Advertisement

ಭರ್ಜರಿ ಆರಂಭ! ವಾಹನೋದ್ಯಮದಲ್ಲಿ ಶೇ. 23ರಷ್ಟು ಹೆಚ್ಚು ಮಾರಾಟ

12:12 AM Jan 02, 2023 | Team Udayavani |

ಹೊಸದಿಲ್ಲಿ /ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಮಾರುಕಟ್ಟೆ ಕ್ಷೇತ್ರದಲ್ಲಿ ಶುಭ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ವಾಹನಗಳ ಮಾರಾಟ ಚೆನ್ನಾಗಿ ನಡೆದಿದ್ದು ಶೇ. 23ರಷ್ಟು ಹೆಚ್ಚು ವಾಹನಗಳು ಮಾರಾಟವಾಗಿವೆ. ಹಾಗೆಯೇ ಜಿಎಸ್‌ಟಿ ಮತ್ತು ಕಾರ್ಪೊರೇಟ್‌ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ. 2023ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂಬ ಭೀತಿಯ ನಡುವೆ ಮಾರುಕಟ್ಟೆಯ ಈ ಶುಭ ಸಮಾಚಾರಗಳು ಸಮಾಧಾನ ತಂದಿವೆ.

Advertisement

2022ರಲ್ಲಿ ವೈಯಕ್ತಿಕ ವಾಹನಗಳ ಮಾರಾಟ ಉತ್ತಮವಾಗಿ ನಡೆದಿದೆ. ಕೊರೊನೋತ್ತರದಲ್ಲಿ ವ್ಯಾಪಾರ-ವಹಿವಾಟು ಚೇತರಿಸಿಕೊಂಡಿದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ. ಕಳೆದ ವರ್ಷ ಒಟ್ಟು 37.93 ಲಕ್ಷ ಕಾರುಗಳು ಮಾರಾಟವಾಗಿದ್ದು, 2021ಕ್ಕೆ ಹೋಲಿಸಿದರೆ ಶೇ. 23ರಷ್ಟು ಹೆಚ್ಚಳವಾಗಿದೆ. ವಿಶೇಷವೆಂದರೆ  ಕ್ಯಾಲೆಂಡರ್‌ ವರ್ಷವೊಂದರಲ್ಲಿ ಈ ಪ್ರಮಾಣದ ಮಾರಾಟ ಇದೇ ಮೊದಲು ಎಂದು ಮಾರುತಿ ಸುಜುಕಿ ಇಂಡಿಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೆಮಿಕಂಡಕ್ಟರ್‌ ಚಿಪ್‌ ಕೊರತೆಯ ನಡುವೆಯೂ ಈ ಪ್ರಮಾಣದಲ್ಲಿ ಮಾರಾಟವಾಗಿರುವುದು ದೊಡ್ಡ ಸಾಧನೆ.

ಜಿಎಸ್‌ಟಿ ಸಂಗ್ರಹ ಶೇ. 15 ಏರಿಕೆ
ಡಿಸೆಂಬರ್‌ ತಿಂಗಳಲ್ಲಿ ದೇಶದ ಜಿಎಸ್‌ಟಿ ಸಂಗ್ರಹ ಏರಿದೆ. 2021ರ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 15ರಷ್ಟು ಅಧಿಕ. 2022ರ ಡಿಸೆಂಬರ್‌ನಲ್ಲಿ ಸಂಗ್ರಹವಾದ ದೇಶದ ಸರಕು ಮತ್ತು ಸೇವಾ ತೆರಿಗೆ 1.49 ಲಕ್ಷ ಕೋಟಿ ರೂ.ಗಳು.

