Advertisement
ಅರಸಿನ-ಕುಂಕುಮ-ಬಳೆಗಳು ಹೆಣ್ಣಿನ ಸೌಭಾಗ್ಯದ ಸಂಕೇತ. ಇವು ನಮ್ಮ ಸಾಂಸ್ಕೃತಿಕ ಹಿರಿಮೆಯ ಪ್ರತೀಕಗಳೂ ಹೌದು. ಹೆಣ್ಣಿಗೆ ಕೈಯಲ್ಲಿನ ಬಳೆಗಳು ವಿಶೇಷ ಶೋಭೆ ತಂದುಕೊಡುತ್ತದೆ. ಅರಸಿನ ಕುಂಕುಮವಿಟ್ಟು ಕೈತುಂಬಾ ಬಳೆಗಳನ್ನು ಇಟ್ಟುಕೊಂಡು ಮುಡಿ ತುಂಬ ಮಲ್ಲಿಗೆ ಇಟ್ಟ ಹೆಣ್ಣು ಲಕ್ಷಣವಾಗಿ ಕಾಣಿಸುತ್ತಾಳೆ. ಕೈತುಂಬಾ ಗಾಜಿನ ಬಳೆಗಳನ್ನಿಟ್ಟುಕೊಂಡು ಮನೆತುಂಬಾ ಓಡಾಡುವ ಹೆಣ್ಣುಮಕ್ಕಳನ್ನು ನೋಡುವುದೇ ಒಂದು ಚೆಂದ. ಗಾಜಿನ ಬಳೆಗಳು ವಿವಿಧ ಬಣ್ಣಗಳಿಂದ ಕೂಡಿದ್ದು ಅವುಗಳನ್ನು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತ್ತೈದೆಯರ ಲಕ್ಷಣವಾಗಿದೆ.
Related Articles
Advertisement
ಈಗ ಕಾಲ ಬದಲಾಗಿದೆ. ಇದು ಹೇಳಿಕೇಳಿ ಫ್ಯಾಶನ್ ಯುಗ. ಇಂದಿನ ಹುಡುಗಿಯರ ಕೈಯಲ್ಲಿ ಕಾಣಿಸಿಕೊಳ್ಳುವುದು ಬರೇ ಫ್ಯಾನ್ಸಿ , ಮೆಟಲ್, ವುಡನ್ ಬಳೆಗಳು ಮಾತ್ರ. ಗಾಜಿನ ಬಳೆಗಳು ತೀರಾ ಕಡಿಮೆ. ಕೆಲಸ ಮಾಡುವಾಗ, ಉದ್ಯೋಗಕ್ಕೆ ಹೋಗುವಾಗ ಭಾರವಿರುತ್ತದೆ, ಕಂಫರ್ಟ್ ಎನಿಸುವುದಿಲ್ಲ , ಸದ್ದು ಮಾಡುತ್ತವೆ, ಜೊತೆಗೆ ಅವುಗಳ ನಿರ್ವಹಣೆಯೂ ತುಸು ಕಷ್ಟ . ಹಾಗಾಗಿ ಇಂದಿನ ಮಹಿಳೆಯರು ಗಾಜಿನ ಬಳೆಗಳನ್ನು ತೊಡಲು ಹಿಂಜರಿಯುತ್ತಾರೆ. ಆದರೆ, ಎಷ್ಟೇ ಮಾಡ್ ಆಗಿದ್ದರೂ ಮದುವೆಯಲ್ಲಿ ಇಲ್ಲವೇ ಹಾಗೇ ಸುಮ್ಮನೆ ಆಗಾಗ ತಮ್ಮ ಕೈಗಳಿಗೆ ಬಳೆಗಳನ್ನು ತೊಟ್ಟು ಘಲ್ ಘಲ್ ಸದ್ದು ಮಾಡುತ್ತಾ ಸಂಭ್ರಮಿಸುವುದಿದೆ.
