Advertisement

ದೊಡ್ಡ ರಜೆಯ ಆಲಾಪಗಳು

07:30 AM Apr 15, 2018 | |

ಇದೀಗ ಬೇಸಿಗೆ ಶಿಬಿರಗಳ ಕಾಲ. ಮಕ್ಕಳು ಮತ್ತದೇ ಚೀಲ-ಬುತ್ತಿ ಬಗಲಿಗೇರಿಸಿ ಶಿಬಿರ ತಾಣಗಳತ್ತ ನಡೆಯುತ್ತಿದ್ದಾರೆ. ಕೆಲವೆಡೆ ಸ-ನಿವಾಸ ಶಿಬಿರಗಳಿವೆ. ಅಂದರೆ, ರಜೆಯಲ್ಲಿಯೂ ಮನೆಯಿಂದ ದೂರವೇ. ಕಾಲ ಬದಲಾಗಿದೆ. “ಬೇಸಿಗೆ ಶಿಬಿರ’ಗಳನ್ನು ಬೇಡವೆನ್ನುವಂತಿಲ್ಲ. ಮನೆಯಲ್ಲಿ ಅಪ್ಪ -ಅಮ್ಮ ಬಿಡುವಿಲ್ಲದ ಉದ್ಯೋಗಿಗಳು. ಒಂದೆರಡು ಮಕ್ಕಳಿರುವ ಮನೆಗಳಲ್ಲಿ ಆಡಲು ಜತೆಗಾರರಿಲ್ಲ. ಅಜ್ಜ-ಅಜ್ಜಿ ಊರಲ್ಲಿಯೇ ಉಳಿದಿದ್ದಾರೆ. ಇಂದಿನ ಮಕ್ಕಳು ತಾವಿರುವ ಕಾಲಕ್ಕಿಂತ ಬಹಳ ಮುಂದೆ ಯೋಚಿಸುವುದರಿಂದ ಅಜ್ಜ-ಅಜ್ಜಿಯರೊಂದಿಗೆ ಆಡುವ ಮನೋಸ್ಥಿತಿಯಲ್ಲಿಯೂ ಇಲ್ಲ. ಹಾಗಾಗಿ, ಶಾಲೆಗೆ ರಜೆ ಶುರುವಾಗುವಾಗ ಹೆತ್ತವರಿಗೆ ತಲೆನೋವು ಆರಂಭವಾಗುತ್ತದೆ. ಅಂಥ ತಲೆನೋವನ್ನು ನಿವಾರಿಸಲೆಂಬಂತೆ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿವೆ. 


ಬೇಸಿಗೆ ಶಿಬಿರಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಕ್ರಿಯಾಶೀಲ ಚಿಂತನೆಯನ್ನು ನಡೆಸಬೇಕಾದ ಅಗತ್ಯ ಇಂದು ಇದೆ. ಇಂಥ ಶಿಬಿರಗಳಲ್ಲಿ ಶಾಲೆಯ ಶಿಸ್ತಿನಿಂದ ಹೊರತಾಗಿ ಮಕ್ಕಳನ್ನು ಇರಗೊಡುವುದು ಬಹಳ ಮುಖ್ಯ. ಇಲ್ಲಿ ಚಿತ್ರಕಲೆ, ಸಂಗೀತಕಲೆಗಳನ್ನು ಕಲಿಸಬಾರದೆಂದೇನೂ ಅಲ್ಲ. ಆದರೆ, ಅದು ಮತ್ತೆ ಚೌಕಟ್ಟಿನೊಳಗಿನ ಕಲಿಕೆಯೇ ಆಗುತ್ತದೆ. ಗಿಡಮರಗಳನ್ನು ಪರಿಚಯಿಸಿಕೊಳ್ಳುವುದು, ಹೂಗಳೊಂದಿಗೆ ಮೌನವಾಗಿ ಸಂಭಾಷಿಸುವುದು, ಹಣ್ಣುಗಳನ್ನು ತಾವೇ ಕೊಯ್ದು ತಿನ್ನುವುದು, ಹಕ್ಕಿಗಳ ಕೂಜನವನ್ನು ಆಲಿಸಿ ಅವುಗಳನ್ನು ಗುರುತಿಸುವುದು ಹೀಗೆ ಪ್ರಕೃತಿಯೊಂದಿಗೆ ಒಡನಾಡುವ ಅವಕಾಶವನ್ನು ಮಕ್ಕಳಿಗೆ ಕಲ್ಪಿಸುವಂತಾದರೆ ಉತ್ತಮ. 