ಹಬ್ಬದ ಋತು ಮತ್ತು ಆರ್ಥಿಕ ಪುನಶ್ಚೇತನಕ್ಕೆ ಮಾರುಕಟ್ಟೆ ಸ್ಪಂದಿಸಿರುವ ಪರಿಣಾಮ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಸರಕಾರದ ದಾಖಲೆಗಳು ಹೇಳಿವೆ. ನವೆಂಬರ್‌ ನಲ್ಲಿ 1.46 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

Advertisement

ಕಾರ್ಪೊರೇಟ್‌ ತೆರಿಗೆ ಹೆಚ್ಚಳ
ದೇಶದಲ್ಲಿ ಕಾರ್ಪೊರೇಟ್‌ ತೆರಿಗೆ ಸಂಗ್ರಹವೂ ಏರಿದೆ. ಎರಡು ವರ್ಷಗಳ ಬಳಿಕ ದೇಶದ ಜಿಡಿಪಿಯ ಶೇ. 3ರಷ್ಟನ್ನು ಮೀರಿದೆ. 2021-22ನೇ ಸಾಲಿನಲ್ಲಿ ಸಂಗ್ರಹವಾದ ಕಾರ್ಪೊರೇಟ್‌ ತೆರಿಗೆ 7.12 ಲಕ್ಷ ಕೋಟಿ ರೂ. ಸದ್ಯದ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಜಿಡಿಪಿಯ ಮೌಲ್ಯ 236.64 ಲಕ್ಷ ಕೋಟಿ ರೂ.ಗಳಾಗಿದೆ. ಹೀಗಾಗಿ 7.12 ಲಕ್ಷ ಕೋಟಿ ರೂ. ಎಂದರೆ ಶೇ. 3ರಷ್ಟನ್ನು ದಾಟುತ್ತದೆ. ಇದು 2 ವರ್ಷಗಳ ದಾಖಲೆಯಾಗಿದೆ.

ಆದರೆ 2018-19ರಲ್ಲಿ 6.63 ಲಕ್ಷ ಕೋಟಿ ರೂ. ಕಾರ್ಪೊರೇಟ್‌ ತೆರಿಗೆ ಸಂಗ್ರಹವಾಗಿದ್ದು, ಆಗಿನ ಜಿಡಿಪಿ ಮೌಲ್ಯದ ಪ್ರಕಾರ ಇದು ಶೇ.3.51ರಷ್ಟಾಗಿತ್ತು. ಸದ್ಯಕ್ಕೆ ಇದುವೇ ದಾಖಲೆಯಾಗಿದೆ.

ಅಬಕಾರಿ ಇಲಾಖೆಗೆ ಭರ್ಜರಿ ಆದಾಯ
ಬೆಂಗಳೂರು: ಡಿ. 23ರಿಂದ ಡಿ. 31ರ ವರೆಗೆ 1,262 ಕೋಟಿ ರೂ. ಮೌಲ್ಯದ 20.66 ಲಕ್ಷ ಲೀ. ಐಎಂಎಲ್‌ ಮದ್ಯ ಮಾರಾಟವಾಗಿದೆ. ಈ ಪೈಕಿ 15.4 ಲಕ್ಷ ಲೀಟರ್‌ ಬಿಯರ್‌ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ಕರ್ನಾಟಕಕ್ಕೆ 2ನೇ ಸ್ಥಾನ
ಅತ್ಯಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಡಿಸೆಂಬರ್‌ ತಿಂಗಳಲ್ಲಿ 23,598 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ 10,061 ಕೋ.ರೂ. ಜಿಎಸ್‌ಟಿ ಸಂಗ್ರಹವಾಗಿದೆ. 2021ರ ಡಿಸೆಂಬರ್‌ಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಶೇ. 20, ಕರ್ನಾಟಕದಲ್ಲಿ ಶೇ. 21ರಷ್ಟು ಹೆಚ್ಚಳವಾಗಿದೆ. ಮೂರನೇ ಸ್ಥಾನದಲ್ಲಿ ಗುಜರಾತ್‌ ಇದ್ದು, ಇಲ್ಲಿ 9,238 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next