Advertisement

ಮಾರುಕಟ್ಟೆಗಿನ್ನೂ ಕಾಲಿಟ್ಟಿಲ್ಲ “ಹಸುರು ಪಟಾಕಿ’

07:09 PM Oct 25, 2019 | mahesh |

ಮಹಾನಗರ: ದೀಪಾವಳಿ ವೇಳೆ ಪಟಾಕಿಗಳಿಂದ ಉಂಟಾಗುವ ಪರಿಸರ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಇತ್ತೀಚೆಗೆ ಕಡಿಮೆ ಹೊಗೆಯ ಹಸುರು ಪಟಾಕಿ ಪರಿಚಯಿಸಿದೆ. ಆದರೆ ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ.

Advertisement

ಮಾಲಿನ್ಯ ಭೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅವರು ಇತ್ತೀಚೆಗೆ ಸುಧಾರಿತ ಹಸುರು ಪಟಾಕಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಘೋಷಿಸಿದ್ದರು. ಕೌನ್ಸಿಲ್‌ ಫಾರ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ (ಸಿಎಸ್‌ಐಆರ್‌)ನ ತಜ್ಞರು ಈ ಪಟಾಕಿಗಳನ್ನು ಸಂಶೋಧಿಸಿದ್ದಾರೆ. ಸುಪ್ರೀಂ ಕೋರ್ಟ್‌ ನ ಮಾನದಂಡದ ಅನ್ವಯ ಈ ಪಟಾಕಿಯನ್ನು ತಯಾರು ಮಾಡಲಾಗಿದೆ. ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಹಸುರು ಪಟಾಕಿಗಳಿನ್ನೂ ಮಾರುಕಟ್ಟೆಗೆ ಕಾಲಿಟ್ಟಿಲ್ಲ.

ಬೇಡಿಕೆ ಕಡಿಮೆಯಾಗದು
ನಗರದ ಮಂಜುನಾಥ ಕ್ರಾಕರ್ ಪ್ಯಾಲೇಸ್‌ನ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಕೇಂದ್ರ ಸರಕಾರವು ಹಸುರು ಪಟಾಕಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇಲ್ಲಿನ ಮಾರುಕಟ್ಟೆಗೆ ಇನ್ನೂ ಪ್ರವೇಶಿಸಿಲ್ಲ. ಒಂದು ವೇಳೆ ಹಸುರು ಪಟಾಕಿ ಮಾರುಕಟ್ಟೆಗೆ ಬಂದರೂ ಈಗಿರುವ ಪಟಾಕಿಗಳಿಗೆ ಬೇಡಿಕೆ ಕಡಿಮೆಯಾಗದು. ಏಕೆಂದರೆ, ಕೆಲವೊಂದು ಬ್ರಾಂಡ್‌ ಪಟಾಕಿಗಳನ್ನು ಖರೀದಿಸುವ ಮಂದಿ ಬದಲಾವಣೆ ಇಷ್ಟಪಡಿವುದಿಲ್ಲ’ ಎನ್ನುತ್ತಾರೆ.

ಮಾಯಾ ಟ್ರೇಡರ್ ಮಾಲಕ ಅನಂತ್‌ ಕಾಮತ್‌ ಪ್ರತಿಕ್ರಿಯಿಸಿ “ಹಸುರು ಪಟಾಕಿ ಮಾರುಕಟ್ಟೆಗೆ ಬಂದಿಲ್ಲ. ಹಬ್ಬ ಆರಂಬಕ್ಕೆ
ಇನ್ನು ಎರಡು ದಿನಗಳು ಬಾಕಿ ಇದ್ದು, ಪಟಾಕಿ ಖರೀದಿ ಶುರುವಾಗಿದೆ. ನಮ್ಮ ಅಂಗಡಿಯಲ್ಲಿ ಚೀನ ಪಟಾಕಿ ನಿರ್ಬಂಧಿಸಿದ್ದು ಸ್ವದೇಶಿ ಪಟಾಕಿಗಳಿಗೆ ಬೇಡಿಕೆ ಇದೆ’ ಎಂದಿದ್ದಾರೆ.