Advertisement

ಇಂದಿನ ಮಕ್ಕಳಿಗೆ ಶಾಲೆಯ ಸಿಲೆಬಸ್‌ನಲ್ಲಿ ಸಂಕೀರ್ಣವಾದ ಪಾಠಗಳಿವೆ. ಪಿಯುಸಿಯಲ್ಲಿರುವ ಪಾಠಗಳನ್ನು ಏಳನೆಯ ತರಗತಿಯಲ್ಲಿಯೇ ಕಲಿಯುತ್ತಿದ್ದಾರೇನೋ ಎಂದು ಭಾಸವಾಗುವಂತೆ ಭಾರವಾಗಿರುವ ಪಠ್ಯಪುಸ್ತಕಗಳನ್ನು ಹೊತ್ತುಕೊಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಶನಿವಾರ-ಭಾನುವಾರಗಳಲ್ಲಿ ಪಟ್ಟಣದ ಮಕ್ಕಳಿಗೆ ಚಿತ್ರ-ನೃತ್ಯ-ಸಂಗೀತ-ಕರಾಟೆ-ಗಿಟಾರು ಹೀಗೆ ನಾನಾ ನಮೂನೆಯ ತರಗತಿಗಳಿವೆ. ಈಗೀಗ ಹಳ್ಳಿಗಳಲ್ಲಿಯೂ ವಾರದ ಒಂದು ದಿನ ಕಲಾತರಬೇತಿ ಇರುವುದಿದೆ. ಇವೆಲ್ಲದರ ನಡುವೆ ಮಕ್ಕಳಿಗೆ “ಬದುಕುವ ಕಲೆ’ಯನ್ನು ಕಲಿಸುವವರು ಯಾರೂ ಇಲ್ಲವಾಗಿದ್ದಾರೆ. ಸಣ್ಣಉಳಿತಾಯ, ಸೂಕ್ಷ್ಮ ಬಳಕೆ, ಜೀವನಪ್ರೀತಿ, ಸ್ನೇಹಶೀಲತೆ, ನಿಸರ್ಗಪ್ರೇಮ- ಮುಂತಾದ ಜೀವನಕಲೆಗಳನ್ನು  ಕಲಿಸುವಲ್ಲಿ ಬೇಸಿಗೆಶಿಬಿರಗಳು ಸಕ್ರಿಯವಾಗಬೇಕಿವೆ. ಮೊಬೈಲ್‌, ಟಿ. ವಿ.ಗಳಲ್ಲಿ ಮುಳುಗಿರುವ ಮಕ್ಕಳನ್ನು ಕೆಲವು ದಿನಗಳಾದರೂ ಆ ಗುಂಗಿನಿಂದ ಹೊರತರುವಲ್ಲಿ ಬೇಸಿಗೆ ಶಿಬಿರಗಳು ಯಶಸ್ವಿಯಾದರೆ ಅದೂ ದೊಡ್ಡದೇ. 

“ದೊಡ್ಡ ರಜೆ’ಯ ಸಂಭ್ರಮವನ್ನು ಬೇಸಿಗೆ ಶಿಬಿರಗಳ ಮೂಲಕ ಹೇಗೆ ಇನ್ನಷ್ಟು “ದೊಡ್ಡ’ದಾಗಿಸಿಕೊಳ್ಳಬಹುದು ಎಂಬುದು ಇಲ್ಲಿರುವ ಲೇಖನದ ಆಶಯ.

