ಸಿರಿಯಾದಲ್ಲಿ ನಡೆದ ರಾಸಾಯನಿಕ ಅಸ್ತ್ರದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಅಮೆರಿಕದ ಕ್ಷಿಪಣಿ ದಾಳಿ ಆತಂಕ ಹುಟ್ಟಿಸಿದೆ. ಭೂಮಿ ಬಿಸಿಯೇರಿಕೆಯಂತಹ ಪ್ರಾಕೃತಿಕ ಸವಾಲುಗಳೇ ಮನುಕುಲದ ಎದುರಿರುವಾಗ ಇನ್ನೊಂದು ಯುದ್ಧವನ್ನು ಕಾಣಲು ಯಾರೂ ತಯಾರಿಲ್ಲ.
ಸಿರಿಯಾದ ಶಯತ್ ವೈಮಾನಿಕ ನೆಲೆಯ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸುವುದರೊಂದಿಗೆ ಕಳೆದ ಏಳು ವರ್ಷದಿಂದೀಚೆಗೆ ಈ ಮಧ್ಯಪೂರ್ವ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಕಲಹ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಸರ್ವಾಧಿಕಾರಿ ಬಷರ್ ಅಲ್ ಅಸಾದ್ ತನ್ನದೇ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ತಕ್ಕ ಶಾಸ್ತಿ ಮಾಡಲು ಕ್ಷಿಪಣಿ ದಾಳಿ ಪ್ರಾರಂಭಿಸಿದ್ದೇನೆ ಎಂದು ಅಮೆರಿಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದ ಸೇನೆ ನಡೆಸುತ್ತಿರುವ ಪ್ರಮುಖ ಕಾರ್ಯಾಚರಣೆಯಿದು. ಹಿಂದಿನ ಅಧ್ಯಕ್ಷ ಒಬಾಮ ಆಗಾಗ ಸಿರಿಯಾ ವಿರುದ್ಧ ಗುಡುಗು ಹಾಕುಧಿತ್ತಿದ್ದರೂ ದಾಳಿ ನಡೆಸುವ ಸಾಹಸಕ್ಕೆ ಮುಂದಾಗಿರಲಿಲ್ಲ. ಆದರೆ ಟ್ರಂಪ್ ಸಿರಿಯಾದಲ್ಲಿ ನಡೆಯುತ್ತಿರುವ ನರಹತ್ಯೆಯನ್ನು ಇನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದು ಹೇಳಿ ದಾಳಿಗೆ ಆದೇಶ ನೀಡಿದ್ದಾರೆ.
ಅಸಾದ್ ಸೇನೆ ಬಂಡುಧಿಕೋರರ ಹಿಡಿತದಲ್ಲಿರುವ ಖಾನ್ ಶೆಖೋನ್ ನಗರದ ಮೇಲೆ ಏ.4ರಂದು ರಾಸಾಯನಿಕಅಸ್ತ್ರಧಿಗಳ ಮೂಲಕ ದಾಳಿ ಮಾಡಿದ್ದೇ ಅಮೆರಿಕ, ಸಿರಿಯಾದ ಮೇಲೆ ದಾಳಿ ಮಾಡಲು ನೆಪವಾಗಿದೆ. ರಾಸಾಯನಿಕ ದಾಳಿಯಲ್ಲಿ 80ಕ್ಕೂ ಹೆಚ್ಚು ಜನರು ಮಡಿದಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸುತ್ತಿವೆ. ರಾಸಾಧಿಯನಿಕದಿಂದ ಉಸಿರುಕಟ್ಟಿ ಸತ್ತಿರುವ ಮಕ್ಕಳ ದೃಶ್ಯವನ್ನು ನೋಡಿದರೆ ಮನಸ್ಸು ಕರಗುತ್ತದೆ. ಅಸಾದ್ ದುರಾಡಳಿತವನ್ನು ಅಂತ್ಯ ಕಾಣಿಸುವುದೇ ಇದಕ್ಕಿರುವ ಪರಿಹಾರ ಎಂದು ಘೋಷಿಸಿದ್ದಾರೆ ಟ್ರಂಪ್.