ಶಾಲೆಗಳು, ಕೈಗಾರಿಕೆಗಳಿಗೆ ತೆರಳಿ ಅರಿವು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆಲವೊಂದು ಸಂಘ ಸಂಸ್ಥೆಗಳ ಜತೆಗೂಡಿ ಪಟಾಕಿ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ನಗರದಲ್ಲಿನ ಕೆಲವೊಂದು ಶಾಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಇನ್ನು, ಹೆಚ್ಚಿನ ಕಾರ್ಮಿಕರು ಕೆಲಸ ಮಾಡುವಂತಹ ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಪಟಾಕಿಯಿಂದ ಪರಿಸರಕ್ಕೆ ಹಾನಿಯ ಬಗ್ಗೆ ಅಲ್ಲಿನ ಕಾರ್ಮಿಕರಿಗೂ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ಏನಿದು ಹಸುರು ಪಟಾಕಿ?
ಹಸುರು ಪಟಾಕಿಗಳು ಕಡಿಮೆ ಶಬ್ಧವನ್ನುಂಟುಮಾಡುವವುಗಳು. ಜತೆಗೆ ಕಡಿಮೆ ಹೊಗೆ ಉಗುಳುತ್ತವೆ. ಇದರಿಂದಾಗಿ ಪರಿಸರಕ್ಕೆ ಯಾವುದೇ ರೀತಿಯ ಮಾರಕವಿಲ್ಲ. ಕನಿಷ್ಠ 30ರಷ್ಟು ಕಡಿಮೆ ಮಾಲಿನ್ಯವಾಗುವ ಪ್ರಮಾಣವನ್ನು ಹಸುರು ಪಟಾಕಿ ಹೊಂದಿದೆ. ಮಾಲಿನ್ಯಕಾರಕ ಪಟಾಕಿಗಳಿಗೆ ಪರ್ಯಾಯವಾಗಿ ಬರಬೇಕೆಂದು ವಿಜ್ಞಾನಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪರಿಸರಕ್ಕೆ ಧಕ್ಕೆ ಆಗದಂತಹ ಪಟಾಕಿಗಳನ್ನು ತಯಾರಿಸಿದೆ. ಈ ಪಟಾಕಿಗಳ ಪೊಟ್ಟಣದಲ್ಲಿ ಕ್ಯೂ.ಆರ್‌. ಕೋಡ್‌ ಅಳವಡಿಸಿರುತ್ತಾರೆ.

ಸ್ಪಷ್ಟ ಮಾಹಿತಿ ಬಂದಿಲ್ಲ
ಹಸುರು ಪಟಾಕಿಯ ಬಗ್ಗೆ ಕೇಂದ್ರ, ರಾಜ್ಯದಿಂದ ನಮಗಿನ್ನೂ ಸ್ಪಷ್ಟ ಮಾಹಿತಿ ಬಂದಿಲ್ಲ. ಇದೇ ಕಾರಣಕ್ಕೆ ಮಾರುಕಟ್ಟೆಗೆ ಇನ್ನೂ ಈ ರೀತಿಯ ಪಟಾಕಿಗಳು ಕಾಲಿಟ್ಟಿಲ್ಲ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪಟಾಕಿ ಪಟಾಕಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಅರಿವು ಮೂಡಿಸುತ್ತಿವೆ.
 - ಜಯಪ್ರಕಾಶ್‌ ನಾಯಕ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

ಅರಿವು ಮೂಡಿಸಲಾಗುವುದು
ದೀಪಾವಳಿ ವೇಳೆ ಪಟಾಕಿ ಸಿಡಿಸುವ ಸಮಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸುರಕ್ಷತೆಯ ದೃಷ್ಟಿ ಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಪೊಲೀಸ್‌ ಇಲಾಖೆ ಮಾಡಲಿದೆ.
 - ಪಿ.ಎಸ್‌. ಹರ್ಷ, ಮಂಗಳೂರು ಪೊಲೀಸ್‌ ಕಮಿಷನರ್‌

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next