ಅದು ನಮಗೆ ದೊಡ್ಡ  ರಜೆ. ಬೇಸಗೆಯ ರಜೆಯನ್ನು ದೊಡ್ಡರಜೆ ಎಂದೇ ಕರೆದವರು ನಾವು. ದೊಡ್ಡ ಪರೀಕ್ಷೆ ಎಂದರೆ ವರ್ಷದ ಕೊನೆಯ ಪರೀಕ್ಷೆ. ಈ ದೊಡ್ಡ ಪರೀಕ್ಷೆ ಮುಗಿದು, ರಿಸಲ್ಟ್ ಬಂತು ಎಂದರೆ ಆಹಾ! ದೊಡ್ಡ ರಜೆ! ಅದು ಇಂಥ ಕ್ಲಾಸು ಪಾಸಾಗಿ ಇಂಥ ಕ್ಲಾಸಿಗೆ ಹೋಗುವ ಮಧ್ಯಂತರ ಅವಧಿ. ತುಸು ದೀರ್ಘ‌ ರಜೆಯಾಗಿ ಸಂಬಂಧಿಕರ ಮನೆಗೋ ಅಜ್ಜನ ಮನೆಗೋ ಹೋಗಿ ಬರುವ ಸಮಯ. ಆಗೆಲ್ಲ ಮಕ್ಕಳನ್ನು ಅಪ್ಪ ಅಮ್ಮ ಪ್ರವಾಸಕ್ಕೆಂತ ಕರೆದುಕೊಂಡು ಹೋಗುವುದು ಕಡಿಮೆ. ಏನಿದ್ದರೂ ನೆಂಟರ ಮನೆಯೊಳಗಿನ ತಿರುಗಾಟ. ಆಟ, ಸುತ್ತಾಟ ಅಷ್ಟೆ. ಅದಕ್ಕೆ ಸರಿಯಾಗಿ ಹೆಚ್ಚಾಗಿ ಬೇಸಗೆಯ ರಜೆಯಲ್ಲಿಯೇ ಮದುವೆ ಮುಂಜಿ ನಡೆಯುವುದು, (ಮದುವೆ-ಮುಂಜಿ ಇರಲಿ ಬಿಡಲಿ, ಮಕ್ಕಳ ದಂಡು ಅಜ್ಜನ ಮನೆಗೆ ಬಂದೇ ಬರುವುದು) ಮನೆಯಂಗಳದಲ್ಲಿಯೇ ನಡೆಯುವುದು, ಅದಕ್ಕಾಗಿ ನಾಕೆಂಟು ದಿನ ಮೊದಲೇ ನೆಂಟರಿಷ್ಟರು, ದೂರದೂರಿನಲ್ಲಿ ನೆಲೆಸಿರುವ ಮನೆ ಮಕ್ಕಳು ಮೊಮ್ಮಕ್ಕಳು, ಎಲ್ಲ ಮೂಲಮನೆ ಸೇರುವರು. ಸಮಾರಂಭ ಮುಗಿದ ಮೇಲೆಯೂ ಎಂಟು-ಹತ್ತು ದಿನ ಉಳಿದು, ಮನಸಾರೆ ನಕ್ಕು ನಲಿದು ಸುಖ-ದುಃಖ ವಿನಿಮಯ ಮಾಡಿಕೊಂಡು ನಿಧಾನವಾಗಿ ತಂತಮ್ಮ ಮನೆಗಳಿಗೆ ತೆರಳುವರು. ಹಿರಿಯರೊಂದಿಗೆ ಅವರ ಮಕ್ಕಳೂ ಬರುವರಾಗಿ ಮನೆ ಮಕ್ಕಳ ಜಗತ್ತು ಇದ್ದಕ್ಕಿದ್ದಂತೆ ದೊಡ್ಡದಾಗುವುದು. ಅದರಲ್ಲಿ ಅಕ್ಕಪಕ್ಕದ ಮಕ್ಕಳ ದಂಡೂ ಸೇರುವುದು. ಆಟ ತಿರುಗಾಟದಲ್ಲಿ ಬೆವರುನೀರು ಬಿಸಿಯೇರಿ ಹರಿದು ಹೋದರೂ ಗಮನವೇ ಇಲ್ಲದೆ, ಸೆಕೆ ಎಂದರೆ ಏನೆಂದೇ ತಿಳಿಯದೆ, ದಿನರಾತ್ರಿಗಳು ಕತೆ ಹಾಡು ನಾಟಕಗಳ ರೆಕ್ಕೆಯೊಡೆದು ಕಿಲಕಿಲ ಕಲಕಲಗಳಲ್ಲಿ ವಿಹರಿಸುವವು. ಹೀಗೆ ಎಷ್ಟು ಬೇಗ ರಜೆ  ಕಳೆದು ಹೋಗುವುದು! ಕಳೆದು ಹೋಗಿ¨ªೆ ತಿಳಿಯದೆ! ರಜೆ ಮುಗಿದು ಎಲ್ಲರೂ ಹೊರಟು ನಿಂತಾಗಷ್ಟೇ ಅದರ ಅರಿವಾಗುವುದು. ಪರಸ್ಪರ ಅಗಲುವ ದಿನ ಕಣ್ಣಲ್ಲಿ ನೀರ್ತುಂಬುವುದು. “ರಜೆ ರಜೆ ನೀರುಳ್ಳಿ ಬಜೆ ರಜೆ ರಜೆ ಬಂಗಿ ಬಜೆ’ ಗಳಂಥ ಹಿಂದೆ-ಮುಂದಿಲ್ಲದ ಹತ್ತು ಹಲವು ಖುಷಿನುಡಿಗಳನ್ನು ಉಲಿಯುತ್ತ ಗೊತ್ತುಗುರಿಯಿಲ್ಲದ ಹಾರಿದ ಬಾಲ್ಯದ ರೆಕ್ಕೆ ನಿಧಾನವಾಗಿ ಮುದುಡುವುದು, ಶಾಲೆಯ ನೆನಪಾಗುವುದು.  