ಚಿನ್ನದ ಬಳೆಗಳುಮಣ್ಣಿನ ಬಳೆಗಳ ಜಾಗದಲ್ಲಿ ಈಗ ಚಿನ್ನದ ಬಳೆಗಳು ಕಾಣಿಸುತ್ತಿವೆ. ಈಗ ಎಲ್ಲೆಲ್ಲೂ ಚಿನ್ನದ ಬಳೆಗಳೇ. ಚಿನ್ನದ ಬಳೆಗಳನ್ನು ಧರಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಚಿನ್ನದ ಬಳೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಚಿನ್ನದ ಬಳೆಗಳು ಸಾಂಪ್ರದಾಯಿಕ ವಿನ್ಯಾಸದಿಂದ ಹಿಡಿದು ನವನವೀನ ವಿನ್ಯಾಸಗಳಲ್ಲಿ ಕೂಡಿರುವುದೂ ಹೆಂಗಳೆಯರ ಮನ ಸೆಳೆದಿದೆ. ಚಿನ್ನದಲ್ಲೇ ಮುತ್ತು, ಹವಳ ಮತ್ತು ವಿವಿಧ ಬಣ್ಣದ ಹರಳುಗಳಿಂದ ಕಟ್ಟಿಸಿದ್ದಂಥ ಬಳೆಗಳು ಈಗ ಹೆಚ್ಚು ಜನಪ್ರಿಯ. ಟ್ರೆಂಡಿ ಬಳೆಗಳು
ಒಂದೊಮ್ಮೆ ಸಿಂಪಲ್ ಪ್ಲೇನ್ ಆಗಿದ್ದ ಬಳೆಗಳ ತುಂಬಾ ಈಗ ವಿವಿಧ ಡಿಸೈನ್, ಕಸೂತಿಗಳ ಚಿತ್ತಾರ ಮೂಡಿಬಂದಿದೆ. ಗಾಜಿನ ಬಳೆಗಳು ನಾಜೂಕಾಗಿರುವುದರಿಂದ ಇವುಗಳನ್ನು ಧರಿಸುವಾಗ ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಹಾಗಾಗಿ ಮೆಟಲ್, ಫ್ಯಾನ್ಸಿ, ವುಡನ್ ಬ್ಯಾಂಗಲ್, ಮಿಕ್ಸ್ ಆ್ಯಂಡ್ ಮ್ಯಾಚ್ ಬಳೆಗಳು ಹೆಚ್ಚು ಪ್ರಾಶಸ್ತ್ಯ. ಅಲ್ಲದೆ ಈಗಿನ ಲೇಟೆಸ್ಟ್ ಟ್ರೆಂಡೂ ಹೌದು. ನೋಡಲು ಸುಂದರ ಮಾತ್ರವಲ್ಲ ನಿರ್ವಹಣೆ ಕೂಡ ಸುಲಭ. ಇವು ಟ್ರೆಡಿಷನಲ್ ಉಡುಪಿಗೆ ಮಾತ್ರವಲ್ಲ ಫ್ಯಾಶನ್ ಉಡುಪುಗಳಿಗೂ ಹೊಂದಿಕೊಳ್ಳುತ್ತವೆ. ತುಂಬಾ ವೆರೈಟಿಗಳಲ್ಲಿ ಸಿಗುತ್ತವೆ. ಹ್ಯಾಂಡ್ ಪೇಂಟೆಡ್ ವುಡನ್ ಬ್ಯಾಂಗಲ್ಸ್ , ಡಿಸೈನರ್ ವುಡನ್, ಸ್ಟೋನ್ ಸ್ಟಡೆಡ್ ಹೀಗೆ. ಮಿಕ್ಸ್ ಆ್ಯಂಡ್ ಮ್ಯಾಚ್ ಬಳೆಗಳು ಲೇಟೆಸ್ಟ್ ಟ್ರೆಂಡ್. ಕಲರ್‌ಫುಲ್ ಮತ್ತು ಲೈಟ್‌ವೈಟ್ ಆಗಿರುವ ಈ ಬಳೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳಿರುತ್ತವೆ.
ಹೀಗೆ ಹೆಣ್ಣಿನ ಆಲಂಕಾರಿಕ ವಸ್ತುಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಸಾಂಪ್ರದಾಯಿಕ ಬಳೆಗಳು ಇಂದು ವಿವಿಧ ವಿನ್ಯಾಸಗಳಿಂದ ಮಹಿಳೆಯರಿಗೆ ಇನ್ನೂ ಪ್ರಿಯವಾಗಿವೆ. – ಎಸ್‌ಎನ್