Advertisement

ಹಸಿರು ಇಂಧನ ಉತ್ಪಾದನೆಗೆ ಒತ್ತು: ಕೇಂದ್ರದ ದೂರದೃಷ್ಟಿ ಯೋಜನೆ

07:47 PM Feb 23, 2023 | Team Udayavani |

ದೇಶದ ಆರ್ಥಿಕತೆಯ ಬಹುದೊಡ್ಡ ಮೊತ್ತ ಕಚ್ಚಾತೈಲ ಖರೀದಿ ಮತ್ತು ಪಳೆಯುಳಿಕೆ ಇಂಧನಗಳ ಉತ್ಪಾದನೆಗೆ ವ್ಯಯವಾಗುತ್ತಿದೆ. ಅಲ್ಲದೆ ಈ ಇಂಧನಗಳ ಬಳಕೆಯಿಂದ ವಾತಾವರಣದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದ್ದು ಹವಾಮಾನ ಬದಲಾವಣೆಯು ಭಾರತ ಮಾತ್ರವಲ್ಲ ವಿಶ್ವ ರಾಷ್ಟ್ರಗಳನ್ನು ಪೆಡಂಭೂತವಾಗಿ ಕಾಡಲಾರಂಭಿಸಿದೆ. ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಳೆದೆರಡು ದಶಕಗಳಿಂದೀಚೆಗೆ ಇಡೀ ವಿಶ್ವ ಸಮುದಾಯ ಸಂಕಲ್ಪ ತೊಟ್ಟು ಕಾರ್ಯೋನ್ಮುಖವಾಗಿದ್ದರೂ ಈವರೆಗೆ ನಿರೀಕ್ಷಿತ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ.

Advertisement

ಕಚ್ಚಾ ತೈಲದ ಖಜಾನೆ ಬರಿದಾಗತೊಡಗಿದ್ದರೆ ಇನ್ನೊಂದು ಇಂಧನ ಮೂಲವಾದ ಕಲ್ಲಿದ್ದಲು ಗಣಿಗಳಲ್ಲೂ ಕಲ್ಲಿದ್ದಲು ಖಾಲಿಯಾಗಿ ಒಂದೊಂದಾಗಿ ಮುಚ್ಚಲ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ಮೂಲಗಳತ್ತ ಜಾಗತಿಕ ಸಮುದಾಯ ದೃಷ್ಟಿ ಹರಿಸತೊಡಗಿದ್ದು ಬಹುತೇಕ ರಾಷ್ಟ್ರಗಳು ನೈಸರ್ಗಿಕ ಶಕ್ತಿ, ನವೀಕರಿಸಬಹುದಾದ ಇಂಧನ, ಹಸಿರು ಇಂಧನ ಇವೇ ಮೊದಲಾದ ಪರ್ಯಾಯ ಮಾರ್ಗಗಳತ್ತ ಮುಖ ಮಾಡತೊಡಗಿವೆ. ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಭಾರತ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಇಂಧನದ ಉತ್ಪಾದನೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರತ ಸರಕಾರ ಹಸುರು ಇಂಧನ ಉತ್ಪಾದನೆಯ ಬಗೆಗೆ ವಿಶೇಷ ಆಸ್ಥೆ ತೋರಿದ್ದು ಈ ನಿಟ್ಟಿನಲ್ಲಿ ಹಲವಾರು ಪ್ರೋತ್ಸಾಹದಾಯಕ ಮತ್ತು ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದೆ. 2022-23 ಸಾಲಿನ ಬಜೆಟ್‌ನಲ್ಲಿ ಹಸಿರು ಇಂಧನ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುವ ಹಲವು ಉಪಕ್ರಮಗಳನ್ನು ಘೋಷಿಸಿದ್ದ ಕೇಂದ್ರ ಸರಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಸಿರು ಇಂಧನ ಉತ್ಪಾದನೆ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಹಲವಾರು ವಿನಾಯಿತಿ, ಕೊಡುಗೆಗಳನ್ನು ಘೋಷಿಸಿದೆ. ತನ್ಮೂಲಕ ದೇಶ ಪಳೆಯುಳಿಕೆ ಇಂಧನ ಕ್ಷೇತ್ರದಲ್ಲಿ ಮಾಡುತ್ತಿರುವ ವೆಚ್ಚವನ್ನು ಕಡಿಮೆ ಮಾಡಿ ಹಸುರು ಇಂಧನ ಕ್ಷೇತ್ರದಲ್ಲಿನ ತನ್ನ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಡುವ ಪ್ರಯತ್ನಕ್ಕೆ ಕೈಹಾಕಿದೆ.

ದೇಶದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿನ ಅವಕಾಶಗಳು, ಸಾಧ್ಯತೆಗಳ ಕುರಿತಂತೆ ಗುರುವಾರ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುವಂತೆ ಬಂಡವಾಳಗಾರರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ದೇಶದಲ್ಲಿ ಪವನ, ಸೌರ ಮತ್ತು ಜೈವಿಕ ಅನಿಲದಂತಹ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಹಳಷ್ಟು ಅವಕಾಶಗಳಿವೆ. ಈ ಕ್ಷೇತ್ರವು ಸ್ಟಾರ್ಟ್‌ಅಪ್‌ಗ್ಳನ್ನು ಆರಂಭಿಸಲು ಅತ್ಯಂತ ಸೂಕ್ತವಾದುದಾಗಿದೆ. ಬಜೆಟ್‌ನಲ್ಲಿ ಹಸಿರು ಇಂಧನ ಕ್ಷೇತ್ರದ ಬಗೆಗೆ ಪ್ರಸ್ತಾವಿಸಲಾದ ಅಂಶಗಳು ಕೇವಲ ಅವಕಾಶ ಮಾತ್ರವಾಗಿರದೆ ಇದು ನಮ್ಮ ಭವಿಷ್ಯದ ಬಗೆಗಿನ ಖಾತರಿಯಾಗಿದೆ ಎಂದು ಹೇಳುವ ಮೂಲಕ ಪ್ರಧಾನಿಯವರು ಹಸುರು ಇಂಧನ ಕ್ಷೇತ್ರ ದೇಶದ ಆದ್ಯತಾ ವಲಯಗಳಲ್ಲಿ ಒಂದಾಗಿದೆ ಎಂದು ಸಾರಿದ್ದಾರೆ.

ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ, ಹಸಿರು ಜಲಜನಕದ ಉತ್ಪಾದನೆ, ಎಲೆಕ್ಟ್ರಿಕ್‌ ವಾಹನಗಳು ಮತ್ತು ಈ ವಾಹನಗಳಲ್ಲಿ ಬಳಸಲ್ಪಡುವ ಬ್ಯಾಟರಿಗಳ ಉತ್ಪಾದನೆಗೆ ಉತ್ತೇಜನ, 15ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು, ಗೋವರ್ಧನ ಯೋಜನೆಯಡಿ ಜೈವಿಕ ಅನಿಲ ಉತ್ಪಾದನ ಘಟಕಗಳ ಸ್ಥಾಪನೆ, ಕೃಷಿ ಮತ್ತು ನಗರಪಾಲಿಕೆಗಳ ಘನತ್ಯಾಜ್ಯಗಳಿಂದ ಅನಿಲ ಉತ್ಪಾದನೆ, ಬ್ಯಾಟರಿ ಸಂಗ್ರಹಣ ಸಾಮರ್ಥ್ಯ ಹೆಚ್ಚಳ, ಜಲಸಾರಿಗೆಗೆ ಉತ್ತೇಜನ ಮತ್ತಿತರ ಯೋಜನೆಗಳು ನವೀಕರಿಸಬಹುದಾದ ಮತ್ತು ಹಸಿರು ಇಂಧನ ಕ್ಷೇತ್ರದ ಬಲವರ್ಧನೆಗೆ ಪೂರಕವಾಗಿವೆ. ಈ ಯೋಜನೆಗಳ ಅನುಷ್ಠಾನದಲ್ಲೂ ಸರಕಾರ ಗುರಿಮೀರಿದ ಸಾಧನೆಗೈದಿರುವುದು ಪ್ರಶಂಸಾರ್ಹ. ಕೇಂದ್ರ ಸರಕಾರದ ಈ ಎಲ್ಲ ದೂರದೃಷ್ಟಿತ್ವದ ಯೋಜನೆಗಳು ಮತ್ತು ಸಾಧನೆಗಳು ಪ್ರಗತಿಗಾಮಿ ಮಾತ್ರವಲ್ಲದೆ ದೇಶದ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವೂ ಹೌದು.

Advertisement
Advertisement

Udayavani is now on Telegram. Click here to join our channel and stay updated with the latest news.

Next