್ತೇವೆ.
– ವಿನೋದ್ ಕುಮಾರ್ ಕೆ.ಎಸ್.
ಮುಖ್ಯಗುರು, ಕೆಪಿಎಸ್ ಕೆಯ್ಯೂರು
Advertisement
-ಕಿರಣ್ ಪ್ರಸಾದ್ ಕುಂಡಡ್ಕ