ಅದು ನಿಜವಾಗಿಯೂ ರಜೆ, ದೊಡ್ಡವರ ಜೊತೆಗೆ, ಸಣ್ಣವರ ಸಂಗಡ, ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ, ಅತ್ತೆ ಮಾವ, ತಂಗಿ ತಮ್ಮ ಅಣ್ಣ ಅಕ್ಕ, ಆಚೆಮನೆ ಈಚೆಮನೆ ಕೆಳಮನೆ ಮೇಲ್ಮನೆ, ಹೊರ ಜಗತ್ತು ಒಳ ಜಗತ್ತು ಊಟ ತಿಂಡಿ ಹಾಡಿ ಕಾಡು ಬೆಟ್ಟ ಗುಡ್ಡಗಳ ಆಟ ಓಟ ಹಾಡು ಹಾಡು, ಹಹಹ ಹುಹುಹು, ಜಗಳ ರಾಜಿ, ಗೋರ, ನೀರುಕೊಟ್ಲೆ, ಜ್ವರ, ಮಾವಿನ ಕಾಯಿ, ಹಲಸಿನ ಹಣ್ಣು…ಹಪ್ಪಳ, ಸೆಂಡಿಗೆ, ಹಸಿಹಿಟ್ಟು, ಕಾಗೆ ಕಾವಲು  ಒಟ್ಟಿನಲ್ಲಿ ಬಣ್ಣ ಬಣ್ಣದ, ಅದ್ಭುತವೆಂಬ ಗೋಚರವೇ ಆಗದಂತೆ ಅದ್ಭುತ ಅನುಭವಗಳು ಮನಸ್ಸಿನ ಮಜ್ಜೆಯೊಳಗೆ ಇಳಿದು ಅಂತರ್‌ ವ್ಯಕ್ತಿತ್ವವನ್ನು ರೂಪಿಸುವ ರಜೆ. ಎಂತಲೆ ಅದು ನಿಜಅರ್ಥದಲ್ಲಿಯೂ ದೊಡ್ಡ ರಜೆ. ಇತ್ತೀಚಿನ ವರೆಗೂ ನಾನು ಕಂಡಂತೆ, ಎಂದರೆ ನನ್ನ ಮಕ್ಕಳ ಕಾಲದಲ್ಲಿಯೂ, ಹಾಗೆಯೇ ಇತ್ತು. ಆದರೆ, ನೋಡನೋಡುತಿದ್ದಂತೆ ಕಾಲದ ಸ್ವರೂಪ ಬದಲಾಗಿದೆ. ತಂದೆ-ತಾಯಿ ಇಬ್ಬರೂ ಉದ್ಯೋಗಕ್ಕೆ ಹೋಗುವ ವಿಚಾರ ಸಾಮಾನ್ಯವಾಗಿದೆ. ದೊಡ್ಡ ಕುಟುಂಬಗಳು ಒಡೆದು ಹೋಗಿವೆ. ಕೇವಲ ಒಂದು ಅಥವಾ ಎರಡು ಮಕ್ಕಳ ಸಣ್ಣ ಸಣ್ಣ ಕುಟುಂಬಗಳಲ್ಲಿ  ಮಕ್ಕಳು ಇಷ್ಟೊಂದು ರಜೆಯನ್ನು ಏನು ಮಾಡಬೇಕು? ಹೇಗೆ ಕಳೆಯಬೇಕು? ಹೆತ್ತವರಾದರೂ ಮಕ್ಕಳೊಂದಿಗೆ ರಜೆ ಹಾಕಲು ಎಷ್ಟು ಸಾಧ್ಯ? ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವರೆ? ಟಿ ವಿ, ಮೊಬೈಲ್‌, ಕಂಪ್ಯೂಟರ್‌ ನಲ್ಲಿ ಬೇಕಾದ್ದು ಬೇಡಾದ್ದು ಎಲ್ಲವೂ ನೋಡುತ್ತ ಮೈ ಮರೆಯುತ್ತವೆ. ಅದೆಲ್ಲ ಬೇಡ, ಒಳ್ಳೆಯದಲ್ಲ. ಸರಿ, ಹಾಗಾದರೆ,  ಕಳಿಸುವುದಾದರೂ ಎಲ್ಲಿಗೆ? ಯಾವ ಅಜ್ಜನ ಮನೆಗೆ? ಅಜ್ಜನ ಮನೆಯೆಂಬುದು ಕೇವಲ ರಮ್ಯಕಲ್ಪನೆಯಾಗಿ ಹೋಯಿತೆ! 