ಸಿರಿಯಾದ ಸ್ನೇಹಿತ ವಲಯದಲ್ಲಿರುವ ರಶ್ಯಾ ಮತ್ತು ಇರಾನ್ ಸಹಜವಾಗಿಯೇ ಅಮೆರಿಕದ ದಾಳಿಯನ್ನು ಖಂಡಿಸಿವೆ. ಚೀನ ಅತ್ತ ವಿರೋಧವೂ ಅಲ್ಲದ ಇತ್ತ ಬೆಂಬಲವೂ ಅಲ್ಲದ ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದರೆ, ಜಗತ್ತಿನ ಬಹುತೇಕ ಬಲಿಷ್ಠ ದೇಶಗಳೆಲ್ಲ ಅಮೆರಿಕದ ಬೆಂಬಲಕ್ಕೆ ನಿಂತಿವೆ. ಅಸಾದ್ ಸರಕಾರ ರಾಸಾಯನಿಕ ಅಸ್ತ್ರದ ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. 2013ರಲ್ಲಿ ನಡೆಸಿದ ದಾಳಿಗೆ ಸುಮಾರು 1,400 ಜನರು ಬಲಿಯಾಗಿದ್ದರು. ಆಗಲೂ ಅಮೆರಿಕದ ಮೇಲೆ ಈ ದೌರ್ಜನ್ಯವನ್ನು ಕೊನೆಗಾಣಿಸಲು ಅಪಾರ ಒತ್ತಡ ಇದ್ದರೂ ಒಬಾಮ ಅಭೂತಪೂರ್ವ ಸಂಯಮ ಮೆರೆದಿದ್ದರು. ಆದರೆ ಟ್ರಂಪ್ ಒಂದೇ ಪ್ರಚೋದನೆಗೆ ಕ್ಷಿಪ್ರವಾಗಿ ಪ್ರತ್ಯುತ್ತರ ನೀಡುವ ಮೂಲಕ ತನ್ನ ಹಾದಿ ಹಿಂದಿನ ಅಧ್ಯಕ್ಷರದ್ದಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಸಿರಿಯಾ ಎನ್ನುವ ಪುಟ್ಟ ದೇಶ ಹುಟ್ಟಿದ್ದೇ ಸಂಘರ್ಷದ ಬೆಂಕಿಯಲ್ಲಿ. 2011ರಲ್ಲಿ ಅರಬ್ ದೇಶಗಳಲ್ಲಿ ಹೊತ್ತಿಕೊಂಡ ಆಂತರಿಕ ಕಲಹ ಸಿರಿಯಾದಲ್ಲಿನ್ನೂ ಧಗಧಗಿಸುತ್ತಿದೆ. ಸರ್ವಾಧಿಕಾರಿ ಅಸಾದ್ ಇಷ್ಟರತನಕ ಈ ವಿರೋಧವನ್ನು ನಿರ್ದಯವಾಗಿ ದಮನಿಸಿ ಮೆರೆಯುತ್ತಿದ್ದಾರೆ. ರಶ್ಯಾ ಮತ್ತು ಇರಾನ್ ಬೆಂಬಲ ಅವರ ಬಲವನ್ನು ಹೆಚ್ಚಿಸಿದೆ. ಕುರ್ದಿಶ್ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್, ಸಲಾಫಿ ಜಿಹಾದಿ ಗುಂಪುಗಳು ಸೇರಿದಂತೆ ಹಲವು ಗುಂಪುಗಳು ಫ್ರೀ ಸಿರಿಯನ್ ಆರ್ಮಿಯಡಿ ಸೇರಿಕೊಂಡು ಅಸಾದ್ ವಿರುದ್ಧ ಹೋರಾಡುತ್ತಿವೆ. 1946ರಲ್ಲಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿರುವ ಸಿರಿಯಾಕ್ಕೆ ದಂಗೆಗಳು ಹೊಸತಲ್ಲ. 1954ರಲ್ಲಿ ನಡೆದ ಬೃಹತ್ ದಂಗೆಯ ಪರಿಣಾಮವಾಗಿ ದೇಶದ ಆಡಳಿತ ಸೇನೆಯ ಕೈಯಿಂದ ಪ್ರಜಾಪ್ರಭುತ್ವಾತ್ಮಕವಾಗಿ ಆಯ್ಕೆಯಾದ ಸರಕಾರದ ಕೈಗೆ ವರ್ಗವಾಗಿತ್ತು. ಆದರೆ ಈ ಸರಕಾರ ಅಲ್ಪಾಯುಷಿಯಾಗಿತ್ತು. ಅನಂತರವೂ ಹಲವು ದಂಗೆಗಳು ನಡೆದು ಅಂತಿಮವಾಗಿ 1971ರಲ್ಲಿ ಹಾಫೆಜ್ ಅಲ್ ಅಸಾದ್ ಅಧ್ಯಕ್ಷನೆಂದು ಸ್ವಯಂ ಘೋಷಿಸಿಕೊಂಡು ಆಡಳಿತ ಚುಕ್ಕಾಣಿ ಹಿಡಿದರು. 2000ರಲ್ಲಿ ಅವರು ತೀರಿಕೊಂಡ ಬಳಿಕ ಅವರ ಮಗ ಅಧ್ಯಕ್ಷರಾದರು. ಅವರೇ ಈಗಿನ ಸರ್ವಾಧಿಕಾರಿ ಬಷರ್ ಅಲ್ ಅಸಾದ್. 17 ವರ್ಷಗಳಿಂದ ನಡೆದಿದೆ ಅಸಾದ್‌ರ ನಿರ್ದಯಿ ಸರ್ವಾಧಿಕಾರ. ಈ ಅವಧಿಯಲ್ಲಿ ಕನಿಷ್ಠ 4 ಲಕ್ಷ ನಾಗರಿಕರ ಹತ್ಯೆಯಾಗಿದೆ ಎಂದು ಮಾನವಾಧಿಕಾರ ಸಂಘಟನೆಗಳು ಹೇಳುತ್ತಿವೆ. ಜಗತ್ತು ಅನೇಕ ಸರ್ವಾಧಿಕಾರಿಗಳನ್ನು ಕಂಡಿದೆ. ಪ್ರತಿ ಸರ್ವಾಧಿಧಿಕಾರಿಯ ಅವಸಾನವೂ ದುರಂತಮಯವಾಗಿತ್ತು. ಈ ಎಲ್ಲ ವಿಷಯಗಳು ತಿಳಿದಿದ್ದರೂ ಅಸಾದ್ ಮಣಿಯುವುದಕ್ಕೆ ತಯಾರಿಲ್ಲ. ಸಮೂಹ ನಾಶದ ಅಸ್ತ್ರವನ್ನು ಇಟ್ಟುಕೊಂಡ ಯಾವ ದೇಶವೂ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಪ್ರಪಂಚದಾದ್ಯಂತ ಸಾವಿರಾರು ಉದಾಹರಣೆಗಳು ಸಿಗುತ್ತಿವೆ. ಆದರೆ ಯಾವ ದೇಶವೂ ಇದರಿಂದ ಪಾಠ ಕಲಿಯುತ್ತಿಲ್ಲ ಎನ್ನುವುದೇ ದುರಂತ.