Advertisement

ಎಂದ ಮೇಲೆ ಆ ಪರಿಕಲ್ಪನೆಗೆ ಬೇರೆ ರೂಪ ಕೊಡಬೇಕಾಯಿತು. ಬೇಸಗೆ ಶಿಬಿರಗಳು ಆರಂಭವಾದವು. ವಿವಿಧ ಆಶಯಗಳೊಂದಿಗೆ ಬೇಸಗೆ ಶಿಬಿರಗಳು ಮಕ್ಕಳನ್ನು ಕರೆವವು. ರಜೆಯನ್ನು ಕಳೆಯಿಸುವವು. ರಜಾ ಸಜಾ ಎಂದ ತಂದೆತಾಯಿಯರ ಮನಸ್ಸು ತುಸು ಮಟ್ಟಿಗೆ ಹಗುರಗೊಳಿಸುವ‌ವು. 

ಅವು-
ಹಿರಿಯರೊಡನೆ ಮಕ್ಕಳ ಅನುಸಂಧಾನ ಮಾಡಿಸಲು- ಹಾಡಿ ಹಕ್ಕಲು ಕಾಡು ಗುಡ್ಡ ಬೆಟ್ಟ ನದಿ ಕಡಲು ತಿರುಗಾಡಿಸಿ ನಿಸರ್ಗದೊಂದಿಗೆ ನೇರ ಸಂವಹನೆಗೆ ಎಡೆ ಮಾಡಲು- ಪರಸ್ಪರ ಬೆರೆಯಲು ಜಗಳಾಡಲು, ರಾಜಿಯಾಗಲು-ಹಾಡಲು, ಕತೆ ಹೇಳಲು ಕೇಳಲು, ಚಿತ್ರ ಬರೆಯಲು, ಚಿತ್ರ ಕಾಣಲು, ನಾಟಕಗಳಲ್ಲಿ ಪಾತ್ರಗಳಾಗಿ ನಲಿಯಲು- ನಾನು ನನ್ನವರು ಎಂಬಲ್ಲಿ ನಾವು ನಮ್ಮವರು ಎಂಬ ಭಾವ ಬಿತ್ತಲು- ನೀಚ ಉಚ್ಚಗಳ ಯಥಾರ್ಥಗಳನ್ನು ಅನಾಹುತಗಳನ್ನು ಸರಳವಾಗಿ, ಉಪದೇಶವೆನಿಸದಂತೆ,  ತಿಳಿಹೇಳಲು- 
ಜಾತಿ-ಮತ-ಧರ್ಮಗಳನ್ನು ನೋಡುವ ಅರಿಯುವ ಆರೋಗ್ಯಕರ ದೃಷ್ಟಿಯನ್ನು ಅವರಿಗೆ ಜೀರ್ಣವಾಗುವ ಪರಿಯಲ್ಲೇ ಲವಲವಿಕೆಯ ಚೌಕಟ್ಟಿನಲ್ಲಿ ವಿವರಿಸಿ ಒಂದು ಗಟ್ಟಿ ಪೀಠಿಕೆ ನೀಡಲು-  

ಒಟ್ಟಿನಲ್ಲಿ ಯಾವ ರಕ್ತ ಸಂಬಂಧವೂ ಇಲ್ಲದ ಒಂದಷ್ಟು ಮಕ್ಕಳು ಸಂಬಂಧಿಕರಂತೆಯೇ ಒಂದಾಗಿ ಒಮ್ಮನತೆ ಬೆಳೆಸಿಕೊಳ್ಳುವ ದಾರಿಯನ್ನು ಆಟೋಟ ಹುಡುಗಾಟದ ಮೂಲಕವೇ ಉದ್ಘಾಟಿಸುವ ಒಂದು ಸಹಜ ಉಪಾಯವಾಗಿ ಈ ಶಿಬಿರಗಳು ನಡೆಯುತ್ತವೆಯೇ- 
ಅಂತಾದರೆ ಸೈ. 
ನಾಳೆಗೊಂದು ಆಸೆಯಿದೆ. 

ವೈದೇಹಿ
ಫೊಟೊ: ಗ. ಮ. ತುಂಬೇಮನೆ

Advertisement

Udayavani is now on Telegram. Click here to join our channel and stay updated with the latest news.

Next